ಭ್ರೂಣಲಿಂಗ ಪತ್ತೆ: ಗೋಕಾಕದ ಇಕ್ರಾ ಹೆರಿಗೆ ಆಸ್ಪತ್ರೆ ಸೀಜ್‌

KannadaprabhaNewsNetwork | Published : Jul 17, 2024 12:47 AM

ಸಾರಾಂಶ

ಅನಧಿಕೃತವಾಗಿ ಭ್ರೂಣಲಿಂಗ ಪತ್ತೆ ಮಾಡುತ್ತಿದ್ದ ನಗರದ ಖಾಸಗಿ ಆಸ್ಪತ್ರೆ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಸೋಮವಾರ ದಾಳಿ ಮಾಡಿ ಭ್ರೂಣ ಪತ್ತೆ ಮಾಡುವ ಮಷಿನ್ ಸೇರಿದಂತೆ ಆಸ್ಪತ್ರೆಯನ್ನು ಸೀಜ್ ಮಾಡಿದೆ.

ಕನ್ನಡಪ್ರಭ ವಾರ್ತೆ ಗೋಕಾಕ

ಅನಧಿಕೃತವಾಗಿ ಭ್ರೂಣಲಿಂಗ ಪತ್ತೆ ಮಾಡುತ್ತಿದ್ದ ನಗರದ ಖಾಸಗಿ ಆಸ್ಪತ್ರೆ ಮೇಲೆ ಬೆಂಗಳೂರಿನಿಂದ ಬಂದ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಸೋಮವಾರ ದಾಳಿ ಮಾಡಿ ಭ್ರೂಣ ಪತ್ತೆ ಮಾಡುವ ಮಷಿನ್ ಸೇರಿದಂತೆ ಆಸ್ಪತ್ರೆಯನ್ನು ಸೀಜ್ ಮಾಡಿದೆ.

ರಾಜ್ಯ ಆರೋಗ್ಯ ಇಲಾಖೆ ಉಪನಿರ್ದೇಶಕ (ಕೆಪಿಎಂಇ, ಪಿಸಿಪಿಎನ್‌ಡಿಟಿ) ಡಾ.ವಿವೇಕ ದೊರೆ ನೇತೃತ್ವದಲ್ಲಿ ಬೆಳಗಾವಿಯ ಡಿಎಚ್ಒ, ಗೋಕಾಕ ಟಿಎಚ್‌ಒ ಸೇರಿ 10 ಅಧಿಕಾರಿಗಳು ಸೋಮವಾರ ಸಂಜೆ 6 ಗಂಟೆಯ ಹೊತ್ತಿಗೆ ನಗರದ ಇಕ್ರಾ ಆಸ್ಪತ್ರೆ ಮೇಲೆ ದಾಳಿ ಮಾಡಿದ್ದು, ನಾಲ್ವರು ಗರ್ಭಿಣಿಯರ ಭ್ರೂಣಲಿಂಗ ಪತ್ತೆ ಮಾಡಿ ಏಜೆಂಟರ ಮೂಲಕ ಹಣ ಪಡೆಯುತ್ತಿದ್ದಾಗ ರೆಡ್‌ ಹ್ಯಾಂಡ್‌ ಆಗಿ ಬಲೆಗೆ ಬಿದ್ದಿದ್ದಾರೆ. ಭ್ರೂಣಲಿಂಗ ಪತ್ತೆಗೆ ತಲಾ ₹80 ಸಾವಿರ ದರ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.

ಕಾರ್ಯಾಚರಣೆ ನಡೆದಿದ್ದು ಹೇಗೆ? :

ಡಾ.ಕುತೇಜಾ ಹಾಗೂ ಪತಿ ಡಾ.ಇಮ್ರಾನಖಾನ್‌ ದಂಢರಗಿ ಸೇರಿ ಇಕ್ರಾ ಆಸ್ಪತ್ರೆ ನಡೆಸುತ್ತಿದ್ದು, ನಾಲ್ಕು ವರ್ಷಗಳಿಂದ ಏಜೆಂಟರ ಮೂಲಕ ಹಣ ಪಡೆದು ಆಸ್ಪತ್ರೆಯ ವೈದ್ಯೆ ಕುತೇಜಾ ದಂಢರಗಿ ಭ್ರೂಣಲಿಂಗ ಪತ್ತೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಈ ಬಗ್ಗೆ ಮಾಹಿತಿ ಆಧರಿಸಿ ಬೆಂಗಳೂರಿನ ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿದೆ. ಸೋಮವಾರ ನಾಲ್ವರು ಗರ್ಭಿಣಿಯರ ಕಡೆಯಿಂದ ತಲಾ ₹80 ಸಾವಿರ ಪಡೆದು ಭ್ರೂಣಲಿಂಗ ಪತ್ತೆ ಮಾಡಿದ್ದು, ಏಜೆಂಟ್‌ ತುಕಾರಾಮ ಖೋತ ಮೂಲಕ ಹಣ ಪಡೆಯುತ್ತಿದ್ದಾಗ ಅಧಿಕಾರಿಗಳ ತಂಡ ದಾಳಿ ನಡೆಸಿ ಹಣ ವಶಕ್ಕೆ ಪಡೆದಿದೆ. ಆರೋಗ್ಯ ಇಲಾಖೆ ಉಪನಿರ್ದೇಶಕರ ಸೂಚನೆಯಂತೆ ಆಸ್ಪತ್ರೆಯನ್ನು ಸೀಜ್ ಮಾಡಲಾಗಿದೆ. ಈ ಆಸ್ಪತ್ರೆಯೊಂದಿಗೆ ನಂಟು ಹೊಂದಿರುವ ಇನ್ನೆರಡು ಆಸ್ಪತ್ರೆಗಳನ್ನು ಸಹ ಮಂಗಳವಾರ ಸೀಜ್ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಕಾರ್ಯಾಚರಣೆಯಲ್ಲಿ ಡಿಎಚ್‌ಒ ಮಹೇಶ ಕೋಣಿ, ಟಿಎಚ್‌ಒ ಮುತ್ತಣ್ಣ ಕೊಪ್ಪದ, ಪಿಎಸ್‌ಐ ಕೆ. ವಾಲಿಕಾರ ಸೇರಿದಂತೆ ಬೆಂಗಳೂರಿನ ಆರೋಗ್ಯ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Share this article