ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯವಸ್ಥಾಪಕ ನೇಣು ಬಿಗಿದುಕೊಂಡು ಆತ್ಮಹತ್ಯೆ

KannadaprabhaNewsNetwork | Published : Jan 2, 2024 2:15 AM

ಸಾರಾಂಶ

ಲಿಂಗನಾಯಕ್ ಸೋಮವಾರ ಬೆಳಗ್ಗೆ ಮನೆಯಿಂದ ಹಾಲು ತರುತ್ತೇನೆಂದು ಪಟ್ಟಣಕ್ಕೆ ಹೋದ ವರು ಮರಳಿ ಮನೆಗೆ ತೆರಳಲಿಲ್ಲ. ಹಾಲು ತರಲು ಹೋದವರು ಇನ್ನೂ ಮನೆಗೆ ಬರಲಿಲ್ಲವೆಂದು ಅವರ ಪತ್ನಿ ಹುಡುಕಾಟ ನಡೆಸಿದ್ದಾರೆ. ಆದರೆ ಲಿಂಗನಾಯಕ್ ನೇರವಾಗಿ ಕಚೇರಿಗೆ ಹೋಗಿ 2 ಪುಟದ ಡೆತ್ ನೋಟ್ ಬರೆದು ನೇಣಿಗೆ ಶರಣಾಗಿದ್ದಾರೆ.

ಲಿಂಗನಾಯಕ್ ಬೆಳಗ್ಗೆ ಕಚೇರಿಯಲ್ಲಿ ನೇಣಿಗೆ ಶರಣು

ಕನ್ನಡಪ್ರಭ ವಾರ್ತೆ, ಮೂಡಿಗೆರೆ

ಕ್ಷೇತ್ರ ಶಿಕ್ಷಣಾಧಿಕಾರಿ ಮೂಡಿಗೆರೆ ಕಚೇರಿಯಲ್ಲಿ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲಿಂಗನಾಯಕ್ (58) ಸೋಮವಾರ ಬೆಳಗ್ಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ಲಿಂಗನಾಯಕ್ ಸೋಮವಾರ ಬೆಳಗ್ಗೆ 8 ಗಂಟೆಗೆ ಮನೆಯಿಂದ ಹಾಲು ತರುತ್ತೇನೆಂದು ಪಟ್ಟಣಕ್ಕೆ ಹೋದ ವರು ಮರಳಿ ಮನೆಗೆ ತೆರಳಲಿಲ್ಲ. ಹಾಲು ತರಲು ಹೋದವರು ಇನ್ನೂ ಮನೆಗೆ ಬರಲಿಲ್ಲವೆಂದು ಅವರ ಪತ್ನಿ ಹುಡುಕಾಟ ನಡೆಸಿದ್ದಾರೆ. ಆದರೆ ಲಿಂಗನಾಯಕ್ ನೇರವಾಗಿ ಕಚೇರಿಗೆ ಹೋಗಿ 2 ಪುಟದ ಡೆತ್ ನೋಟ್ ಬರೆದು ನೇಣಿಗೆ ಶರಣಾಗಿದ್ದಾರೆ.

ಡೆತ್ ನೋಟ್‌ನಲ್ಲಿ ಕೆಲಸದ ಒತ್ತಡ ಅಧಿಕವಾಗಿತ್ತು. ಇತ್ತೀಚೆಗೆ ಲೋಕಾಯುಕ್ತ ದಾಳಿ ನಡೆಸಿದ ಬಳಿಕ ಡಿ ದರ್ಜೆ ನೌಕರ ಬಶೀರ್ ಅವರ ಕ್ಲಸ್ಟರ್ ಕೆಲಸ ಬಾಕಿ ಉಳಿದಿತ್ತು. ಜತೆಗೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಕೂಡ ಇತ್ತು. ಸಮಯಕ್ಕೆ ಸರಿಯಾಗಿ ಯಾವುದೇ ಕೆಲಸ ಕಾರ್ಯ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ರಾತ್ರಿ ನಿದ್ದೆ ಕೂಡ ಬರುತ್ತಿರಲಿಲ್ಲ. ಹಾಗಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನಾನೆ ಕಾರಣ. ನಮ್ಮ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಬರೆದಿದ್ದಾರೆ.

ಬೆಳಗ್ಗೆ ಎಂದಿನಂತೆ 10 ಗಂಟೆಗೆ ಸಿಬ್ಬಂದಿ ಕಚೇರಿಗೆ ಬಂದಾಗ ಘಟನೆ ಕಂಡು ಬೆಚ್ಚಿ ಬಿದಿದ್ದಾರೆ. ವಿಚಾರ ಹೊರ ಬರುತ್ತಿದ್ದಂತೆ ತಾಲೂಕಿನಾದ್ಯಂತ ಶಾಲೆ ಶಿಕ್ಷಕರು ದಂಡು ದಂಡಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ಜಮಾಯಿಸಿದರು. ಈ ಸಂದರ್ಭದಲ್ಲಿ ಕೆಲ ಶಿಕ್ಷಕರು ಬಿಇಒ ಕಚೇರಿ ಮತ್ತು ಶಾಲೆಗಳಿಗೆ ಆರ್‌ಟಿಐ ಕಾರ್ಯಕರ್ತನೋರ್ವ ಪದೇ ಪದೇ ಅರ್ಜಿ ಹಾಕುವ ಮೂಲಕ ತೊಂದರೆ ಕೊಡುತ್ತಿದ್ದರು. ಅಲ್ಲದೇ ಶಿಕ್ಷಕರು ಶಾಲೆ ವಿಚಾರವಾಗಿ ಬಿಇಒ ಕಚೇರಿಗೆ ತೆರಳಿದ್ದ ಸಂದರ್ಭದಲ್ಲಿ ಶಾಲೆಯಲ್ಲಿ ಶಿಕ್ಷಕರು ಕೆಲಸ ಮಾಡಿತ್ತಿಲ್ಲ ವೆಂದು ಮೇಲಾಧಿಕಾರಿಗಳಿಗೆ ಸುಖಾಸುಮ್ಮನೆ ದೂರು ನೀಡುತ್ತಿದ್ದರು. ಇದರಿಂದ ಶಿಕ್ಷಕರು ಬೇಸತ್ತು ಹೋಗಿದ್ದಾರೆ. ಅಲ್ಲದೇ ಲಿಂಗನಾಯಕ್ ಅವರು ಬಿಇಒ ಕಚೇರಿಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿ ಯಾಗಿದ್ದರು. ಅರ್ಜಿಗಳಿಗೆ ಉತ್ತರ ನೀಡುವಷ್ಟರಲ್ಲಿ ಮೇಲಿಂದ ಮೇಲೆ ಅರ್ಜಿಗಳು ಬರುತ್ತಲೇ ಇದ್ದಿದ್ದರಿಂದ ಅವರಿಗೆ ಕೆಲಸದ ಒತ್ತಡ ಅಧಿಕವಾಗಿತ್ತು. ಇದರಿಂದ ನೊಂದಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದರು.

ಬಳಿಕ ಮೃತದೇಹವನ್ನು ಪಟ್ಟಣದ ಎಂಜಿಎಂ ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹವನ್ನು ವಾರಸುದಾರರಿಗೆ ನೀಡಲಾಯಿತು. ಮೃತರು ಪತ್ನಿ, ಓರ್ವ ಪುತ್ರ, ಪುತ್ರಿ, ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ. ಘಟನೆ ಕುರಿತು ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೋಟೊ

1ಎಂಡಿಜಿ1ಎ: ಲಿಂಗನಾಯಕ್,

1ಎಂಡಿಜಿ1ಬಿ : ಮೂಡಿಗೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲಿಂಗನಾಯಕ್ ಮೃತ ದೇಹವನ್ನು ಆಂಬುಲೆನ್ಸ್ ಮೂಲಕ ಸಾಗಿಸುವ ಸಂದರ್ಭದಲ್ಲಿ ನೂರಾರು ಶಿಕ್ಷಕರು ಆಗಮಿಸಿರುವುದು.

Share this article