- ಜಿ.ಬಿ.ವಿನಯ ಕುಮಾರ ನೇತೃತ್ವದಲ್ಲಿ ಶೀಘ್ರ ರಾಜ್ಯವ್ಯಾಪಿ ಪ್ರತಿಭಟನೆ: ಸ್ವಾಭಿಮಾನಿ ಬಳಗ ಮುಖಂಡ ರಾಜು ಮೌರ್ಯ ಹೇಳಿಕೆ- - -
ಕನ್ನಡಪ್ರಭ ವಾರ್ತೆ ದಾವಣಗೆರೆಆನ್ ಲೈನ್ ಗೇಮ್‌ಗಳಿಗೆ ಅನುಮತಿ ನೀಡಿದ ಸರ್ಕಾರ, ಜನಪ್ರತಿನಿಧಿಗಳು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ದಾವಣಗೆರೆ ಯುವಕನೊಬ್ಬ ₹18 ಲಕ್ಷ ಕಳೆದುಕೊಂಡಿದ್ದಾನೆ. ಅಲ್ಲದೇ, ತನ್ನ ಅಮೂಲ್ಯ ಜೀವವನ್ನೂ ಕಳೆದುಕೊಳ್ಳುವಂತಹ ಪರಿಸ್ಥಿತಿ ಬಂದೊದಗಿದೆ ಎಂದು ಸ್ವಾಭಿಮಾನಿ ಬಳಗ ರಾಜ್ಯ ಕಾರ್ಯದರ್ಶಿ ರಾಜು ಮೌರ್ಯ ಕಿಡಿಕಾರಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆನ್ ಲೈನ್ ಗೇಮಿಂಗ್ ವಿಚಾರದಲ್ಲಿ ದಾವಣಗೆರೆಯ 25 ವರ್ಷದ ಶಶಿಕುಮಾರ ₹18 ಲಕ್ಷ ತೊಡಗಿಸಿ, ಹಣ ಕಳೆದುಕೊಂಡು, ನೇಣಿಗೆ ಶರಣಾಗಿದ್ದಾರೆ. ಚುನಾವಣೆಗಳಿಗೆ ಫಂಡಿಂಗ್ ಮಾಡುತ್ತಾರೆ ಎನ್ನುವ ಕಾರಣಕ್ಕೆ ಲಾಟರಿ, ಆನ್‌ಲೈನ್ ಗೇಮ್‌ಗಳಿಗೆ ಅನುಮತಿ ನೀಡುತ್ತಿರುವ ಸರ್ಕಾರಗಳು ಇನ್ನಾದರೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಿ. ಇಂತಹ ಸಾವು, ನೋವನ್ನು ತಡೆಯುವ ಕೆಲಸ ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ಮಾಡಲಿ ಎಂದರು.ಆನ್ ಲೈನ್ ಗೇಮ್, ಜೂಜು, ಆನ್ ಲೈನ್ ಲೋನ್ ಆ್ಯಪ್‌ಗಳನ್ನು ನಿಷೇಧಿಸುವವರೆಗೂ ಸ್ವಾಭಿಮಾನಿ ಬಳಗ ಹೋರಾಟ ನಡೆಸಲಿದೆ. ಆನ್ ಲೈನ್ ಗೇಮಿಂಗ್‌ನಲ್ಲಿ ಮೋಸ ಹೋಗಿ, ₹18 ಲಕ್ಷ ಕಳೆದುಕೊಂಡಿದ್ದ ಶಶಿಕುಮಾರ ಆರೋಪಿಗಳ ಪತ್ತೆಹಚ್ಚಿ, ಹಣ ಕೊಡಿಸುವಂತೆ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದರು. ಆದರೆ, ಎಫ್ಐಆರ್ ಮಾಡಿಸಲು 4 ತಿಂಗಳು ಅಲೆದಾಡಿಸಿದ್ದಾರೆ. ಅನಂತರ ಜಿಲ್ಲಾ ಎಸ್‌ಪಿಗೆ ದೂರು ನೀಡಿದ್ದಾರೆ. ನಿರಂತರ ಫೋನ್ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ. ಜಿಲ್ಲಾಧಿಕಾರಿ, ಸಂಸದರಿಗೆ ಮನವಿ ನೀಡಿದರೂ ನ್ಯಾಯ ಸಿಕ್ಕಿಲ್ಲ ಎಂದು ದೂರಿದರು.
ಲೋಕಾಯುಕ್ತ, ಮಾನವ ಹಕ್ಕುಗಳ ಆಯೋಗ, ಕಡೆಗೆ ಹೈಕೋರ್ಟ್ ನ್ಯಾಯಾಧೀಶರಿಗೆ ಮನವಿ ಮಾಡಿದರೂ ಸ್ಪಂದಿಸಿಲ್ಲ. ಶಶಿಕುಮಾರನ ನೆರವಿಗೆ ಯಾರೂ ಬರದಿದ್ದಾಗ ಆತ ಜು.2ರಂದು ರಾತ್ರಿ ನೇಣಿಗೆ ಶರಣಾಗಿದ್ದಾನೆ. ಶಶಿಕುಮಾರನದು ಆತ್ಮಹತ್ಯೆಯಲ್ಲ, ಸರ್ಕಾರಗಳು, ಅಧಿಕಾರಿಗಳು, ಜನಪ್ರತಿನಿಧಿಗಳ ಬೇಜವಾಬ್ದಾರಿ, ನಿರ್ಲಕ್ಷ್ಯದಿಂದ ಆದ ಕೊಲೆ. ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಸದ ಸರ್ಕಾರಗಳು ಜೀವನೋಪಾಯಕ್ಕೆ ಹೇಗಾದರೂ ಹಣ ಗಳಿಸುವ ಸುಲಭ ಮಾರ್ಗವಾಗಿ ಲಾಟರಿ, ಬೆಟ್ಟಿಂಗ್, ಆನ್ ಲೈನ್ ಗೇಮಿಂಗ್‌ಗೆ ಬಲಿಯಾಗುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಹೇಳಿದರು.ಸೈಬರ್ ಅಪರಾಧಗಳ ಬಗ್ಗೆ ರಿಂಗ್ ಟೋನ್ ಅಳವಡಿಸುವ, ಗೋಲ್ಡನ್ ಅವರ್‌ಗಳ ಬಗ್ಗೆ ಭಾಷಣ ಮಾಡುವ ಪೊಲೀಸ್ ಇಲಾಖೆ ನತದೃಷ್ಟ ಶಶಿಕುಮಾರಗೆ ಸ್ಪಂದಿಸಲಿಲ್ಲ. ಧೃತಿಗೆಡದ ಶಶಿಕುಮಾರ ಆನ್ ಲೈನ್ ಗೇಮಿಂಗ್ ವಂಚಕರ ಪತ್ತೆಗೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮೂರು ಅಂಗಗಳಿಗೆ ಮನವಿ ಮಾಡಿ, ದೂರು ನೀಡಿದ್ದಾನೆ. ಪೊಲೀಸ್ ಇಲಾಖೆ ವೈಫಲ್ಯದ ಬಗ್ಗೆ ಲೋಕಾಯುಕ್ತ, ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾನೆ. ಆನ್ ಲೈನ್ ಗೇಮ್ ಗಳಾದ ಎ23 ರಮ್ಮಿ, ಡ್ರೀಮ್ 11ನಂತಹ ಗೇಮ್ ನಿಷೇಧಿಸಿ, ತನ್ನಂತಹ ಲಕ್ಷಾಂತರ ಜನ, ನಿರುದ್ಯೋಗಿಗಳ ಜೀವ, ಜೀವನ ರಕ್ಷಣೆ ಮಾಡುವಂತೆ ಕೇಂದ್ರ, ರಾಜ್ಯ ಸರ್ಕಾರಕ್ಕೂ ಒತ್ತಾಯಿಸಿದ್ದರು ಎಂದು ತಿಳಿಸಿದರು.
ಬಳಗದ ಶಿವಕುಮಾರ ಡಿ.ಶೆಟ್ಟರ್, ವಿರುಪಾಕ್ಷಪ್ಪ ಪಂಡಿತ್, ವಕೀಲರಾದ ಬಿ.ಬಸವರಾಜ, ಪ್ರವೀಣಕುಮಾರ, ಅಣ್ಣಪ್ಪ, ಮೊಹಮ್ಮದ್ ಸಾದಿಕ್ ಇತರರು ಇದ್ದರು.- - -
(ಬಾಕ್ಸ್)* ಶಶಿಕುಮಾರ್ ಸಾವು ಎಚ್ಚರಿಕೆ ಪಾಠವಾಗಬೇಕು
ಲಾಟರಿಯಂಥದ್ದರಲ್ಲಿ ತೊಡಗಿದವರಿಗೆ ಎಚ್ಚರಿಕೆಯ ಪಾಠವಾಗಬೇಕು. ಜನರ ತೆರಿಗೆ ಹಣದಿಂದ ಕಾಲಕಾಲಕ್ಕೆ ಪೇ ಕಮಿಷನ್‌ಗಳ ಶಿಫಾರಸುಗಳ ಮೂಲಕ ಸಂಬಳ, ಭತ್ಯೆ ಹೆಚ್ಚಿಸಿಕೊಂಡು ಕರ್ತವ್ಯ ಮರೆಯುತ್ತಿರುವ ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ದಾವಣಗೆರೆ ಸಂಸದರ ಮೇಲೆ ನಂಬಿಕೆ ಇಟ್ಟು, ಆನ್ ಲೈನ್ ಲಾಟರಿ ನಿಷೇಧಿಸಲು ಶಶಿಕುಮಾರ ಮನವಿ ಮಾಡಿದ್ದ. ಶಶಿಕುಮಾರನ ಪತ್ರ ಓದಿ, ಆತನಿಗೆ ಒಂದಿಷ್ಟು ಧೈರ್ಯ ತುಂಬಿದ್ದರೆ ಶಶಿಕುಮಾರನ ಜೀವವಾದರೂ ಉಳಿಯುತ್ತಿತ್ತು ಎಂದು ರಾಜು ಮೌರ್ಯ ಅಭಿಪ್ರಾಯಪಟ್ಟರು.- - -
(ಕೋಟ್)ಆನ್‌ಲೈನ್ ಗೇಮಿಂಗ್, ಲೋನ್ ಆ್ಯಪ್‌ಗಳನ್ನು ಸಂಪೂರ್ಣ ನಿಷೇಧಿಸುವ ವಿಚಾರ ವಿಧಾನ ಮಂಡಲದ ಅಧಿವೇಶನದಲ್ಲಿ ಮಂಡನೆಯಾಗಬೇಕು. ನಿರ್ಣಯವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು. ಕೇಂದ್ರ ಸರ್ಕಾರ ಸಂಪೂರ್ಣವಾಗಿ ಅವುಗಳನ್ನು ನಿಷೇಧಿಸುವವರೆಗೂ ಜಿ.ಬಿ.ವಿನಯಕುಮಾರ ನೇತೃತ್ವದಲ್ಲಿ ಸ್ವಾಭಿಮಾನಿ ಬಳಗದಿಂದ ನಿರಂತರ ಹೋರಾಟ ಮುಂದುವರಿಯುತ್ತದೆ.
- ರಾಜು ಮೌರ್ಯ, ರಾಜ್ಯ ಕಾರ್ಯದರ್ಶಿ, ಸ್ವಾಭಿಮಾನಿ ಬಳಗ.- - -
-5ಕೆಡಿವಿಜಿ7, 8:ದಾವಣಗೆರೆಯಲ್ಲಿ ಶನಿವಾರ ಸ್ವಾಭಿಮಾನಿ ಬಳಗದ ಕಾರ್ಯದರ್ಶಿ ರಾಜು ಮೌರ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.