ಎರಡನೇ ಬೆಳೆಗೆ ನೀರು ಬಿಡದಿದ್ದರೇ ಉಗ್ರ ಹೋರಾಟ

KannadaprabhaNewsNetwork |  
Published : Nov 07, 2025, 02:30 AM IST
ಫೋಟೋ ೬ಕೆಆರ್‌ಟಿ-೧ ಕಾರಟಗಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸ್ಗೂರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಉದ್ಯಮಿ ಜಿ.ತಿಮ್ಮನಗೌಡ ಮತ್ತು ಮಂಡಲ ಅಧ್ಯಕ್ಷ ಮಂಜುನಾಥ ಮಸ್ಕಿ ಇದ್ದರು. | Kannada Prabha

ಸಾರಾಂಶ

ನ.10ರಂದು ಬೆಂಗಳೂರಿನಲ್ಲಿ ನೀರು ಬಿಡುವ ಕುರಿತು ಸಭೆಯನ್ನು ನೀರಾವರಿ ಸಚಿವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ. ಸಭೆಯಲ್ಲಿ ರಾಜ್ಯ ಸರ್ಕಾರ ಅಚ್ಚುಕಟ್ಟು ಪ್ರದೇಶದ ರೈತರ ಹಿತದೃಷ್ಠಿಯಿಂದ ನೀರು ಬಿಡುವ ನಿರ್ಧಾರ ಮಾಡಬೇಕು.

ಕಾರಟಗಿ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಎರಡನೇ ಬೆಳೆಗೆ ನೀರು ಬಿಡುವ ನಿರ್ಧಾರವನ್ನು ನೀರಾವರಿ ಸಚಿವರು ಹಾಗೂ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸ್ಗೂರು ಎಚ್ಚರಿಕೆ ನೀಡಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.10ರಂದು ಬೆಂಗಳೂರಿನಲ್ಲಿ ನೀರು ಬಿಡುವ ಕುರಿತು ಸಭೆಯನ್ನು ನೀರಾವರಿ ಸಚಿವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ. ಸಭೆಯಲ್ಲಿ ರಾಜ್ಯ ಸರ್ಕಾರ ಅಚ್ಚುಕಟ್ಟು ಪ್ರದೇಶದ ರೈತರ ಹಿತದೃಷ್ಠಿಯಿಂದ ನೀರು ಬಿಡುವ ನಿರ್ಧಾರ ಮಾಡಬೇಕು. ಅಣೆಕಟ್ಟೆಯಲ್ಲಿ ಸುಮಾರ ೮೦ ಟಿಎಂಸಿ ನೀರು ಲಭ್ಯವಿರುವದನ್ನು ದೃಢಪಡಿಸಿಕೊಂಡು ರೈತರಿಗಾಗಿ ನೀರು ಬಿಡುಗಡೆ ಮಾಡಬೇಕು. ನಾವು ರಾಜಕೀಯವಾಗಿ ನೀರು ಬಿಡುಗಡೆಗೆ ಒತ್ತಾಯಿಸುತ್ತಿಲ್ಲ. ಅಣೆಕಟ್ಟೆಯಲ್ಲಿ ನೀರು ಲಭ್ಯತೆ ಇದೆ ಎನ್ನುವ ಲೆಕ್ಕಾಚಾರ, ಕೃಷಿ ಮತ್ತು ನೀರಾವರಿ ತಜ್ಞರ, ಎಂಜಿನಿಯರ್‌ಗಳ ಅಭಿಪ್ರಾಯ ಪರಿಗಣಿಸಿ ನೀರು ಬಿಡುಗಡೆಗೆ ಒತ್ತಾಯಿಸುತ್ತಿದ್ದೇವೆ. ಪರಿಸ್ಥಿತಿ ಹೀಗಿದ್ದರೆ ರೈತರ, ತಜ್ಞರ ಮಾತನ್ನು ಕೇಳದೆ ರಾಜ್ಯ ಸರ್ಕಾರ ನಿಜಾಮ್‌ ಸಂಸ್ಕೃತಿಯ ಇಗೋದಿಂದ ವರ್ತನೆ ಮಾಡುವುದನ್ನು ಮುಂದುವರಿಸಿದರೆ ಪಕ್ಷಾತೀತವಾಗಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.

ಲಭ್ಯವಿರುವ ೮೦ಟಿಎಂಸಿ ನೀರಿನಲ್ಲಿ ಆಂಧ್ರ ಮತ್ತು ತೆಲಂಗಾಣದ ಪಾಲು, ಕಾರ್ಖಾನೆ ಕೊಡುವುದನ್ನು ಕೊಟ್ಟ ನಂತರ ಕುಡಿಯುವ ನೀರು ಬಳಕೆಗೆ ಇಂತಿಷ್ಟು ತೆಗೆದ ಬಳಿಕ ಎಡದಂಡೆ ನಾಲೆಯ ಪಾಲಿಗೆ ಸರಿಸುಮಾರು ೩೬ ಟಿಎಂಸಿ ನೀರು ಸಿಗುತ್ತದೆ. ಎಡದಂಡೆ ವ್ಯಾಪ್ತಿಯಲ್ಲಿ ಒಂದು ಟಿಎಂಸಿ ಮೂರು ದಿನ ಬಳಕೆ ಮಾಡಿದರೆ ೯೬ ದಿನ ಕಾಲ ಎಡದಂಡೆ ನಾಲೆಗೆ ನೀರು ಹರಿಸಿ ಎರಡನೇ ಬೆಳೆ ಪಡೆಯಲು ಸಾಧ್ಯವಾಗುತ್ತದೆ. ಒಂದು ವೇಳೆ ನೀರು ಬಿಡುಗಡೆ ಮಾಡದಿದ್ದರೆ ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಸುಮಾರು ೨೦ಲಕ್ಷ ಎಕರೆ ಭೂಮಿ ಬೀಳು ಬೀಳುತ್ತದೆ. ಇದರಿಂದ ₹೧೫೦೦ ಸಾವಿರ ಕೋಟಿ ನಷ್ಟವಾಗುತ್ತಿದ್ದು, ಕೆಲಸವಿಲ್ಲದೇ ಕೃಷಿ ಇಲ್ಲದೇ ವ್ಯಾಪಾರ ವಹಿವಾಟ ನಡೆಯದೆ ನಾಲ್ಕು ಜಿಲ್ಲೆಯ ರೈತರು ಗುಳೆ ಹೋಗುತ್ತಾರೆ. ಇದು ನೀರಾವರಿ ಮತ್ತು ಕೃಷಿ ತಜ್ಞರ ಲೆಕ್ಕಾಚಾರ. ನಾವು ಯಾವುದೇ ರಾಜಕೀಯ ಮಾಡದೆ ಅಚ್ಚುಕಟ್ಟು ರೈತರ ಹಿತಕ್ಕಾಗಿ ಒತ್ತಾಯ ಮಾಡುತ್ತಿದ್ದು, ಎರಡನೇ ಬೆಳೆಗೆ ನೀರು ಬಿಡಲೇಬೇಕು ಎಂದು ಒತ್ತಾಯಿಸಿದರು.

ನ.೧೦ರಂದು ಬೆಂಗಳೂರಿನಲ್ಲಿ ಸಭೆ ಕರೆದಿದ್ದು. ಅಲ್ಲಿ ನಾನು ಸೇರಿದಂತೆ ಸಿಂಧನೂರಿನ ಮಾಜಿ ಶಾಸಕ ವೆಂಕಟರಾವ್ ನಾಡಗೌಡ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಸೇರಿದಂತೆ ಬಳ್ಳಾರಿ, ವಿಜಯನಗರ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ರೈತ ಮುಖಂಡರು, ಜನಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿ ಸಚಿವರ ಗಮನ ಸೆಳೆಯುತ್ತವೆ. ಇಷ್ಟಕ್ಕೂ ಸರ್ಕಾರ ಮಣಿಯದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

ಈ ವೇಳೆ ಉದ್ಯಮಿ ಜಿ. ತಿಮ್ಮನಗೌಡ, ಮಂಡಲ ಅಧ್ಯಕ್ಷ ಮಂಜುನಾಥ ಮಸ್ಕಿ ಇದ್ದರು.

ತಂಗಡಗಿದು ನಿಜಾಮ್‌ ಸಂಸ್ಕೃತಿ:

ನಮ್ಮದು ನಿಜಾಮ್‌ ಆಡಳಿತಕ್ಕೆ ಒಳಪಟ್ಟ ಪ್ರದೇಶ. ಆ ಆಡಳಿತ ಮುಗಿದು ಐದು ದಶಕಗಳು ಆಗಿವೆ. ಆದರೆ ನಮ್ಮ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ನಿಜಾಮ್‌ ಸಂಸ್ಕೃತಿಯನ್ನು ಈಗ ಜಾರಿಗೆ ಮಾಡುತ್ತಿದ್ದಾರೆ. ನಿಜಾಮ್‌ ನುಡಿದ್ದಿದೇ ಮಾರ್ಗ ಎನ್ನುವಂತೆ ಈಗ ಸಚಿವ ತಂಗಡಗಿ ತಾವು ಹೇಳಿದ್ದೆ ನಡೆಯಬೇಕು ಎನ್ನುವ ಮನಸ್ಥಿತಿಗೆ ಬಂದು ರಾಜಭಾರ, ರಾಜಕೀಯ ಮಾಡುತ್ತಿದ್ದಾರೆ ಎಂದು ದಢೇಸ್ಗೂರು ವ್ಯಂಗವಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ