ಜೋಶಿ ವಿರುದ್ಧದ ಹೋರಾಟ, ನಾಳೆ ಧಾರವಾಡದಲ್ಲಿ ಸಭೆ: ದಿಂಗಾಲೇಶ್ವರ ಶ್ರೀ

KannadaprabhaNewsNetwork |  
Published : Apr 01, 2024, 12:46 AM IST
ದಿಂಗಾಲೇಶ್ವರ ಶ್ರೀ | Kannada Prabha

ಸಾರಾಂಶ

ಜೋಶಿ ದಮನಕಾರಿ ಆಡಳಿತದಿಂದ ಸಮಾಜವನ್ನು ತುಳಿಯುತ್ತಿದ್ದಾರೆ. ಅವರನ್ನು ಬದಲಿಸಲೇಬೇಕು ಎಂದು ಪಟ್ಟು ಹಿಡಿದಿದ್ದೇವೆ. ಆದರೆ, ಜೋಶಿ ಬಿಜೆಪಿಗೆ ಅನಿವಾರ್ಯವಾದರೆ, ನಮಗೆ ಅವರನ್ನು ಸೋಲಿಸುವುದು ಅನಿವಾರ್ಯವಾಗಿದೆ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಶ್ರೀಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿರುದ್ಧ ನಡೆಸಿರುವ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿರುವ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಶ್ರೀಗಳು, ಏ. 2ರಂದು ಧಾರವಾಡದಲ್ಲಿ ಭಕ್ತರ ಸಭೆ ಕರೆದಿದ್ದೇನೆ. ಅಲ್ಲಿ ಚರ್ಚಿಸಿ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಜೋಶಿ ಅವರನ್ನು ಸೋಲಿಸುವುದು ನಮಗೆ ಅನಿವಾರ್ಯ ಎಂದರು. ಆದರೆ ಚುನಾವಣೆ ನಿಲ್ಲುವ ಕುರಿತು ಯಾವುದೇ ನಿರ್ಧಾರ ಪ್ರಕಟಿಸಲಿಲ್ಲ.

ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರನ್ನು ಬದಲಿಸುವಂತೆ ಮಾ. 31ರ ವರೆಗೆ ಗಡವು ನೀಡಿದ್ದ ಸ್ವಾಮೀಜಿ, ಭಾನುವಾರಕ್ಕೆ ಗಡವು ಮುಗಿದಿದೆ. ಜತೆಗೆ ಬಿಜೆಪಿ ಅಭ್ಯರ್ಥಿಯನ್ನು ಬದಲಿಸುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ಮುಖಂಡರು ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಜೋಶಿ ದಮನಕಾರಿ ಆಡಳಿತದಿಂದ ಸಮಾಜವನ್ನು ತುಳಿಯುತ್ತಿದ್ದಾರೆ. ಅವರನ್ನು ಬದಲಿಸಲೇಬೇಕು ಎಂದು ಪಟ್ಟು ಹಿಡಿದಿದ್ದೇವೆ. ಆದರೆ, ಜೋಶಿ ಬಿಜೆಪಿಗೆ ಅನಿವಾರ್ಯವಾದರೆ, ನಮಗೆ ಅವರನ್ನು ಸೋಲಿಸುವುದು ಅನಿವಾರ್ಯವಾಗಿದೆ ಎಂದರು.

ಬಹುಸಂಖ್ಯಾತರ ನಾಯಕರು ಸಂಪರ್ಕಿಸಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಒತ್ತಡ ತಂದಿದ್ದಾರೆ. ಬೆದರಿಕೆಯನ್ನೂ ಹಾಕಿರುವುದುಂಟು. ಯಾವ ಬೆದರಿಕೆಗೂ ಜಗ್ಗುವುದಿಲ್ಲ. ನಮ್ಮ ಹೋರಾಟ ಮುಂದುವರಿಯುತ್ತದೆ. ನಮಗೆ ಬೆದರಿಕೆ ಹಾಕಿದವರಿಗೆ, ಮನವೋಲಿಸಲು ಬಂದವರಿಗೆ ಇದನ್ನೇ ತಿಳಿಸಿದ್ದೇನೆ ಎಂದರು.

ನಾಳೆ ಭಕ್ತರ ಸಭೆ

ಸರ್ವಧರ್ಮ ಭಾವೈಕ್ಯತಾ ಮಠದ ಸ್ವಾಮೀಜಿಯಾಗಿರುವ ತಮಗೆ ಎಲ್ಲ ಧರ್ಮ, ಜಾತಿ ಒಂದೇ. ಕೇವಲ ಲಿಂಗಾಯತರಷ್ಟೇ ಅಲ್ಲ. ಎಲ್ಲ ನೊಂದ ಸಮಾಜದ ಧ್ವನಿಯಾಗಿ ಸಾಂತ್ವನ ಹೇಳಬೇಕಿದೆ. ಈ ದೃಷ್ಟಿಯಿಂದ ಜೋಶಿ ವಿರುದ್ಧದ ಹೋರಾಟದಲ್ಲಿ ಪ್ರಾಣ ಹೋದರೂ ಮುಂದಿಟ್ಟ ಹೆಜ್ಜೆಯಿಂದ ಹಿಂದಿಡುವುದಿಲ್ಲ.

ವಿವಿಧ ಮಠಾಧಿಪತಿಗಳ ಅಭಿಪ್ರಾಯ ಕೇಳಿದ್ದೇನೆ. ಇದೀಗ ಭಕ್ತರ ಅಭಿಪ್ರಾಯ ಕೇಳುವುದು ಬಾಕಿಯಿದೆ. ಅದಕ್ಕಾಗಿ ಧಾರವಾಡದಲ್ಲಿ ಏ. 2ರಂದು ಬೆಳಗ್ಗೆ 10.30ಕ್ಕೆ ಸಭೆ ಕರೆಯಲಾಗಿದೆ. ಭಕ್ತರ ಅಭಿಪ್ರಾಯ ಸಂಗ್ರಹಿಸಿದ ಮೇಲೆ ಮುಂದಿನ ತೀರ್ಮಾನ ಪ್ರಕಟಿಸಲಾಗುವುದು ಎಂದರು.

ಸ್ವಾಮೀಜಿಗಳಿಗೆ ಉಂಟಾದ ತಪ್ಪು ಗ್ರಹಿಕೆಯ ಬಗ್ಗೆ ಚರ್ಚಿಸಲು ಸಿದ್ಧ ಎಂಬ ಜೋಶಿ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ, 10 ವರ್ಷ ಕಾಲಾವಕಾಶ ನೀಡಿದ್ದೇನೆ. ಅವರು ಪರಿವರ್ತನೆಗೊಂಡಿಲ್ಲ. ಈಗ ಚುನಾವಣೆ ಹಿನ್ನೆಲೆಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಚುನಾವಣೆ ನಂತರದಲ್ಲಿ ಜೋಶಿ ನಮ್ಮನ್ನು ಹತ್ತಿಕುತ್ತಾರೆ ಎಂಬ ಪ್ರಜ್ಞೆಯೂ ನಮಗಿದೆ ಎಂದು ತಿಳಿಸಿದರು.

ಈ ಹಿಂದೆ ಸಮಾಜದ ಕೆಲಸವೊಂದನ್ನು ಮಾಡಿಕೊಡುವಂತೆ ಕೇಳಿದಾಗ, ಇದೇ ಜೋಶಿ ನಿಮಗೆ ಲಿಂಗಾಯತ ನಾಯಕರಿಲ್ಲವೇ ಎಂದು ಕೇಳಿದ್ದರು. ಅಂದಿನಿಂದ ಈ ವರೆಗೂ ಅವರ ಜತೆ ಮಾತನಾಡುವುದನ್ನೇ ಬಿಟ್ಟಿದ್ದೇನೆ ಎಂದರು.

ಸಚಿವ ಜೋಶಿಗೆ ಪಕ್ಷ ಹೈಕಮಾಂಡ್‌, ನಮಗೆ ಮತದಾರರು ಹೈಕಮಾಂಡ್‌. ನಾನು ಅವರನ್ನು ಸೋಲಿಸುತ್ತೇನೆ ಎಂದರೆ ತಪ್ಪಾಗುತ್ತದೆ. ಆದರೆ, ಮತದಾರರು ಮನಸ್ಸು ಮಾಡಿದರೆ ಏನು ಬೇಕಾದರೂ ಆಗಬಹುದು ಎಂಬುದನ್ನು ಜೋಶಿ ನೆನಪಿಸಿಕೊಳ್ಳಬೇಕಿದೆ. ಬೆದರಿಕೆ ಕರೆಗಳು ಅತಿರೇಕವಾದರೆ ದೂರು ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜೋಶಿ ಎಂದರೆ ಪಕ್ಷ, ಪಕ್ಷ ಎಂದರೆ ಜೋಶಿ ಎನ್ನುವಂತಾಗಿದೆ. ಹೀಗಾಗಿ, ಅವರ ಪರವಾಗಿ ಶಾಸಕರು ಮಾತನಾಡುತ್ತಿದ್ದಾರೆ. ಶಾಸಕರನ್ನು ಬೆಳೆಸಿದ್ದು ಜೋಶಿ ಅಲ್ಲ. ಕ್ಷೇತ್ರದ ಮತದಾರರು. ಇದನ್ನು ಶಾಸಕರು ಮನವರಿಕೆ ಮಾಡಿಕೊಳ್ಳಬೇಕು ಎಂದು ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಹಾಗೂ ಎಂ.ಆರ್‌. ಪಾಟೀಲರಿಗೆ ಶ್ರೀಗಳು ತಿವಿದರು.

ಸುದ್ದಿಗೋಷ್ಠಿಯಲ್ಲಿ ವೀರಣ್ಣ ಯಳಮಲಿ, ವೀರೇಶ ಸೊಬರದಮಠ ಸೇರಿದಂತೆ ಇತರರು ಇದ್ದರು.ನಾನೊಬ್ಬನೇ ಸಾಕು

ನನ್ನ ಪರವಾಗಿ ಮಾತನಾಡಿದ, ಬೆಂಬಲಿಸಿದ ಮಠಾಧೀಶರನ್ನು ಬೆದರಿಸುವ, ಒತ್ತಡ ಹಾಕುವ ಕೆಲಸವನ್ನು ಮಾಡಲಾಗುತ್ತಿದೆ. ಧಾರವಾಡ ಮುರುಘಾಮಠದ ಶ್ರೀಗಳೇ ಇದನ್ನು ಸ್ಪಷ್ಟಪಡಿಸಿದಂತಾಗಿದೆ. ಹೀಗಾಗಿ, ಈ ಹೋರಾಟದಲ್ಲಿ ಯಾವ ಮಠಾಧೀಶರನ್ನು ಕರೆಯಲ್ಲ. ಇವರಿಗೆ ನಾನೊಬ್ಬನೇ ಸಾಕು. ಅವರಾಗಿಯೇ ಬರುವುದಾದರೆ ಬರಲಿ. ಬೇಡ ಎನ್ನಲ್ಲ. ಆದರೆ ನಾನಾಗಿಯೇ ಯಾವ ಮಠಾಧೀಶರನ್ನು ಕರೆಯಲ್ಲ ಎಂದು ಸ್ಪಷ್ಟಪಡಿಸಿದರು. ಯಾರೇ ನನ್ನ ವಿರುದ್ಧ ಮಾತನಾಡಿದರೂ ಎಲ್ಲ ಸ್ವಾಮೀಜಿಗಳು ಮಾನಸಿಕವಾಗಿ ನನ್ನೊಂದಿಗೆ ಇದ್ದಾರೆ ಎಂದರು.

ದಿಂಗಾಲೇಶ್ವರ ಶ್ರೀಗೆ ಕರೆ ಮಾಡಿದ ಬಿಎಸ್‌ವೈ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿರುದ್ಧ ಸಮರ ಸಾರಿರುವ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಶ್ರೀಗಳಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮೊಬೈಲ್‌ ಮೂಲಕ ಕರೆ ಮಾಡಿ ಸಂಧಾನಕ್ಕೆ ಪ್ರಯತ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ದಿಂಗಾಲೇಶ್ವರ ಶ್ರೀಗಳಿಗೆ ಭಾನುವಾರ ಕರೆ ಮಾಡಿದ ಯಡಿಯೂರಪ್ಪ, ನಿಮ್ಮನ್ನು ಬಂದು ಭೇಟಿ ಮಾಡುತ್ತೇನೆ. ಮಾಧ್ಯಮಕ್ಕೆ ಯಾವುದೇ ಹೇಳಿಕೆ ನೀಡಬೇಡಿ ಎಂದು ಮನವಿ ಮಾಡಿದರು ಎಂದು ಮೂಲಗಳು ತಿಳಿಸಿವೆ. ಆದರೆ ಶ್ರೀಗಳು, ತಮ್ಮ ನಿಲುವಿನಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ ಎಂದು ಹೇಳಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ