ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಜಿಲ್ಲಾ ಪಂಚಾಯ್ತಿಯ ಕಾವೇರಿ ಸಭಾಂಗಣದಲ್ಲಿ ನಡೆದ ೨೦೨೬-೨೭ನೇ ಸಾಲಿನ ಮುಂಗಾರು ಪರಿಸ್ಥಿತಿ, ಬೆಳೆ ಹಾಗೂ ಕೆರೆಗಳ ಪರಿಸ್ಥಿತಿ ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸಚಿವರಾದ ಎನ್.ಚಲುವರಾಯಸ್ವಾಮಿ ಹಾಗೂ ಪಿ.ಎಂ.ನರೇಂದ್ರಸ್ವಾಮಿ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಶಾಸಕ ಪಿ.ರವಿಕುಮಾರ್ ರೈತರ ಬೆಳೆಗಳಿಗೆ ನೀರು ಹರಿಸುವ ಬಗ್ಗೆ ಸ್ಪಷ್ಟತೆ ನೀಡುವಂತೆ ಗಮನಸೆಳೆದ ಪ್ರಶ್ನೆಗೆ ಉತ್ತರಿಸಿದರು.
ಹಾಲಿ ಕೆಆರ್‌ಎಸ್‌ನಲ್ಲಿ ೧೦೬ ಅಡಿಯವರೆಗೆ ನೀರು ದಾಖಲಾಗಿದೆ. ಮುಂದಿನ ಎಂಟತ್ತು ದಿನಗಳಲ್ಲಿ ಮಳೆಯ ಪರಿಸ್ಥಿತಿ, ಜಲಾಶಯದಲ್ಲಿ ಸಂಗ್ರಹವಾಗುವ ನೀರನ್ನು ಗಮನದಲ್ಲಿಟ್ಟುಕೊಂಡು ಬೆಳೆಗಳಿಗೆ ಕಟ್ಟು ನೀರು ಪದ್ಧತಿಯಡಿ ನೀರು ಕೊಡಲು ಸಾಧ್ಯವೋ, ಹೆಚ್ಚು ನೀರು ಹರಿದುಬಂದರೆ ಬೆಳೆಗಳಿಗೆ ನಿರಂತರವಾಗಿ ಹರಿಸುವ ಕುರಿತಂತೆ ನಿರ್ಧಾರ ಮಾಡಲಾಗುವುದು. ಅಲ್ಲಿಯವರೆಗೆ ಕಾದು ನೋಡಿ ಅಂತಿಮ ನಿರ್ಧಾರ ಮಾಡಲಾಗುವುದು ಎಂದರು.ಹೇಮಾವತಿ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ತುರ್ತು ಅವಶ್ಯಕತೆ ಇದೆ. ಹಾಗಾಗಿ ಮಂಗಳವಾರವೇ ಆ ಜಿಲ್ಲೆಯ ಉಸ್ತುವಾರಿ ಸಚಿವರೊಂದಿಗೆ ಮಾತುಕತೆ ನಡೆಸಿ ಆ ಭಾಗಕ್ಕೆ ನೀರು ಹರಿಸುವ ಸಂಬಂಧ ತೀರ್ಮಾನ ಮಾಡಲಾಗುವುದು. ಆರ್‌ಡಿಪಿಆರ್, ಜಲಜೀವನ್ ಮಿಷನ್ ಕಾಮಗಾರಿಗಳ ಬಗ್ಗೆಯೂ ಸಚಿವರೊಂದಿಗೆ ಚರ್ಚಿಸಿ ಕಾಮಗಾರಿಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸುವ ಭರವಸೆ ನೀಡಿದರು.
ಮುಂದಿನ ಮಳೆಯ ಪರಿಸ್ಥಿತಿಯನ್ನು ನೋಡಿಕೊಂಡು ಕೃಷಿಗೆ ನೀರು ಕೊಡಬೇಕೋ, ಬೇಡವೋ ಎಂಬುದನ್ನು ನಿರ್ಧರಿಸಲಾಗುತ್ತದೆ. ಅಲ್ಲಿಯವರೆಗೆ ಈಗಿರುವ ನೀರಿನಲ್ಲಿ ಸಾಧ್ಯವಾದಷ್ಟು ಕೆರೆಗಳನ್ನು ತುಂಬಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.