ಕಾರ್ಮಿಕರ ಆತ್ಮ ಗೌರವಕ್ಕೆ ಮನ್ನಣೆ ನೀಡಿ

KannadaprabhaNewsNetwork | Published : May 4, 2025 1:31 AM

ಸಾರಾಂಶ

ಕಾರ್ಮಿಕರ ಶ್ರಮ ಮತ್ತು ಸಮರ್ಪಣೆಯನ್ನು ಗುರುತಿಸುವುದು, ಕಾರ್ಮಿಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು

ದಾಂಡೇಲಿ; ಶ್ರಮಜೀವಿಗಳ ಕೆಲಸವನ್ನು ಗೌರವಿಸುವ ಹಾಗೂ ಕಾರ್ಮಿಕರ ಆತ್ಮಗೌರವಕ್ಕೆ ಮನ್ನಣೆ ನೀಡಿ ಮೇ 1ರಂದು ಜಾಗತಿಕವಾಗಿ ಅಂತಾರಾಷ್ಟ್ರೀಯ ಕಾರ್ಮಿಕರ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ನ್ಯಾಯವಾದಿ ಅನಂತ ಸವದಿ ಹೇಳಿದರು.

ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದಿಂದ ಗುರುವಾರ ನಗರದ ಕಾರ್ಮಿಕ ಭವನದಲ್ಲಿ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಪ್ರಯುಕ್ತ ಕಾನೂನು ಅರಿವು ನೆರವು ಮತ್ತು ಶ್ರಮಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕಾರ್ಮಿಕರ ಶ್ರಮ ಮತ್ತು ಸಮರ್ಪಣೆಯನ್ನು ಗುರುತಿಸುವುದು, ಕಾರ್ಮಿಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಶೋಷಣೆಯಿಂದ ರಕ್ಷಿಸುವುದು ಕಾರ್ಮಿಕ ದಿನದ ಉದ್ದೇಶವಾಗಿದೆ. ತಮಗಿರುವ ಕಾನೂನಿನ ಬಗ್ಗೆ ಅರಿವು ಹೊಂದಿರಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕಾರ್ಮಿಕ ನಿರೀಕ್ಷಕ ಚೇತನ್ ಹುಕಮನ್ನವರ, ಕಾರ್ಮಿಕರಿಗಾಗಿ ಕಾರ್ಮಿಕ ಇಲಾಖೆಯಲ್ಲಿರುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿ ಈ ಸೌಲಭ್ಯಗಳನ್ನು ಪಡೆದು ಕೊಳ್ಳಬೇಕೆಂದರು.

ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷ ಅಷ್ಟಾಕ್ ಶೇಖ ಉದ್ಘಾಟಿಸಿದರು. ನಗರ ಠಾಣೆಯ ಪಿಎಸ್‌ಐ ಅಮೀನ ಅತ್ತಾರ, ಮಾನವ ಹಕ್ಕುಗಳ ಆಯೋಗ ಸಂಘಟನೆಯ ನಿರ್ದೇಶಕ ಫೀರೋಜ್‌ ಪಿರ್ಜಾದೆ, ಮಜೀದ್‌ ಸನದಿ, ಸಮಾಜ ಸೇವಕ ಜಕ್ಕಂ ದೇವರಾಜ, ಆಟೋ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಾಬಾಸಾಬ ಜಮಾದಾರ, ಟೂ ವೀಲರ್ ಮೆಕಾನಿಕಲ್ ಅಸೋಸಿಯೇಷನ್‌ ಅಧ್ಯಕ್ಷ ಗುರುರಾಜ, ಕಟ್ಟಡ ಕಾರ್ಮಿಕರ ಸಂಘಟನೆಯ ಉಪಾಧ್ಯಕ್ಷ ಬಾಬು ಲಾಲ್ ಮಾತನಾಡಿದರು.

ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ಅಧ್ಯಕ್ಷ ರಾಜೇಸಾಬ ಕೇಸನೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘವು ಕಾರ್ಮಿಕರನ್ನು ಸಂಘಟಿಸಿಕೊಂಡು ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಸಹಾಯ ಸೌಲಭ್ಯಗಳನ್ನು ಒದಗಿಸಿ ಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಪತ್ರಕರ್ತ, ಕವಿ ಪ್ರವೀಣಕುಮಾರ್ ಸುಲಾಖೆ ಶ್ರಮಿಕರ ಬದುಕಿನ ಕುರಿತಂತೆ ಕವನ ವಾಚನ ಮಾಡಿದರು. ಕಾರ್ಯಕ್ರಮದಲ್ಲಿ ಶ್ರಮಿಕರನ್ನು ಗೌರವಿಸಿ, ಸನ್ಮಾನಿಸಲಾಯಿತು. ಪತ್ರಕರ್ತ ಸಂದೇಶ್ ಎಸ್.ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜ ಸೇವಕ ಶ್ರೀಕಾಂತ ಅಸೋದೆ ನಿರೂಪಿಸಿ, ಸ್ವಾಗತಿಸಿದರು.

ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಪ್ರಯುಕ್ತ ಕಾನೂನು ಅರಿವು ಕಾರ್ಯಕ್ರಮ ನಡೆಯಿತು.

Share this article