ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳಿಂದ ರೈತರಿಗೆ ಸಂದಾಯವಾಗುತ್ತಿರುವ ಸಹಾಯಧನದ ಹಣವನ್ನು ರೈತರ ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿರುವ ಕೆಲ ಬ್ಯಾಂಕ್‌ಗಳ ಧೋರಣೆ ಖಂಡಿಸಿ ಹೋರಾಟ ಆರಂಭಿಸುವುದಾಗಿ ರೈತ ಸಂಘ ಎಚ್ಚರಿಕೆ ನೀಡಿದೆ.ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಬ್ಯಾಂಕ್‌ಗಳ ಶೋಷಣೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಹಾಯಧನ ಹಣವನ್ನು ಸಾಲಕ್ಕೆ ಹಿಡಿದುಕೊಳ್ಳಬಾರದೆಂಬ ಸ್ಪಷ್ಟ ನಿರ್ದೇಶನವಿದ್ದರೂ ರೈತರ ಹಣವನ್ನು ಸಾಲಕ್ಕಾಗಿ ಬ್ಯಾಂಕ್‌ಗಳು ಹಿಡಿದುಕೊಳ್ಳುತ್ತಿವೆ. ಬ್ಯಾಂಕ್‌ಗಳ ಧೋರಣೆ ಬದಲಾಗುತ್ತಿಲ್ಲ ಎಂದು ಕಿಡಿಕಾರಿದರು.ರೈತರ ಅನುಕೂಲಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆ ರೂಪಿಸಿ ಸಹಾಯಧನ ನೀಡುವ ಮೂಲಕ ಅನುಕೂಲ ಕಲ್ಪಿಸಿವೆ. ರೈತರ ಖಾತೆಗೆ ಜಮೆಯಾದ ಹಣವನ್ನು ರೈತರ ಸಾಲಕ್ಕಾಗಿ ಜಮೆ ಮಾಡಿಕೊಳ್ಳಬಾರದೆಂದು ಭಾರತೀಯ ರಿಸರ್ವ್ ಬ್ಯಾಂಕ್ ರಾಷ್ಟ್ರದ ಎಲ್ಲಾ ಬ್ಯಾಂಕ್‌ಗಳಿಗೂ ಸ್ಪಷ್ಟ ನಿರ್ದೇಶನ ನೀಡಿದೆ ಎಂದರು.
ಆದರೆ, ತಾಲೂಕಿನ ಎಸ್.ಬಿ.ಐ ಸೇರಿದಂತೆ ಕೆಲವು ಬ್ಯಾಂಕ್‌ಗಳು ಆರ್.ಬಿ.ಐ ನಿರ್ದೇಶನವನ್ನು ಪಾಲಿಸದೆ ರೈತರ ಸಹಾಯಧನದ ಹಣವನ್ನು ಸಾಲಕ್ಕೆ ವಜಾ ಮಾಡಿಕೊಂಡು ರೈತರಿಗೆ ವಂಚನೆ ಮಾಡುತ್ತಿವೆ. ಕಿಕ್ಕೇರಿ ಹೋಬಳಿಯ ಸಿದ್ದಾಪುರ ಗ್ರಾಮದ ಎಸ್.ಬಿ.ಐ ಶಾಖೆಯಿಂದ ರೈತ ಸತೀಶ ಅವರ 1.25 ಲಕ್ಷ ರು. ಬೆಳೆ ಸಾಲ ಪಡೆದಿದ್ದರು ಎಂದರು.ತೀವ್ರ ಬರಗಾಲ ಮತ್ತು ಅತಿವೃಷ್ಟಿಯಿಂದ ಇವರು ಬೆಳೆ ನಷ್ಟಕ್ಕೆ ಒಳಗಾಗಿ ಬ್ಯಾಂಕ್‌ನ ಸಾಲ ತೀರುವಳಿ ಮಾಡಿಲ್ಲ. ಸಾಲ ಮರುಪಾವತಿಸಿಲ್ಲ ಎನ್ನುವ ಕಾರಣಕ್ಕೆ ಎಸ್.ಬಿ.ಐ ಬ್ಯಾಂಕ್‌ನವರು ಸತೀಶ್ ಅವರ ಖಾತೆಗೆ ಜಮೆಯಾಗಿದ್ದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಹಣ, ನರೇಗಾ ಯೋಜನೆ ಮೂಲಕ ಬೆಳೆದಿದ್ದ ಬಾಳೆ ಬೇಸಾಯದ ಸಪ್ಲೆ ಬಿಲ್ ಹಣವನ್ನು ರೈತರಿಗೆ ನೀಡದೆ ಲಾಕ್ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ರೀತಿ ರಾಮೇನಹಳ್ಳಿಯ ಕುಮಾರ್ ಎಸ್ ಬಿಐ ಶಾಖೆಯಿಂದ 1.80 ಲಕ್ಷ ರು.ಬೆಳೆ ಸಾಲ ಪಡೆದಿದ್ದಾರೆ. ತಾವು ಬೆಳೆದ ರಾಗಿಯನ್ನು ರಾಗಿ ಖರೀದಿ ಕೇಂದ್ರದ ಮೂಲಕ ಮಾರಾಟ ಮಾಡಿದ್ದರು. ಇದರ ಹಣ 55 ಸಾವಿರ ರು. ಖಾತೆಗೆ ಜಮೆಯಾಗಿದೆ. ಇದರ ಜೊತೆಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಮತ್ತು ನರೇಗಾ ಯೋಜನೆ ಸಪ್ಲೆ ಬಿಲ್ ಸೇರಿ ಲಕ್ಷಾಂತರ ರು. ಬಂದಿದ್ದು, ಈ ಹಣವನ್ನು ರೈತರಿಗೆ ನೀಡದೆ ಲಾಕ್ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.ತಾಲೂಕಿನಾದ್ಯಂತ ಇಂತಹ ನೂರಾರು ಪ್ರಕರಣಗಳು ರೈತಸಂಘಕ್ಕೆ ತಿಳಿದು ಬಂದಿದೆ. ತಕ್ಷಣವೇ ಬ್ಯಾಂಕ್‌ಗಳ ವ್ಯವಸ್ಥಾಪಕರು ರೈತರ ಸಹಾಯಧನದ ಹಣವನ್ನು ಪಾವತಿಸಬೇಕು. ರಿಸರ್ವ್ ಬ್ಯಾಂಕ್ ಆದೇಶವನ್ನು ಕಟ್ಟು ನಿಟ್ಟಾಗಿ ಪಾಲಿದೆ ರೈತರಿಗೆ ಕಿರುಕುಳ ನೀಡುತ್ತಿರುವ ಬ್ಯಾಂಕ್‌ಗಳ ವಿರುದ್ಧ ರೈತಸಂಘ ಬೀದಿ ಹೋರಾಟಕ್ಕಿಳಿಯಲಿದೆ ಎಂದು ಎಚ್ಚರಿಸಿದರು.
ಜಿಲ್ಲಾಧಿಕಾರಿಗಳು ಮತ್ತು ತಾಲೂಕು ಆಡಳಿತ ಮಧ್ಯೆ ಪ್ರವೇಶ ಮಾಡಿ ತಾಲೂಕಿನ ಎಲ್ಲಾ ಬ್ಯಾಂಕ್‌ಗಳ ವ್ಯವಸ್ಥಾಪಕರ ಸಭೆ ಕರೆದು ರೈತರಿಗೆ ಕಿರುಕುಳ ನೀಡುತ್ತಿರುವವಗೆ ಎಚ್ಚರಿಕೆ ನೀಡಬೇಕು ಎಂದು ಒತ್ತಾಯಿಸಿದರು.ಈ ವೇಳೆ ರೈತ ಮುಖಂಡರಾದ ಸ್ವಾಮೀಗೌಡ, ಸಿಂಧಘಟ್ಟ ಮಂಜು ಸೇರಿದಂತೆ ಹಲವರಿದ್ದರು.