ಕನ್ನಡಪ್ರಭ ವಾರ್ತೆ ಚಾಮರಾಜನಗರ
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ವಿವಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶೈಕ್ಷಣಿಕ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ಬಡವರ ಮಕ್ಕಳಿಗೂ ಜಿಲ್ಲೆಯಲ್ಲೇ ಉನ್ನತ ಶಿಕ್ಷಣ ಪಡೆಯಲಿ ಎಂಬ ಕಾರಣಕ್ಕೆ ಏಳು ಹೊಸ ವಿಶ್ವ ವಿದ್ಯಾನಿಲಯಗಳನ್ನು ಘೋಷಣೆ ಮಾಡಿ, ಆರಂಭದಲ್ಲಿ ಒಂದಿಷ್ಟು ಅನುದಾನವನ್ನು ನೀಡಿತ್ತು. ಆದರೆ, ಈಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಿಜೆಪಿ ಸರ್ಕಾರ ಘೋಷಿಸಿದ್ದು ಎಂಬ ಮನಸ್ಥಿತಿ ಇರುವುದರಿಂದ ಮುಂದುವರಿಸದಿರಲು ಕಾಂಗ್ರೆಸ್ ಸರ್ಕಾರ ವಿಶ್ವ ವಿದ್ಯಾನಿಲಯಗಳ ನಿರ್ವಹಣೆಗೆ ಕೋಟ್ಯತರ ರು. ಅನುದಾನ ಬೇಕು ಎಂಬ ಅಂಶವನ್ನು ಮುಂದಿಟ್ಟಿಕೊಂಡು ವಿಶ್ವವಿದ್ಯಾನಿಲಯವನ್ನು ಮುಚ್ಚಲು ಮುಂದಾಗಿದೆ ಇದೊಂದು ಶಿಕ್ಷಣ ವಿರೋಧಿ ನೀತಿಯಾಗಿದೆ ಎಂದರು.
ರಾಜ್ಯ ಸರ್ಕಾರದ ಆರ್ಥಿಕ ಸಮಿತಿಯಲ್ಲಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ನಿಲುವು ಬದಲಾಯಿಸಿಕೊಳ್ಳಬೇಕು. ವಿಶ್ವವಿದ್ಯಾಲಯಗಳು ಆ ಪ್ರದೇಶದ ಗ್ರಾಮೀಣ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಅನುಕೂಲವಾಗಲಿದೆ. ಶಿಕ್ಷಣ ಕ್ಷೇತ್ರಗಳು ಸೇವೆ ವಲಯಗಳಾಗಿದೆ. ಲಾಭದಾಯಕ ವಲಯ ಅಲ್ಲ, ಉದ್ಯಮಿ ವಲಯ ಅಲ್ಲ, ಹಣಕಾಸಿನ ಹೊರೆಯಾಗುತ್ತದೆ ಎಂದು ಶಿಕ್ಷಣ ವಿರೋಧಿ ಧೋರಣೆ ಮಾಡುವುದನ್ನು ಬಿಜೆಪಿ ಖಂಡಿಸುತ್ತದೆ ಎಂದರು.ವಿವಿ ಸ್ಥಾಪನೆಗೆ ಯುಜಿಸಿ ಆ್ಯಕ್ಟ್ ಪ್ರಕಾರ 25 ಎಕರೆ ಇದ್ದರೆ ಸಾಕು. ಆದರೆ ಜಿಲ್ಲೆಯಲ್ಲಿರುವ ವಿವಿಗೆ 54 ಎಕರೆ ಪ್ರದೇಶವಿದ್ದು, ವರ್ಷಕ್ಕೆ 10ರಿಂದ 15 ಕೋಟಿ ರು. ಅಗತ್ಯವಿದೆ. ಯುಜಿಸಿ ಅನುಮೋದನೆ ದೊರಕಿದ್ದು ಸಿಂಡಿಕೇಟ್‌ಗೆ ಸೇರಿದೆ. ಸರ್ಕಾರ ಚಾಮರಾಜನಗರ ವಿವಿಯನ್ನು ಮುಚ್ಚದೇ ಮುಂದುವರಿಸಬೇಕು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಸುವ ಸಚಿವ ಸಂಪುಟ ಸಭೆಯಲ್ಲಿ ವಿಶ್ವವಿದ್ಯಾಲಯವನ್ನು ಮುಚ್ಚದಿರಲು ಕ್ರಮವಹಿಸಬೇಕು. ಇಲ್ಲದಿದ್ದರೆ ವಿದ್ಯಾರ್ಥಿಗಳ ಜೊತೆಗೂಡಿ ರಾಜ್ಯಾದ್ಯಂತ ಬಿಜೆಪಿ ಉಗ್ರ ಹೋರಾಟ ಮಾಡುತ್ತದೆ ಎಂದರು.