ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಅಂಬೇಡ್ಕರ್ ಭವನದ ಮಿನಿ ಸಭಾಂಗಣದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ವತಿಯಿಂದ ಆಯೋಜಿಸಿದ್ದ ‘ಲೋಕಸಭೆ- ವಿಧಾನಸಭೆಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಬೇಡವೇ ಎಂಬ ವಿಚಾರ ಕುರಿತ ಚಿಂತನ- ಮಂಥನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದುಳಿದ ವರ್ಗಗಳ ರಾಜಕೀಯ ಬಲವರ್ಧನೆಗೆ ಸ್ಥಳೀಯ ಸಂಸ್ಥೆಗಳ ಮಾದರಿಯಲ್ಲಿ ಲೋಕಸಭೆ- ವಿಧಾನಸಭೆಗೂ ಮೀಸಲಾತಿಯ ಅನಿವಾರ್ಯತೆ ಇದೆ. ಈ ಬಗ್ಗೆ ಗಂಭೀರ ಚಿಂತನೆ ಮತ್ತು ತೀವ್ರತರವಾದ ಹೋರಾಟದ ಅಗತ್ಯವಿದ್ದು ಈ ನಿಟ್ಟಿನಲ್ಲಿ ಸಂಘಟನೆಗಳು ಮುಂದಾಗಬೇಕು ಎಂದು ಆಶಿಸಿದರು.ಸ್ವಾತಂತ್ರ್ಯಾ ನಂತರ ದೇಶ ಮತ್ತು ರಾಜ್ಯದಲ್ಲಿ ಬಹುಸಂಖ್ಯಾತ ಹಿಂದುಳಿದ ವರ್ಗಗಳು ಮತದಾನಕ್ಕೆ ಸೀಮಿತವಾಗಿದ್ದು ನಿರೀಕ್ಷಿತ ಮಟ್ಟದಲ್ಲಿ ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ. ರಾಜ್ಯಮಟ್ಟಕ್ಕೆ ಜನಸಂಖ್ಯೆಗೆ ಅನುಗುಣವಾಗಿ ವಿಧಾನಸಭೆಯಲ್ಲಿ ಶಾಸಕರ ಸಂಖ್ಯಾಬಲ ಇಲ್ಲದಿರುವುದು ರಾಜಕೀಯ ಹಿನ್ನಡೆಗೆ ಸಾಕ್ಷಿಯಾಗಿದೆ ಎಂದು ವಿಶ್ಲೇಷಿಸಿದರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ಹಿಂದುಳಿದ ವರ್ಗಗಳಿಗೆ ಲೋಕಸಭೆ- ವಿಧಾನಸಭೆಯ ಮೀಸಲಾತಿಯನ್ನು ಕೇಳುವುದು ಮಹತ್ವದ ವಿಷಯವಾಗಿದೆ. ಮೇಲ್ನೋಟಕ್ಕೆ ಇದು ಅಸಾಧ್ಯವೆನಿಸಿದರೂ ಪಕ್ಷಾತೀತವಾಗಿ ಎಲ್ಲ ಸಮುದಾಯಗಳ ಸಂಘಟಿತ ಹೋರಾಟದ ಮೂಲಕ ಯಶಸ್ಸನ್ನು ಗಳಿಸಲು ಸಾಧ್ಯವೆಂದು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಲಿಂಗಯ್ಯ, ರೈತ ಮುಖಂಡ ದೊಡ್ಡಯ್ಯ, ವಿವಿಧ ಹಿಂದುಳಿದ ಸಮುದಾಯದ ಮುಖಂಡರಾದ ಎಂ.ಕೃಷ್ಣ, ನಾಗರತ್ನ, ಎಚ್.ಪಿ.ಸತೀಶ್, ಮಲ್ಲರಾಜೇ ಅರಸ್, ಸಾತನೂರು ಕೃಷ್ಣ, ಅಮ್ಜದ್‌ಪಾಷ, ವೈ.ಸಿ.ಪ್ರದೀಪ್, ಸಿ.ಸಿದ್ದಶೆಟ್ಟಿ, ಚಂದ್ರನಾಯಕ್, ಶಶಿಕುಮಾರ್, ದೇವರಾಜು, ದ್ರಾಕ್ಷಾಯಿಣಿ, ಶಕುಂತಲಾ, ಲೋಕೇಶ್ ಕೊಡಿಯಾಲ, ಪುಟ್ಟಸ್ವಾಮಿ, ಎಚ್.ಡಿ.ಜಯರಾಂ ಭಾಗವಹಿಸಿದ್ದರು.