ಸಾಹೇಬ್ರ...ನೀರೆಲ್ಲ ಖಾಲಿಯಾಗೇದ್ರಿ..ನೀರ ಇಲ್ಲದಿದ್ರ ಬೆಳೆಯೆಲ್ಲಾ ಒಣಗಿ ನಾವು ಮತ್ತಷ್ಟು ಸಾಲದಾಗ ಬೀಳೋ ಪರಿಸ್ಥಿತಿ ಬರ್ತೈತ್ರಿ, ನಾವ್ ಬರ್ಬಾದ್ ಆಗ್ತೇವ್ರಿ...ಹ್ಯಾಂಗಾರ ಮಾಡಿ ಮಹಾರಾಷ್ಟ್ರದಿಂದ ನೀರ ಬಿಡ್ಸಿ ನಮ್ಮನ್ನ ಕಾಪಾಡಿ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಎದುರು ಸ್ಥಳೀಯ ರೈತರು ಅಳಲು ತೋಡಿಕೊಂಡರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಸಾಹೇಬ್ರ...ನೀರೆಲ್ಲ ಖಾಲಿಯಾಗೇದ್ರಿ..ನೀರ ಇಲ್ಲದಿದ್ರ ಬೆಳೆಯೆಲ್ಲಾ ಒಣಗಿ ನಾವು ಮತ್ತಷ್ಟು ಸಾಲದಾಗ ಬೀಳೋ ಪರಿಸ್ಥಿತಿ ಬರ್ತೈತ್ರಿ, ನಾವ್ ಬರ್ಬಾದ್ ಆಗ್ತೇವ್ರಿ...ಹ್ಯಾಂಗಾರ ಮಾಡಿ ಮಹಾರಾಷ್ಟ್ರದಿಂದ ನೀರ ಬಿಡ್ಸಿ ನಮ್ಮನ್ನ ಕಾಪಾಡಿ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಎದುರು ಸ್ಥಳೀಯ ರೈತರು ಅಳಲು ತೋಡಿಕೊಂಡರು.ಮಂಗಳವಾರದಿಂದ ಸತತ ಮೂರು ದಿನಗಳ ಕಾಲ ಗೇಟ್ ನಂ.೨೨ರಿಂದ ಭಾರೀ ಪ್ರಮಾಣದಲ್ಲಿ ನೀರು ಹರಿದು ಹೋಗಿದ್ದು, ೬ ಟಿಎಂಸಿ ನೀರು ಸಂಗ್ರಹದಲ್ಲಿ ೩ ಟಿಎಂಸಿ ನೀರು ಖಾಲಿಯಾಗಿದೆ. ಮತ್ತಷ್ಟು ನೀರು ಸೋರಿಕೆಯಾಗುವ ಸಾಧ್ಯತೆಯಿದೆ. ಬ್ಯಾರೇಜ್ ಖಾಲಿಯಾದರೆ ಬೇಸಿಗೆ ವೇಳೆ ಬೆಳೆಗಳು ಸಂಪೂರ್ಣ ನಾಶವಾಗುವ ಭೀತಿ ರೈತರನ್ನು ಕಾಡುತ್ತಿದೆ. ಅಲ್ಲದೆ, ರಬಕವಿ-ಬನಹಟ್ಟಿ ಅವಳಿ ನಗರ ಸೇರಿದಂತೆ ಅನೇಕ ಹಳ್ಳಿಗಳ ಜನರು ಕುಡಿಯಲು ಈ ನಿರನ್ನೇ ಅವಲಂಭಿಸಿದ್ದಾರೆ. ಬೇಸಿಗೆಯಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ.ಸರ್ಕಾರ ಎಚ್ಚೆತ್ತುಕೊಂಡು ಕೃಷ್ಣಾ ನದಿಯ ನೀರನ್ನೇ ನಂಬಿ ಬದುಕು ಸಾಗಿಸುತ್ತಿರುವ ರೈತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಅನಿವಾರ್ಯವಾಗಿದೆ. ಇಲ್ಲದಿದ್ದರೆ ಮುಂಬರುವ ಮೂರು ತಿಂಗಳು ಜಲಕ್ಷಾಮ ಉಂಟಾಗಲಿದೆ ಎಂಬುದು ರೈತರು ಅಳಲು ತೋಡಿಕೊಂಡಿದ್ದಾರೆ.
ರೈತರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ಸಂಗಪ್ಪ, ಗೇಟ್ ಸಂಪೂರ್ಣ ದುರಸ್ತಿ ಬಳಿಕ ನೀರು ಸಂಗ್ರಹ ಬಗ್ಗೆ ಸರ್ಕಾರ ಮಟ್ಟದಲ್ಲಿ ಚರ್ಚಿಸಿ, ರೈತರ ಬೆಳೆಗಳಿಗೆ ಹಾಗೂ ಜನತೆಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸನ್ನದ್ಧವಾಗಿದೆ ಎಂದು ಭರವಸೆ ನೀಡಿದರು.ಲಕ್ಷಾಂತರ ರೈತರ ಭವಿಷ್ಯ ಕೃಷ್ಣೆಯ ಮೇಲೆಯೇ ಇದೆ. ಇದೀಗ ನೀರಿನ ಪೋಲಾಗುವುದನ್ನು ನೋಡಿದರೆ ನಮ್ಮೆಲ್ಲರನ್ನು ಆತಂಕಕ್ಕೆ ದುಡುಕಿದೆ. ತಕ್ಷಣ ಸರ್ಕಾರ ಕಾರ್ಯಪ್ರವೃತ್ತವಾಗಿ ಹಿಪ್ಪರಗಿ ಬ್ಯಾರೇಜ್ ಗೇಟ್ ಶೀಗ್ರ ದುರಸ್ತಿ ಮಾಡಿ, ನೀರು ತುಂಬಿಸುವ ಕಾರ್ಯದಲ್ಲಿ ತೊಡಗಬೇಕು.
- ಪುಂಡಲೀಕ, ಪಾಲಭಾಂವಿ ಜಿಪಂ ಮಾಜಿ ಸದಸ್ಯ