.ಕನ್ನಡಪ್ರಭ ವಾರ್ತೆ ಹಾಸನ
ವಕ್ಫ್ ತಿದ್ದುಪಡಿ ಕಾಯ್ದೆ ೨೦೨೫ನ್ನು ಸಂಪೂರ್ಣವಾಗಿ ಹಿಂಪಡೆಯುವರೆಗೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ಜನಾಬ್ ಮುಫ್ತಿ ಇದ್ರೀಸ್ ಅಹಮದ್ ಸಾಬ್ ಹಾಗೂ ಸಾಮಾಜಿಕ ಚಿಂತಕ ರಾವಚಿಂತನ್ ಕರೆ ನೀಡಿ ತಮ್ಮ ನಿಲುವು ತಿಳಿಸಿದರು.ನಗರದ ೮೦ ಫೀಟ್ ರಸ್ತೆಯ ಈದ್ಗಾ ಮೈದಾನದಲ್ಲಿ ಶನಿವಾರ ನಡೆದ ಬೃಹತ್ ಪ್ರತಿಭಟನೆ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಮುಫ್ತಿ ಇದ್ರೀಸ್ ಅಹಮದ್ ಸಾಬ್, ಕೆಲ ದುಷ್ಟ ಶಕ್ತಿಗಳು ಮುಸಲ್ಮಾನರನ್ನು ನಿರ್ಮೂಲನೆ ಮಾಡಲು ಹೊರಟಿದ್ದು, ಅದು ಸಾಧ್ಯವಿಲ್ಲ. ನಮ್ಮ ಪೂರ್ವಿಕರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಸಲ್ಮಾನರದು ಕೂಡ ಭಾರತ ಆಗಿದೆ. ದೇಶದಲ್ಲಿ ಆಳುತ್ತಿರುವುದು ಮೋದಿ, ಶಾ ಅವರ ಮೋಸದ ಆಡಳಿತ ಆಗಿದ್ದು, ಕೆಲ ದುಷ್ಟಶಕ್ತಿಗಳು ಮುಸಲ್ಮಾನರನ್ನು ನಿರ್ಮೂಲನೆ ಮಾಡಲು ಹೊರಟಿದ್ದಾರೆ. ಆದರೇ ಅದು ಸಾಧ್ಯವಿಲ್ಲ. ಮುಸ್ಲಿಂರಲ್ಲಿ ಕೂಡ ಯಾರು ಅಧರ್ಮದಲ್ಲಿ ಇರುತ್ತಾರೆ ಅವರು ಮುಸ್ಲಿಂ ವಿರೋಧಿಗಳು. ಇಸ್ಲಾಂ ಎಂದರೇ ಶಾಂತಿ ಮತ್ತು ಏಕತೆ ಕಲಿಸುತ್ತದೆ. ನಮ್ಮ ಬೇಡಿಕೆ ಈಡೇರಿಸುವವರೆಗೂ ಈ ಹೋರಾಟ ನಿಲ್ಲಿಸುವುದಿಲ್ಲ ಎಂದು ಹೇಳಿದರು.
ಸಾಮಾಜಿಕ ಚಿಂತಕರಾದ ಚಿಂತನ್ ಮಾತನಾಡಿ, ಬೇಟಿ ಬಚಾವ್ ಎಂದು ಹೇಳಿ ಹೆಣ್ಣುಮಕ್ಕಳ ಹಿಜಾಬ್ ಬಟ್ಟೆ ತೋರಿಸಿ ಕಾಲೇಜಿನಿಂದ ಹೊರಗೆ ಹಾಕಿದ್ದೀರಾ, ನಾವು ಮುಟ್ಟಾಳರು ಅಲ್ಲ. ಪೂರ್ಣ ಚಂದ್ರ ತೇಜಸ್ವಿಗಳು ಆದರ್ಶರು. ಇವರು ಹೇಳುವಂತೆ ಈ ಸನ್ಯಾಸಿಗಳಲ್ಲಿ ಆಡಳಿತ ಸಿಗಬಾರದು ಎಂದಿದ್ದರು. ಯೋಗಿ ಆದಿತ್ಯ ಹೇಳುವಂತೆ ವಕ್ಫ್ ಜಾಗದಲ್ಲಿ ಮುಸಲ್ಮಾನರಿಗೆ ಶಾಲಾ ಕಾಲೇಜು ಕಟ್ಟಿಸಿಕೊಡುತ್ತಾರಂತೆ. ಅಯೋಗ್ಯರ ಮಾತು ನಾವು ಕೇಳಬೇಕಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ದೇಶದಲ್ಲಿ ಮುಸಲ್ಮಾನರಿಗೆ ಮೋಸ ಆಗುತ್ತಿದೆ. ದೇಶದಲ್ಲಿ ಆಳುತ್ತಿರುವುದೇ ಮೋಸ ಎಂದು ಜರಿದರು.ಇನ್ನೊಬ್ಬರೂ ಸಂವಿಧಾನ ಬದಲಾಯಿಸುತ್ತೇನೆ ಎನ್ನುತ್ತಾರೆ. ಇನ್ನೋರ್ವ ದೇಶ ಬಿಟ್ಟು ಮುಸಲ್ಮಾನರ ಕಳುಹಿಸುತ್ತೇವೆ ಎನ್ನುತ್ತಾರೆ. ಸದಾ ಮುಸಲ್ಮಾನರ ದ್ವೇಷಿಸುವ, ಟೀಕಿಸುವ ಇವರು ಮುಸಲ್ಮಾನರ ಜೀವ ಉದ್ಧಾರಕ್ಕಾಗಿ ವಕ್ಫ್ ತಿದ್ದುಪಡಿ ಮಸೂದೆ ತಂದಿದ್ದೇವೆ ಎಂದರೇ ನಾವು ಅದನ್ನ ನಂಬಲು ಮುಟ್ಟಾಳರಾ ಎಂದು ಪ್ರಶ್ನಿಸಿದರು. ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು ಲಕ್ಷಾಂತರ ಜನ ಮುಸಲ್ಮಾನರು ಇದ್ದು, ಅವರು ಕೂಡ ಈ ದೇಶಕ್ಕೆ ರಕ್ತಹರಿಸಿದ್ದಾರೆ. ಈ ದೇಶ ಕೇವಲ ಮೋದಿ, ಶಾ ಅವರದು ಅಲ್ಲ. ಭಾರತದ ಮುಸಲ್ಮಾನರ ದೇಶ ಕೂಡ ಆಗಿದೆ ಎಂದರು. ಭಾರತ ಬೇಡ ಎಂದು ಪಾಕಿಸ್ತಾನಕ್ಕೆ ಹೋದವರ ಸಂಬಂಧ ನಮಗೆ ಇಲ್ಲ. ಪದೇ ಪದೆ ಪಾಕಿಸ್ತಾನವನ್ನು ಏಕೆ ಎಳೆದುಕೊಂಡು ಬರುತ್ತೀರಾ! ಹೀಗೆ ಎಳೆದರೇ ಅಧಿಕಾರ ಉಳಿಯುತ್ತದೆ ಎಂಬುದು ಅವರ ಉದ್ದೇಶ ಎಂದು ದೇಶದ ಪ್ರಧಾನಿ ಹಾಗೂ ರಾಷ್ಟ್ರೀಯ ಅಧ್ಯಕ್ಷರ ವಿರುದ್ಧ ಸಿಡಿಮಿಡಿಗೊಂಡರು.
ಸಮಾವೇಶದ ಮುಖ್ಯ ಒತ್ತಾಯಗಳೆಂದರೇ, ವಕ್ಫ್ ತಿದ್ದುಪಡಿ ಕಾಯ್ದೆ ೨೦೨೫ ಅನ್ನು ತಕ್ಷಣ ವಾಪಸ್ಸು ಪಡೆಯಬೇಕು, ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗುವ ಯಾವುದೇ ವಿಧಿಯನ್ನು ಜಾರಿಮಾಡಬಾರದು, ಮುಸ್ಲಿಂರ ಮೇಲೆ ನಡೆಯುತ್ತಿರುವ ವೈಯಕ್ತಿಕ ದಾಳಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಮುಸ್ಲಿಂ ಸಮುದಾಯದ ಅಭ್ಯುದಯಕ್ಕಾಗಿ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಯೋಜನೆಗಳನ್ನು ರೂಪಿಸಬೇಕು ಪಹಲ್ಗಾಂ ಹತ್ಯಾಕಾಂಡದ ಆರೋಪಿಗಳಿಗೆ ಗರಿಷ್ಠ ಶಿಕ್ಷೆ ನೀಡಬೇಕು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಮುಸ್ಲಿಂರ ವಿರುದ್ಧ ಅವಹೇಳನಕಾರಿ ವಿಷಯ ಹರಡುವವರ ವಿರುದ್ಧ ಕಠಿಣ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲೇ, ಕಾಶ್ಮೀರದ ಪೆಹಲ್ಗಾಂನಲ್ಲಿ ನಡೆದ ಭಯಾನಕ ಹತ್ಯಾಕಾಂಡವನ್ನು ಖಂಡಿಸಿ, ದಾಳಿಯಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸಲಾಯಿತು.ಸಮಾವೇಶದಲ್ಲಿ ಜನಪರ ಸಂಘಟನೆಗಳ ಮುಖಂಡ ಧರ್ಮೇಶ್, ದಲಿತ ಮುಖಂಡ ಸಂದೇಶ್, ಮರಿ ಜೋಸೆಫ್, ಧಾರ್ಮಿಕ ಮುಖಂಡರಾದ ಹಫಿಜ್ ಫರುರ್ ಅಹಮದ್, ಮೌಲಾನಾ ವಸೀಮ್, ಮೌಲಾನಾ ಅಜ್ಹರ್ ಉಲ್ಲಾ ಖಸ್ವಿ, ಮುಫ್ತಿ ಜುಬೇರ್, ಮೌಲಾನಾ ನಸೀರ್ ಹುಸೇನ್ ರಜ್ವಿ, ಮೌಲಾನಾ ಅನ್ವಾರ್ ಅಸಾದಿ, ಅಬ್ದುಲ್ ಹಾನನ್, ಮುಫ್ತಿ ನಸೀಮುದ್ದೀನ್ ಸಾಬ್, ಮುಬಶಿರ್ ಅಹಮದ್ ಮತ್ತು ಇತರರು ಉಪಸ್ಥಿತರಿದ್ದರು. ಜನಾಬ್ ಮುಫ್ತಿ ಇದ್ರೀಸ್ ಅಹಮದ್ ಸಾಬ್ ಮತ್ತು ಇಮ್ರಾನ್ ಖಾದ್ರಿ ಅವರು ಪ್ರಾರ್ಥನೆ ನಡೆಸಿದರು. ಸಾರೆ ಜಹಾಂ ಸೇ ಅಚ್ಚಾ ಗೀತೆಯನ್ನು ಶಾಹೀನ್ ಕಾಲೇಜಿನ ವಿದ್ಯಾರ್ಥಿಗಳು ಹಾಡಿದರು.