ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ಉತ್ಸವಕ್ಕೆ ಹ್ಯಾಟ್ರಿಕ್ ಹಿರೋ ಶಿವರಾಜ್‌ಕುಮಾರ, ನಟರಾದ ಅಜೇಯರಾವ್, ಡಾಲಿ ಧನಂಜಯ್, ರವಿಚಂದ್ರನ್ ಅವರನ್ನು ಆಹ್ವಾನಿಸಲಾಗುವುದು. ಸಿನಿ ಕಲಾವಿದರೊಂದಿಗೆ ಸ್ಥಳೀಯ ಹಾಗೂ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಶಾಸ್ತ್ರೀಯ ಸಂಗೀತ ಮತ್ತು ಜಾನಪದ ಕಲಾವಿದರು ಕೂಡ ಉತ್ಸವಕ್ಕೆ ಆಗಮಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹಾಗೂ ಶಾಸಕ ಎಚ್.ಆರ್. ಗವಿಯಪ್ಪ ತಿಳಿಸಿದರು.
ನಾಲ್ಕು ವೇದಿಕೆಗಳು: ಹಂಪಿ ಉತ್ಸವಕ್ಕಾಗಿ ನಾಲ್ಕು ವೇದಿಕೆಗಳನ್ನು ನಿರ್ಮಿಸಲಾಗುತ್ತಿದೆ. ಗಾಯತ್ರಿ ಪೀಠದಲ್ಲಿ ಮುಖ್ಯ ವೇದಿಕೆ, ಎದುರು ಬಸವಣ್ಣ ಮಂಟಪದಲ್ಲಿ ಎರಡನೇ ವೇದಿಕೆ, ವಿರೂಪಾಕ್ಷೇಶ್ವರ ದೇವಾಲಯದ ಆವರಣದಲ್ಲಿ ಮೂರನೇ ವೇದಿಕೆ ಮತ್ತು ಸಾಸಿವೆ ಕಾಳು ಗಣಪತಿ ಮಂಟಪದ ಬಳಿ ನಾಲ್ಕನೇ ವೇದಿಕೆ ನಿರ್ಮಿಸಲಾಗುತ್ತಿದೆ. ಹಂಪಿ ಗಜಶಾಲೆ ಆವರಣದಲ್ಲಿ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದ್ದು, ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಕೂಡ ಬರೆಯಲಾಗಿದೆ. 110 ಸ್ಥಳೀಯ ಕಲಾವಿದರನ್ನೊಳಗೊಂಡ ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ಸಂಪೂರ್ಣ ವೆಚ್ಚ ಭರಿಸಲಾಗುವುದು ಎಂದು ಪತ್ರದ ಮೂಲಕ ತಿಳಿಸಲಾಗಿದೆ ಎಂದರು.
ಜಾನಪದಕ್ಕೂ ಪ್ರಾಧ್ಯಾನ್ಯತೆ: ಈ ಬಾರಿಯ ಉತ್ಸವದಲ್ಲಿ ಚನಲಚಿತ್ರ ಗೀತೆಗಳ ರಸಮಂಜರಿಯೊಂದಿಗೆ ಸ್ಥಳೀಯ ಜಾನಪದ ಸೊಗಡಿನ ಗೀತೆಗಳಿಗೂ ಪ್ರಾಧ್ಯಾನ್ಯತೆ ನೀಡಲಾಗುವುದು. ಹಂಪಿ ಉತ್ಸವದ ರೂವಾರಿ ಎಂ.ಪಿ. ಪ್ರಕಾಶ ಅವರ ಆಶಯದಂತೆ ಉತ್ಸವವನ್ನು ಸಾಂಸ್ಕೃತಿಕ ಮಾದರಿಯಲ್ಲೇ ಆಚರಿಸಲಾಗುವುದು. ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಸಂಗೀತ ಸೇರಿದಂತೆ ಸಂಗೀತ ಕಲೆಗೆ ಹೆಚ್ಚಿನ ಅವಕಾಶ ನೀಡಲಾಗುವುದು. ಭರತನಾಟ್ಯ, ಸಾಂಸ್ಕೃತಿಕ ಕಲೆಯ ಅನಾವರಣಕ್ಕೆ ಅವಕಾಶ ನೀಡಲಾಗುವುದು ಎಂದರು.ಬಂಡಿ ಎತ್ತುಗಳ ಪ್ರದರ್ಶನ: ಈ ಬಾರಿಯ ಹಂಪಿ ಉತ್ಸವದಲ್ಲಿ ಬಂಡಿ ಎತ್ತುಗಳ ಪ್ರದರ್ಶನ ವಿಶೇಷವಾಗಿ ನಡೆಯಲಿದೆ. ಗುಂಡು ಎತ್ತುವುದು, ಬಂಡಿ ಗಾಲಿ ಪ್ರದರ್ಶನ, ಕುಸ್ತಿ ಪಂದ್ಯಾವಳಿ ಕೂಡ ಆಯೋಜಿಸಲಾಗುವುದು. ಶಿಲ್ಪಕಲಾ ಪ್ರದರ್ಶನ, ಚಿತ್ರಕಲೆ, ಫೋಟೋ ಪ್ರದರ್ಶನ ಕೂಡ ನಡೆಯಲಿದೆ. ಹಂಪಿಗೆ ಸಂಬಂಧಿಸಿದ ಫೋಟೋಗಳನ್ನು ಫೋಟೋಗ್ರಾಫರ್ ಪ್ರದರ್ಶಿಸಲಿದ್ದಾರೆ. ಉತ್ಸವದ ನಿಮಿತ್ತ ಕುರಿಗಳ ಪ್ರದರ್ಶನ, ಶ್ವಾನ ಪ್ರದರ್ಶನ ಕೂಡ ನಡೆಯಲಿದೆ ಎಂದರು.
ತುಂಗಾರತಿ, ವಸಂತ ವೈಭವ: ತುಂಗಾರತಿ ಹಾಗೂ ವಸಂತ ವೈಭವ ನಡೆಯಲಿದೆ. ತುಂಗಭದ್ರಾ ನದಿಯಲ್ಲಿ ಶ್ರೀವಿದ್ಯಾರಣ್ಯ ಭಾರತಿ ಸ್ವಾಮೀಜಿ ನೇತೃತ್ವದಲ್ಲಿ ತುಂಗಾರತಿ ನಡೆಯಲಿದೆ. ವಸಂತ ವೈಭವದಲ್ಲಿ ಆನೆಗಳು, ಕುದುರೆಗಳನ್ನು ತರಲಾಗುವುದು. ಹೊಸಪೇಟೆಯಲ್ಲಿ ವಸಂತ ವೈಭವ ನಡೆಯಲಿದೆ. ಹೊಸಪೇಟೆಯಿಂದ ಹಂಪಿಗೆ 100 ಉಚಿತ ಬಸ್‌ಗಳನ್ನು ಉತ್ಸವದ ವೇಳೆ ಬಿಡಲಾಗುವುದು ಎಂದರು.
ಹರಪನಹಳ್ಳಿ ಶಾಸಕಿ ಎಂ.ಪಿ. ಲತಾ ಮಾತನಾಡಿ, ಹಂಪಿ ಉತ್ಸವವನ್ನು ಮೈಸೂರು ದಸರೆ ಮಾದರಿಯಲ್ಲಿ ಪ್ರತಿವರ್ಷ ಆಚರಣೆ ಮಾಡಬೇಕು, ಗೆಜೆಟ್‌ನಲ್ಲಿ ಆದೇಶ ಆಗಿರುವಂತೆ ಪ್ರತಿವರ್ಷ ನ. 3,4 ಮತ್ತು 5ರಂದು ಹಂಪಿ ಉತ್ಸವ ಆಚರಣೆ ಮಾಡಬೇಕು. ಹಂಪಿ ಉತ್ಸವ ಎಂ.ಪಿ. ಪ್ರಕಾಶ ಅವರ ಆಶಯದಂತೇ ನಡೆಯಬೇಕು. ಸಾಂಸ್ಕೃತಿಕ ವೈಭವ ಮೇಳೈಸಬೇಕು ಎಂದರು.
ಖುದ್ದು ತೆರಳಿ ಆನಂದ ಸಿಂಗ್‌ರನ್ನು ಆಹ್ವಾನಿಸುವೆ: ಗವಿಯಪ್ಪ
ಉತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸಾಹಿತಿ ಕುಂ. ವೀರಭದ್ರಪ್ಪರನ್ನು ಸೇರಿದಂತೆ ಬಳ್ಳಾರಿ ಹಾಗೂ ವಿಜಯನಗರ ಅವಳಿ ಜಿಲ್ಲೆಗಳ ರಾಜಕಾರಣಿಗಳು, ಸಾಹಿತಿಗಳು, ಸಾಂಸ್ಕೃತಿಕ ಕಲಾವಿದರು, ಸ್ವಾತಂತ್ರ್ಯ ಹೋರಾಟಗಾರರ ಮನೆಗಳಿಗೆ ತೆರಳಿ ಖುದ್ದು ಆಹ್ವಾನಿಸುವೆ. ಉಭಯ ಜಿಲ್ಲೆಗಳ ಶಾಸಕರು, ಮಾಜಿ ಶಾಸಕರು, ಸಂಸದರು ಹಾಗೂ ಮಾಜಿ ಸಂಸದರನ್ನು ಕೂಡ ಆಹ್ವಾನಿಸುವೆ ಎಂದರು.