ರಾಮನಗರ: ಜಿಲ್ಲೆಯಲ್ಲಿ ಪೂರ್ವ ಮುಂಗಾರು ಕೈಕೊಟ್ಟಿದ್ದು, ಕೃಷಿ ಚಟುವಟಿಕೆಗಳಿಗೆ ಅಲ್ಪ ಹಿನ್ನಡೆಯಾಗಿದೆ. ಮೇ 12ರವರೆಗೆ ಶೇಕಡ 55 ರಷ್ಟು ಮಳೆ ಕೊರತೆ ಉಂಟಾಗಿದೆ.
ಕನ್ನಡಪ್ರಭ ವಾರ್ತೆ ರಾಮನಗರ
ಜಿಲ್ಲೆಯಲ್ಲಿ ಪೂರ್ವ ಮುಂಗಾರು ಕೈಕೊಟ್ಟಿದ್ದು, ಕೃಷಿ ಚಟುವಟಿಕೆಗಳಿಗೆ ಅಲ್ಪ ಹಿನ್ನಡೆಯಾಗಿದೆ. ಮೇ 12ರವರೆಗೆ ಶೇಕಡ 55 ರಷ್ಟು ಮಳೆ ಕೊರತೆ ಉಂಟಾಗಿದೆ.
ಜನವರಿ 1ರಿಂದ ಮೇ 12ರವರೆಗೆ ಜಿಲ್ಲೆಯ ವಾಡಿಕೆ ಮಳೆಯ ಪ್ರಮಾಣ 105 ಮಿ.ಮೀ. ಆಗಿದೆ. ಆದರೆ ಈ ಬಾರಿ 47 ಮಿ.ಮೀ. ಮಳೆ ಬಿದ್ದಿದೆ ಎಂದು ಕೃಷಿ ಇಲಾಖೆ ಅಂಕಿ-ಅಂಶ ತಿಳಿಸುತ್ತದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಳೆಯ ಪ್ರಮಾಣದಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದೆ. 2023ರ ಜನವರಿ 1ರಿಂದ ಮೇ 13ರ ವರೆಗೆ 161.5 ಮಿ.ಮೀ. ಅಂದರೆ ವಾಡಿಕೆಗಿಂತ ಶೇ 49 ರಷ್ಟು ಅಧಿಕ ಮಳೆ ಬಿದ್ದಿತ್ತು. ಇದರಿಂದ ಪೂರ್ವ ಮುಂಗಾರು ಅವಧಿಯಲ್ಲೇ ಬಿತ್ತನೆ ಕಾರ್ಯ ಚುರುಕು ಪಡೆದುಕೊಂಡಿತ್ತು.
ಮೇ ತಿಂಗಳಲ್ಲಿ ಶೇ 12ರಷ್ಟು ಮಳೆ:
ಜಿಲ್ಲೆಯಲ್ಲಿ ತಿಂಗಳುವಾರು ಮಳೆಯ ಪ್ರಮಾಣವನ್ನು ಗಮನಿಸಿದಾಗ ಜನವರಿ ಹೊರತುಪಡಿಸಿ ಇನ್ನುಳಿದ ಎಲ್ಲ ತಿಂಗಳುಗಳಲ್ಲೂ ಮಳೆ ಕೊರತೆ ಉಂಟಾಗಿದೆ. ಜನವರಿಯಲ್ಲಿ ವಾಡಿಕೆ ಮಳೆ 2 ಮಿ.ಮೀ. ಆಗಿದ್ದು, ಈ ಬಾರಿ 3 ಮಿ.ಮೀ. ಮಳೆಯಾಗಿತ್ತು. ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ವರುಣ ಕೃಪೆಯನ್ನೇ ತೋರಿಲ್ಲ. ಏಪ್ರಿಲ್ ನಲ್ಲಿ ಶೇಕಡ 93ರಷ್ಟು ಮಳೆ ಕೊರತೆ ಉಂಟಾಗಿದೆ. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ 16.8 ಮಿ.ಮೀ. ಮಳೆಯಾಗಿದ್ದರೆ, ಈ ಬಾರಿ ಶೇಕಡ 100ರಷ್ಟು ಮಳೆ ಅಭಾವ ಕಂಡಿದೆ. ಮೇ ತಿಂಗಳಲ್ಲಿ 12ರವರೆಗೆ ಶೇ 12 ರಷ್ಟು ಮಳೆ ಆಗಿದೆ. 36 ಮಿ.ಮೀ ಮಳೆ ಆಗಬೇಕಿತ್ತು. ಆದರೆ 41 ಮಿ.ಮೀ ನಷ್ಟು ಮಳೆಯಾಗಿದೆ.
ರಾಮನಗರ ಟೌನ್ ಒಳಗೊಂಡಂತೆ ಜಿಲ್ಲೆಯ ಕೆಲವೆಡೆ ಎರಡು ವಾರಗಳಿಂದ ಸಾಧಾರಣ ಮಳೆ ಆಗುತ್ತಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ ದಿನಗಳಲ್ಲಿ ಸಾಧಾರಣ ಮಳೆಯಾಗಲಿದೆ.
ಮೇ ತಿಂಗಳ 12ರವರೆಗೆ ಚನ್ನಪಟ್ಟಣ ತಾಲೂಕಿನಲ್ಲಿ ವಾಡಿಕೆ 37.1ರಲ್ಲಿ 35.8 ಮಿ.ಮೀ ಮಳೆಯಾಗಿದ್ದು, ಶೇ.4ರಷ್ಟು, ಮಾಗಡಿ ತಾಲೂಕಿನಲ್ಲಿ ವಾಡಿಕೆ 49.4 ಮಿ.ಮೀ ಪೈಕಿ 42.6 ಮಿ.ಮೀ ಮಳೆಯಾಗಿದ್ದು, ಶೇ.14 ಹಾಗೂ ಹಾರೋಹಳ್ಳಿ ತಾಲೂಕಿನಲ್ಲಿ ವಾಡಿಕೆ 34.4 ಮಿ.ಮೀನಲ್ಲಿ 27.4 ಮಿ.ಮೀ ಮಳೆಯಾಗಿದ್ದು, ಶೇ.20ರಂದು ಕೊರತೆಯಾಗಿದೆ. ಉಳಿದಂತೆ ಕನಕಪುರ ತಾಲೂಕಿನಲ್ಲಿ 42.0 ಮಿ.ಮೀ ಪೈಕಿ 43.9 ಮಿ.ಮೀ ಮಳೆ ಸುರಿದು ಶೇ.5, ರಾಮನಗರ ತಾಲೂಕಿನಲ್ಲಿ ವಾಡಿಕೆ 36.6 ಮಿ.ಮೀ ನಲ್ಲಿ 47.5 ಮಿ.ಮೀ ಮಳೆಯಾಗಿದ್ದು, ಶೇ.30ರಷ್ಟು ಹೆಚ್ಚಿನ ಮಳೆ ಆಗಿದೆ.
ಕೃಷಿ ಚಟುವಟಿಕೆಗಳಿಗೆ ಹಿನ್ನಡೆ :
ಏಪ್ರಿಲ್, ಮೇ ತಿಂಗಳಲ್ಲಿ ವಾಡಿಕೆಯ ಮಳೆಯಾಗದೇ ಇದ್ದುದರಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆ ಉಂಟಾಗಿದೆ. ಮಳೆಯ ನಿರೀಕ್ಷೆಯೊಂದಿಗೆ ವಿವಿಧ ಬೆಳೆಗಳನ್ನು ನಾಟಿ ಮಾಡಿರುವ ರೈತರು ಇದೀಗ ಆತಂಕಕ್ಕೆ ಒಳಗಾಗಿದ್ದಾರೆ. ಈಗ ಮಳೆ ಆಗಿರುವುದರಿಂದ ಸ್ವಲ್ಪ ಭಾಗಗಳಲ್ಲಿ ಮಾತ್ರ ಕೃಷಿಕರು ಭೂಮಿಯನ್ನು ಹದ ಮಾಡಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದಾರೆ.
ಜಿಲ್ಲೆಯ ಪ್ರಮುಖ ಎನಿಸಿರುವ ಎಳ್ಳು, ಜೋಳ ಬೆಳೆಗಳಿಗೆ ಬಿತ್ತನೆ ಕಾರ್ಯ ನಡೆದಿಲ್ಲ. 1200 ಹೆಕ್ಟೇರ್‌ನಲ್ಲಿ ಎಳ್ಳು ಹಾಗೂ 300 ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬಿತ್ತನೆ ಗುರಿ ಇಡಲಾಗಿದ್ದು, ಬಿತ್ತನೆ ಕಾರ್ಯ ಪ್ರಗತಿ ಶೂನ್ಯವಾಗಿದೆ.
ಜಿಲ್ಲೆಯಲ್ಲಿ ಬಹುತೇಕ ರೈತರು ಪೂರ್ವ ಮುಂಗಾರಿನಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಳಿಸುತ್ತಾರೆ. ಜೂನ್, ಜುಲೈನಲ್ಲಿ ವಾಡಿಕೆಯ ಮಳೆಯಾದರೆ ಉತ್ತಮ ಬೆಳೆ ಬರುತ್ತದೆ. ಆದರೆ ಈ ಬಾರಿ ಬಿತ್ತನೆ ಕಾರ್ಯ ಆರಂಭವೇ ಆಗಿಲ್ಲ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.