ಹಾವೇರಿ:ಜಾನಪದ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಅಕ್ರಮ ನೇಮಕಾತಿ ಕುರಿತು 175 ಪುಟಗಳ ದಾಖಲೆಗಳನ್ನು ಸಂಗ್ರಹಿಸಿ, ಕಾನೂನು ಹೋರಾಟ ಆರಂಭಿಸಲಾಗಿದೆ. ಈಗಾಗಲೇ ಸಿಂಡಿಕೇಟ್ ಸದಸ್ಯರಿಗೆ ದೂರು ನೀಡಿದ್ದೇವೆ. ನ್ಯಾಯ ಸಿಗದಿದ್ದರೆ, ನ್ಯಾಯಾಲಯದ ಮೆಟ್ಟಿಲೇರಲು ಸಿದ್ಧರಾಗಿದ್ದೇವೆ ಎಂದು ರಾಜ್ಯ ಜಾನಪದ ಸ್ನಾತಕೋತ್ತರ ಹಾಗೂ ಸಂಶೋಧಕರ ಒಕ್ಕೂಟದ ಅಧ್ಯಕ್ಷ ಶಿವಸೋಮಣ್ಣ ನಿಟ್ಟೂರು ಹೇಳಿದರು.
ಜಾನಪದ ವಿವಿ ಅಕ್ರಮದ ವಿರುದ್ಧ ಹಲವು ವರ್ಷದಿಂದ ಹೋರಾಟ ಮಾಡುತ್ತಿದ್ದೇವೆ. ರಾಜ್ಯ ಸರ್ಕಾರವು ಹಲವು ನಿರ್ದೇಶನ ನೀಡಿದರೂ ವಿವಿ ಆಡಳಿತ ಮಂಡಳಿಯವರು, ಎಲ್ಲ ನಿರ್ದೇಶನ ಉಲ್ಲಂಘಿಸಿ ರಾಜಾರೋಷವಾಗಿ ಅಕ್ರಮ ಎಸಗುತ್ತಿದ್ದಾರೆ. ಜಾನಪದ ವಿವಿ ಉಳಿಸಲು ನಮ್ಮ ಹೋರಾಟ ನಿರಂತರ ಎಂದರು.ಒಕ್ಕೂಟದ ಉಪಾಧ್ಯಕ್ಷ ನಾಗರಾಜ್ ಎಸ್. ಮಾತನಾಡಿ, ನೇಮಕಾತಿ ಅಕ್ರಮದ ಬಗ್ಗೆ ಸಕಲ ದಾಖಲೆಗಳನ್ನು ಸಂಗ್ರಹಿಸಿದ್ದೇವೆ. ಬಹಿರಂಗ ಚರ್ಚೆಗೆ ಬಂದರೆ, ದಾಖಲೆಗಳನ್ನು ಪ್ರದರ್ಶಿಸಲು ನಾವು ಸಿದ್ಧರಿದ್ದೇವೆ. ಸಿಂಡಿಕೇಟ್ ಸದಸ್ಯರಿಗೆ ದೂರು ನೀಡಿದ್ದರೆ, ನಮ್ಮ ಮೇಲೆಯೇ ಸುಳ್ಳು ಆರೋಪ ಮಾಡಲಾಗುತ್ತಿದೆ. ವಿವಿಯಿಂದ ಹೊರಗಿನವರು ದಬ್ಬಾಳಿಕೆ ಮಾಡುತ್ತಿರುವುದಾಗಿ ಹೇಳಿ, ಅಕ್ರಮಗಳನ್ನು ಮುಚ್ಚಿ ಹಾಕಲಾಗುತ್ತಿವೆ. ಆದರೆ, ಇದಕ್ಕೆ ನಾವು ಜಗ್ಗುವುದಿಲ್ಲ. ವಿವಿ ರಕ್ಷಣೆಗಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಸವರಾಜ್ ಡಿ., ಹೊನ್ನಪ್ಪ ಮಾಳಗಿ, ಗುಡ್ಡಪ್ಪ ಬಣಕಾರ, ಗುಡ್ಡಪ್ಪ ಮಾಳಗಿ, ಗುಡ್ಡಪ್ಪ ವೈ.ಎಚ್. ಇತರರು ಇದ್ದರು. ಬೆಳಗಾವಿ ಅಧಿವೇಶ ಸಂದರ್ಭದಲ್ಲಿ ಪ್ರತಿಭಟನೆ: ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಅಕ್ರಮ ತನಿಖೆಗೆ ಆಗ್ರಹಿಸಿ ಬೆಳಗಾವಿಯಲ್ಲಿ ಆರಂಭವಾಗುವ ಅಧಿವೇಶನದ ಸಂದರ್ಭದಲ್ಲೂ ಪ್ರತಿಭಟನೆ ಮಾಡಲಿದ್ದೇವೆ. ವಿಶ್ವವಿದ್ಯಾಲಯದಲ್ಲಿ ನಡೆದಿರುವ ಅಕ್ರಮ ನೇಮಕಾತಿ ಹಾಗೂ ಸುಮಾರು ಒಂದು ಕೋಟಿ ರು. ಅವ್ಯವಹಾರದ ಬಗ್ಗೆ ಸಿಐಡಿ ತನಿಖೆ ನಡೆಸಬೇಕು. ತಪ್ಪಿತಸ್ಥರನ್ನು ಕೆಲಸದಿಂದ ವಜಾ ಮಾಡಿ ಬಂಧಿಸಬೇಕೆಂದು ಆಗ್ರಹಿಸಿ ಬೆಳಗಾವಿ ಸುವರ್ಣ ಸೌಧದ ಎದುರು ಪ್ರತಿಭಟನೆ ನಡೆಸಲು ತಯಾರಿ ನಡೆಸಿದ್ದೇವೆ. ನ್ಯಾಯ ಸಿಗದಿದ್ದರೆ, ಮುಂಬರುವ ದಿನಗಳಲ್ಲಿ ವಿವಿ ಆಡಳಿತ ಮಂಡಳಿ ಕಚೇರಿ ಬಾಗಿಲಿಗೆ ಬೀಗ ಹಾಕಿ ಪ್ರತಿಭಟಿಸುತ್ತೇವೆ ಎಂದರು.