ಕನ್ನಡಪ್ರಭ ವಾರ್ತೆ ತುಮಕೂರುವಾಲ್ಮೀಕಿ ನಿಗಮದ 187 ಕೋಟಿ ರು. ಹಣ ವಾಪಸ್ ಸರ್ಕಾರಕ್ಕೆ ಬರುವವರೆಗೂ ಹೋರಾಟ ಮುಂದುವರೆಯುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸೆ.1ರಿಂದ ಲಿಂಗಸಗೂರಿನಿಂದ ಬಳ್ಳಾರಿಯವರೆಗೆ ನಮ್ಮ ಪಾದಯಾತ್ರೆ ಆರಂಭವಾಗುತ್ತದೆ. ಇಂದೂ ಕೂಡ ನಮ್ಮ ರಾಷ್ಟ್ರೀಯ ನಾಯಕರ ಜೊತೆ ಚರ್ಚಿಸಿದ್ದೇನೆ. ಹೋರಾಟ ಯಶಸ್ವಿಯಾಗಿ ಆಗಬೇಕು ಒಳ್ಳೆಯದಾಗಲಿ ಎಂದು ರಾಷ್ಟೀಯ ನಾಯಕರು ತಿಳಿಸಿದ್ದಾರೆ ಎಂದರು.
ನಮ್ಮ ಹೋರಾಟ ವ್ಯಕ್ತಿಗತವಲ್ಲ, ಬದಲಿಗೆ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಎಂದ ವಿಜಯೇಂದ್ರ, ದಲಿತರ ಹಣ ಲೂಟಿ ಮಾಡಿರುವು ವಿಚಾರವಾಗಿ ನಮ್ಮ ಹೋರಾಟ. ಮೊದಲ ಹಂತದಲ್ಲಿ ನಮಗೆ ಯಶಸ್ಸು ಸಿಕ್ಕಿದೆ. ಆದರೆ ಅನೇಕ ವಿಚಾರಗಳನ್ನು ಇಟ್ಟುಕೊಂಡು ಹೋರಾಡುತ್ತಿದ್ದೇವೆ ಎಂದರು.
ಕಾಂಗ್ರೆಸ್ ಯುವ ಸಮೂಹಕ್ಕೆ ದ್ರೋಹ ಬಗೆಯುವ ಕೆಲಸ ಮಾಡಿದೆ. ಗೃಹ ಲಕ್ಷ್ಮೀ ಯೋಜನೆಯ 5 ಸಾವಿರ ಕೋಟಿ ರು. ಎಲ್ಲಿ ಹೋಗಿದೆಯೆಂದು ಇವತ್ತೂ ಕೂಡ ಗೊತ್ತಿಲ್ಲ ಎಂದರು. ದಲಿತರ ಹಣ ದುರ್ಬಳಕೆ ಮಾಡಿಕೊಂಡು ಮೊಸಳೆ ಕಣ್ಣೀರಿಡುತ್ತಿರುವ ಕಾಂಗ್ರೆಸ್‌ನ ಕಪಟನಾಟಕವನ್ನು ಜನ ಕ್ಷಮಿಸುವುದಿಲ್ಲ ಎಂದರು.