ಅನುಚಿತವಾಗಿ ವರ್ತಿಸಿದ ಉಪನ್ಯಾಸಕರ ವಿರುದ್ಧ ದೂರು ದಾಖಲಿಸಿ: ಶಾಸಕ ಸಿ.ಸಿ. ಪಾಟೀಲ ಸೂಚನೆ

KannadaprabhaNewsNetwork |  
Published : Aug 12, 2026, 02:45 AM IST
(11ಎನ್.ಆರ್.ಡಿ5 ವಿದ್ಯಾರ್ಥಿಗಳ ಜೊತೆ ಅಸಭ್ಯವಾಗಿ ವರ್ತನೆ ಮಾಡಿದ ಉಪನ್ಯಾಕ ಮೇಲೆ ಕ್ರಮಕ್ಕೆ ಡಿಡಿಪಿಯುವರಗೆ ಸೂಚನೆ ನೀಡಿದರು.) | Kannada Prabha

ಸಾರಾಂಶ

ಶಾಸಕ ಸಿ.ಸಿ. ಪಾಟೀಲ ಅವರು, ಪದವಿಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಎಸ್.ಬಿ. ಮಸನಾಯಿಕರ ಅವರ ಜತೆ ಮಾತನಾಡಿ, ಇದನ್ನು ಸಮಗ್ರವಾಗಿ ಪರಿಶೀಲಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಮುಂದಾಗಬೇಕು ಎಂದರು.

ನರಗುಂದ: ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕ ಮನ್ಸೂರ್ ಅಲಿಖಾನ ಹೊಸಪೇಟ ಖಾಜಿ ಎಂಬವರು ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವುದನ್ನು ಖಂಡಿಸಿ ನೂರಾರು ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿ ಶಾಸಕರ ಮನೆಗೆ ತೆರಳಿ ಮನವಿ ನೀಡಿ ದೂರನ್ನು ಸಲ್ಲಿಸಿದ್ದರು. ಈ ಹಿನ್ನೆಲೆ ಮಂಗಳವಾರ ಶಾಸಕ ಸಿ.ಸಿ. ಪಾಟೀಲ, ಡಿಡಿಪಿಯು ಎಸ್.ಬಿ. ಮಸನಾಯಿಕ ಅವರು ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಅಹವಾಲನ್ನು ಆಲಿಸಿದರು.

ಈ ವೇಳೆ ಶಾಸಕ ಸಿ.ಸಿ. ಪಾಟೀಲ ಅವರು ಮಾತನಾಡಿ, ಸಂಬಂಧಿಸಿದ ಉಪನ್ಯಾಸಕನ ವಿರುದ್ಧ ನಿಯಮಾನುಸಾರ ಶಿಸ್ತುಕ್ರಮ ಕೈಗೊಂಡು ಅಮಾನತು ಮಾಡಬೇಕು ಎಂದು ವಿದ್ಯಾರ್ಥಿಗಳ ಸಮ್ಮುಖದಲ್ಲಿಯೇ ಡಿಡಿಪಿಯು ಎಸ್. ಬಿ. ಮಸನಾಯಿಕ ಅವರಿಗೆ ಖಡಕ್ ಸೂಚನೆ ನೀಡಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಉಪನ್ಯಾಸಕನ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದರು. ಖಾಜಿಯವರು ಉಪನ್ಯಾಸಕರು ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ಮಾತನಾಡುತ್ತಾರೆ. ಅವರ ಬೋಧನಾ ವಿಧಾನದಿಂದ ಪಾಠ ಅರ್ಥವಾಗುತ್ತಿಲ್ಲ ಹಾಗೂ ಪ್ರಶ್ನೆ ಕೇಳಿದಾಗ ವಿದ್ಯಾರ್ಥಿಗಳನ್ನು ಬ್ಯಾಗ್ ಸಮೇತ ತರಗತಿಯಿಂದ ಹೊರಗೆ ಕಳುಹಿಸುತ್ತಾರೆ. ಅಲ್ಲದೇ, ವಿದ್ಯಾರ್ಥಿನಿಯರಿಗೆ ಕುಂಕುಮ, ಬಳೆ, ಕಾಲುಗೆಜ್ಜೆ ಹಾಗೂ ಹೂವು ಧರಿಸಿಕೊಂಡು ಬರಬಾರದು ಎಂದು ಹೇಳುತ್ತಾರೆ. ಜತೆಗೆ ಸಕಾಲಕ್ಕೆ ಕಾಲೇಜಿಗೆ ಬರದೇ ಸಹೋದ್ಯೋಗಿಗಳೊಂದಿಗೂ ಸರಿಯಾಗಿ ವರ್ತಿಸದೇ ಹಾಜರಾತಿ ಪುಸ್ತಕವನ್ನೇ ವೈಟ್ನರ್ ಮೂಲಕ ತಿದ್ದುತ್ತಾರೆ. ಪ್ರಶ್ನಿಸಿದ ಪ್ತಾಂಶುಪಾಲರನ್ನೇ ಅವಾಚ್ಯ ಶಬ್ದಗಳಿಂದ ಬೈಯುತ್ತಾರೆ. ನಮ್ಮೊಂದಿಗೆ ಕೆಟ್ಟ ಪದ ಬಳಸಿ ದೂಷಿಸುತ್ತಾರೆ ಎಂದು ವಿದ್ಯಾರ್ಥಿನಿಯರು ಶಾಸಕರ ಎದುರೇ ಗಂಭೀರ ಆರೋಪ ಮಾಡಿದರು.

ಇದರಿಂದ ಕೋಪಗೊಂಡ ಶಾಸಕ ಸಿ.ಸಿ. ಪಾಟೀಲ ಅವರು, ಪದವಿಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಎಸ್.ಬಿ. ಮಸನಾಯಿಕರ ಅವರ ಜತೆ ಮಾತನಾಡಿ, ಇದನ್ನು ಸಮಗ್ರವಾಗಿ ಪರಿಶೀಲಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಮುಂದಾಗಬೇಕು. ಜತೆಗೆ ಆರೋಪಗಳು ಸತ್ಯವೆಂದು ದೃಢಪಟ್ಟಲ್ಲಿ ಸಂಬಂಧಿಸಿದ ಉಪನ್ಯಾಸಕನ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳಬೇಕು. ಅಸಭ್ಯ ವರ್ತನೆ ತೋರಿದ ಉಪನ್ಯಾಸಕನ‌ ಮೇಲೆ ಕ್ರಮ ಕೈಗೊಳ್ಳದಿದ್ದರೆ, ಈ ಪ್ರಕರಣವನ್ನು ಮುಂಬರುವ ಅಧಿವೇಶನದಲ್ಲಿಯೂ ಪ್ರಸ್ತಾಪಿಸಿ ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಸಚಿವರು ಗಮನಕ್ಕೆ ತಂದು ಉಪನ್ಯಾಸಕನ ವಿರುದ್ಧ ಹಾಗೂ ತಮ್ಮ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವುದಾಗಿ ಶಾಸಕ ಪಾಟೀಲ ಮಸನಾಯಿಕ ಅವರಿಗೆ ಎಚ್ಚರಿಸಿದರು.

ಇದಕ್ಕೆ ಸ್ಪಂದಿಸಿದ ಡಿಡಿಪಿಯು ಶಿಸ್ತುಕ್ರಮಕ್ಕೆ ಮೇಲಧಿಕಾರಿಗಳಿಗೆ ಬರೆಯುವುದಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ, ನರಗುಂದ ಘಟಕದ ಕಾರ್ಯಕರ್ತರು ಉಪನ್ಯಾಸಕ ಮನ್ಸೂರಾಲಿಖಾನ ಹೊಸಪೇಟ ಖಾಜಿ ಅವನ ಮೇಲೆ ಶಿಸ್ತುಕ್ರಮ ಜರುಗಿಸಬೇಕೆಂದು ಶಾಸಕರಿಗೆ ಮತ್ತು ಡಿಡಿಪಿಯು ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರಾಚಾರ್ಯ ಸಿ.ಎಸ್. ಸುಳ್ಹದ, ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್ಲ ಮೀನುಗಾರ ಸಮುದಾಯಗಳು ಸಂಘಟಿತವಾಗಲಿ: ಗುಂಡು ಐನಾಪುರ
ನಾಟಿ ಹಬ್ಬ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ