ಅಕ್ರಮ ಗೋಸಾಗಾಟ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸಿ: ಶರಣ್‌ ಪಂಪ್‌ವೆಲ್‌

KannadaprabhaNewsNetwork | Published : Mar 29, 2025 12:31 AM

ಸಾರಾಂಶ

ಮಂಗಳೂರು ಸೂರಲ್ಪಾಡಿ ಮಸೀದಿ ಬಳಿ ಹಿಂಸಾತ್ಮಕ ರೀತಿಯಲ್ಲಿ ಗೋವುಗಳನ್ನು ಹತ್ಯೆ ಮಾಡಲು ಅಕ್ರಮ ಸಾಗಾಟ ನಡೆಸುತ್ತಿರುವ ಸಂದರ್ಭ ಅದನ್ನು ತಡೆಯುವಾಗ ಗೋರಕ್ಷಕರ ಜೊತೆಯಿದ್ದ ಚಂದನ್ ಭಟ್ ರವರ ವಾಹನದ ಮೇಲೆ ಗುಂಡು ಹಾರಿಸಿ ಕೊಲೆಗೆ ಪ್ರಯತ್ನ ಮಾಡಿರುವ ಕೃತ್ಯ ನಡೆದಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಸೂರಲ್ಪಾಡಿ ಅಕ್ರಮ ಗೋಸಾಗಾಟಗರಿಂದ ಗೋರಕ್ಷಕರ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಆರೋಪಿಗಳ ವಿರುದ್ಧ ಗೂಂಡಾ ಕಾಯಿದೆ ದಾಖಲಿಸುವಂತೆ ವಿಶ್ವಹಿಂದು ಪರಿಷತ್‌ ಮುಖಂಡ ಶರಣ್ ಪಂಪುವೆಲ್ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಮಂಗಳೂರು ಸೂರಲ್ಪಾಡಿ ಮಸೀದಿ ಬಳಿ ಹಿಂಸಾತ್ಮಕ ರೀತಿಯಲ್ಲಿ ಗೋವುಗಳನ್ನು ಹತ್ಯೆ ಮಾಡಲು ಅಕ್ರಮ ಸಾಗಾಟ ನಡೆಸುತ್ತಿರುವ ಸಂದರ್ಭ ಅದನ್ನು ತಡೆಯುವಾಗ ಗೋರಕ್ಷಕರ ಜೊತೆಯಿದ್ದ ಚಂದನ್ ಭಟ್ ರವರ ವಾಹನದ ಮೇಲೆ ಗುಂಡು ಹಾರಿಸಿ ಕೊಲೆಗೆ ಪ್ರಯತ್ನ ಮಾಡಿರುವ ಕೃತ್ಯ ನಡೆದಿದೆ. ಈಗಾಗಲೇ ಚಂದನ್ ಭಟ್ ಬಜ್ಪೆ ಪೊಲೀಸರಿಗೆ ದೂರು ನೀಡಿದ್ದಾರೆ.ಜಿಲ್ಲೆಯಲ್ಲಿ ನಿರಂತರವಾಗಿ ಅಕ್ರಮ ಗೋಸಾಗಾಟ, ಅಕ್ರಮ ಗೋಮಾಂಸ ಮಾರಾಟವು ಮಿತಿ ಮೀರುತ್ತಿದ್ದು ಕಳೆದ 10 ದಿನಗಳಲ್ಲಿ 6 ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ. ಇದೀಗ ಗೋಸಾಗಾಟಗಾರರು ಅಕ್ರಮ ಗೋಸಾಗಾಟ ಮಾಡುವುದರೊಂದಿಗೆ ಅಕ್ರಮ ಪಿಸ್ತೂಲುಗಳನ್ನು ಬಳಸಿ ಗೋರಕ್ಷಕರ ಕೊಲೆಗೆ ಪ್ರಯತ್ನಿಸುತ್ತಿರುವುದು ಬಹಳ ಆತಂಕಕಾರಿಯಾಗಿದೆ. ಇದೊಂದು ಭಯೋದ್ಪಾದಕ ಕೃತ್ಯವಾಗಿದ್ದು, ಈ ಕೂಡಲೇ ನೈಜ ಆರೋಪಿಗಳನ್ನು ಬಂಧಿಸಿ, ಅವರ ಮೇಲೆ ಅಕ್ರಮ ಗೋಸಾಗಾಟ, ಗೋಕಳ್ಳತನ, ಗೋಹತ್ಯೆ ಕೇಸು, ಶಾಸ್ತ್ರಸ್ತ್ರ ಕಾಯ್ದೆ ಪ್ರಕಾರ ಕೇಸು ದಾಖಲಿಸುವುದರೊಂದಿಗೆ ಗೂಂಡಾ ಕಾಯಿದೆ ಅಡಿ ಬಂಧಿಸಿ ಕ್ರಮಕೈಗೊಳ್ಳಬೇಕು ಎಂದು ಶರಣ್ ಪಂಪುವೆಲ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ. ಕರ್ನಾಟಕ ಕ್ರಿಮಿನಲ್ ರಾಜ್ಯವಾಗುತ್ತಿದೆ:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಗೋ ಹತ್ಯೆ, ಗೋ ಸಾಗಾಟ ಪ್ರಕರಣಗಳು ಹೆಚ್ಚುತ್ತಿದ್ದು, ಗೋಕಳ್ಳರು ರಿವಾಲ್ವರ್ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಪೊಲೀಸ್ ಇಲಾಖೆಯ ಬದಲು ಬಜರಂಗದಳ ಸಂಘಟನೆ ಪತ್ತೆ ಮಾಡಿ ಕೊಡುವಂತಹ ಪರಿಸ್ಥಿತಿ ಉಂಟಾಗಿದೆ. ಅಪರಾಧಿಗಳು ಭಯವಿಲ್ಲದೆ ಹಾಡು ಹಗಲೇ ರಾಜಾರೋಷವಾಗಿ ಸಾಗಾಟ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಇದೆಯೇ ಎಂಬ ಬಗ್ಗೆ ಅನುಮಾನ ಉಂಟಾಗುತ್ತಿದ್ದು, ಅಕ್ರಮ ಗೋಸಾಗಾಟ ಗೋಹತ್ಯೆಯ ಪ್ರಕರಣಗಳನ್ನು ನಿರ್ಲಕ್ಷ್ಯಮಾಡುವುದರಿಂದ ಸಮಾಜದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಬರಬಹುದು ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಎಚ್ಚರಿಸಿದ್ದಾರೆ.ಸುರಲ್ಪಾಡಿ ಬಳಿ ಬಜರಂಗದಳ ಕಾರ್ಯಕರ್ತರ ಮೇಲೆ ಗುಂಡು ಹಾರಿಸಿ ಕೊಲೆ ಯತ್ನ ನಡೆದಿದೆ. ಗೋವುಗಳನ್ನು ಅಮಾನವೀಯ ವಾಗಿ ಕಟ್ಟಿ ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದುದನ್ನು ನೋಡಿದರೆ ಹಿಂದೂಗಳಲ್ಲಿ ಆಕ್ರೋಶದ ಕಟ್ಟೆ ಒಡೆಯುವಂತಾಗಿದೆ. ಗೋಕಳ್ಳರಿಗೆ ಅಕ್ರಮ ರಿವಾಲ್ವರ್ ಎಲ್ಲಿಂದ ಬಂತು, ಇದರ ಹಿಂದೆ ಗೋ ಮಾಂಸ ಮಾಫಿಯಾ ಇರುವ ಶಂಕೆಯಿದ್ದು ಸಿಐಡಿ ತನಿಖೆ ನಡೆಸಬೇಕು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

Share this article