ಕಡೆಯ ಆಷಾಢ ಶುಕ್ರವಾರ: ಚಾಮುಂಡಿಬೆಟ್ಟಕ್ಕೆ ಹರಿದು ಬಂದ ಭಕ್ತರು

KannadaprabhaNewsNetwork |  
Published : Aug 08, 2026, 01:15 AM IST
1 | Kannada Prabha

ಸಾರಾಂಶ

ಕಡೆಯ ಆಷಾಢ ಶುಕ್ರವಾರವಾದ್ದರಿಂದ ಚಾಮುಂಡೇಶ್ವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಮುಂಜಾನೆ 3 ಗಂಟೆಯಿಂದಲೇ ದೇವಸ್ಥಾನದಲ್ಲಿ ಪೂಜಾ ವಿಧಿವಿಧಾನಗಳು ಆರಂಭವಾದವು. ದೇವಿಗೆ ದೇವಾಲಯದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಮಹಾನ್ಯಾಸ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ಏಕದಶ ಪುಷ್ಪಾರ್ಚನೆ, ಸಹಸ್ರನಾಮಾರ್ಚನೆ ಸೇರಿ ವಿವಿಧ ಪೂಜೆಗಳನ್ನು ನೆರವೇರಿಸಲಾಯಿತು.

ಕನ್ನಡಪ್ರಭ ವಾರ್ತೆ ಮೈಸೂರು

ಆಷಾಢ ಮಾಸದ ಕಡೆಯ ಶುಕ್ರವಾರ ನಗರದ ಚಾಮುಂಡಿಬೆಟ್ಟದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಲಕ್ಷಾಂತರ ಮಂದಿ ಭಕ್ತರು ಭೇಟಿ ನೀಡಿ, ದೇವಿಯ ದರ್ಶನ ಪಡೆದರು.

ತುಂತುರು ಮಳೆಯನ್ನೂ ಲೆಕ್ಕಿಸದೆ ಮುಂಜಾನೆಯಿಂದಲೇ ವಿವಿಧೆಡೆಗಳಿಂದ ಚಾಮುಂಡಿಬೆಟ್ಟಕ್ಕೆ ಆಗಮಿಸಿದ ಭಕ್ತರು ನೂಕುನುಗ್ಗಲಿಲ್ಲದೆ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತು ದರ್ಶನ ಪಡೆದರು. ದೇವಸ್ಥಾನದ ಹೊರಗೆ ತುಂತುರು ಮಳೆ ಸುರಿಯುತ್ತಿದ್ದರೇ, ದೇವಸ್ಥಾನದ ಒಳಗೆ, ಸರತಿ ಸಾಲಿನಲ್ಲಿ ಜಯಘೋಷಗಳು ಮೊಳಗುತ್ತಿದ್ದವು. ಇದರೊಂದಿಗೆ ಚಾಮುಂಡಿಬೆಟ್ಟದಲ್ಲಿ ಸಂಭ್ರಮ, ಸಡಗರದಿಂದ ಆಷಾಢ ಶುಕ್ರವಾರ ಸಂಪನ್ನವಾಯಿತು.

ಕಡೆಯ ಆಷಾಢ ಶುಕ್ರವಾರವಾದ್ದರಿಂದ ಚಾಮುಂಡೇಶ್ವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಮುಂಜಾನೆ 3 ಗಂಟೆಯಿಂದಲೇ ದೇವಸ್ಥಾನದಲ್ಲಿ ಪೂಜಾ ವಿಧಿವಿಧಾನಗಳು ಆರಂಭವಾದವು. ದೇವಿಗೆ ದೇವಾಲಯದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಮಹಾನ್ಯಾಸ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ಏಕದಶ ಪುಷ್ಪಾರ್ಚನೆ, ಸಹಸ್ರನಾಮಾರ್ಚನೆ ಸೇರಿ ವಿವಿಧ ಪೂಜೆಗಳನ್ನು ನೆರವೇರಿಸಲಾಯಿತು. ಬೆಳಗ್ಗೆ 5.30 ರಿಂದ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಬೆಳಗ್ಗೆ 9.30, ಸಂಜೆ 6.30 ರಿಂದ 7 ರವರೆಗೆ ಮಹಾಮಂಗಳಾರತಿ ನೆರವೇರಿಸಲಾಯಿತು. ರಾತ್ರಿ 10 ಗಂಟೆಯವರೆಗೂ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ಗಣ್ಯರ ಭೇಟಿ:

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿವರಾದ ಕೆ.ಎಸ್. ಈಶ್ವರಪ್ಪ, ಅರವಿಂದ ಲಿಂಬಾವಳಿ, ಮಾಂಕಾಳ ವೈದ್ಯ, ಎಚ್.ಡಿ. ರೇವಣ್ಣ, ಎಂಎಲ್ಸಿ ಸೂರಜ್ ರೇವಣ್ಣ, ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ, ತೆಲುಗು ಹಾಸ್ಯನಟ ಸುನಿಲ್ ಸೇರಿದಂತೆ ಹಲವು ಗಣ್ಯರು ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.

ಮಹಾಲಕ್ಷ್ಮೀ ಅಲಂಕಾರ:

ಶ್ರೀ ಚಾಮುಂಡೇಶ್ವರಿ ದೇವಸ್ಥಾನವನ್ನು ವಿಶೇಷ ರೀತಿಯಲ್ಲಿ ಅಲಂಕಾರಗೊಳಿಸಲಾಗಿತ್ತು. ವಿವಿಧ ಬಣ್ಣಗಳ ಸೇವಂತಿಗೆ, ಚೆಂಡು ಹೂ, ಗುಲಾಬಿ ಸೇರಿದಂತೆ ವಿವಿಧ ಬಗೆಯ ಹೂಗಳಿಂದ ದೇವಸ್ಥಾನದ ಆವರಣ ಅಲಂಕೃತಗೊಂಡಿತ್ತು. ದೇವಾಲಯದ ಪ್ರವೇಶದ್ವಾರ, ಹೊರಾವರಣವೂ ವಿಶೇಷವಾಗಿ ಸಿಂಗಾರಗೊಂಡಿತ್ತು.

ತಾಯಿ ಚಾಮುಂಡೇಶ್ವರಿಗೆ ವಿಶೇಷ ಮಹಾಲಕ್ಷ್ಮಿ ಅಲಂಕಾರ ಮಾಡಲಾಗಿತ್ತು. ಅಲಂಕೃತಗೊಂಡು ಕಂಗೊಳಿಸುತ್ತಿದ್ದ ಚಾಮುಂಡೇಶ್ವರಿಯ ದರ್ಶನ ಪಡೆದು ಹೊರ ಬರುತ್ತಿದ್ದ ಭಕ್ತರಲ್ಲಿ ದನ್ಯತಾಭಾವ ಮೂಡಿತ್ತು.

ಚಾಮುಂಡಿಬೆಟ್ಟಕ್ಕೆ ಮುಂಜಾನೆಯಿಂದಲೇ ಭಕ್ತರ ದಂಡು ಹರಿದು ಬಂದಿತ್ತು. ಕೆಲವರು ಕೆಎಸ್ಆರ್ ಟಿಸಿ ಬಸ್‌ ಗಳಲ್ಲಿ ಬಂದರೆ ಇನ್ನು ಕೆಲವರು ಮೆಟ್ಟಿಲುಗಳು ಮೂಲಕ ಬೆಟ್ಟಕ್ಕೆ ಆಗಮಿಸಿದ್ದರು. ಚಾಮುಂಡಿಬೆಟ್ಟದ ಪಾದದಿಂದ ಪ್ರತಿ ಮೆಟ್ಟಿಲಿಗೂ ಅರಿಶಿಣ ಕುಂಕುಮ ಹೂಗಳನ್ನಿಟ್ಟು, ಕರ್ಪೂರ ಹಚ್ಚಿ ಭಕ್ತಿ ಭಾವದಿಂದ ಮೆಟ್ಟಿಲು ಹತ್ತಿ ತಮ್ಮ ಹರಕೆ ತೀರಿಸಿದರು.

ಬೆಟ್ಟಕ್ಕೆ ಆಗಮಿಸಿದ ಸಾವಿರಾರು ಭಕ್ತರಿಗೆ ಮಲ್ಟಿ ಲೆವೆಲ್ ಪಾರ್ಕಿಂಗ್ ಸ್ಥಳದಲ್ಲಿ ಯಶವಂತಪುರ ಭೀಮನಕುಪ್ಪೆಯ ಜಿ.ಕೆ. ಫೌಂಡೇಷನ್‌ ನ ಸವಿತಾ ಮಹೇಶ್ ಅವರು ಪ್ರಸಾದದ ವ್ಯವಸ್ಥೆ ಮಾಡಿದ್ದರು. ಬೆಳಗ್ಗೆ ಪೊಂಗಲ್, ಕೇಸರಿ ಬಾತ್, ಉಪ್ಪಿಟ್ಟು, ಬೋಂಡಾ, ಮಧ್ಯಾಹ್ನ ಪಲಾವ್, ಮೈಸೂರ್ ಪಾಕ್, ಅನ್ನ ಸಾಂಬಾರ್ ವಿತರಿಸಲಾಯಿತು.

ಚಾಮುಂಡಿ ದರ್ಶನಕ್ಕೆ ವಿಐಪಿಗಳ ಹಾವಳಿ

ಕಡೆಯ ಆಷಾಢ ಶುಕ್ರವಾರ ಚಾಮುಂಡಿಬೆಟ್ಟದಲ್ಲಿ ವಿಐಪಿಗಳು, ಶಿಫಾರಸು ಪತ್ರ ತಂದವರ ಹಾವಳಿ ಹೆಚ್ಚಾಗಿತ್ತು. ಸಚಿವರು, ಶಾಸಕರು, ಸಂಸದರ ಶಿಫಾರಸು ಪತ್ರ ಹಿಡಿದು ಬಂದ ಸಾವಿರಾರು ಮಂದಿ ದೇವಸ್ಥಾನಕ್ಕೆ ಬಿಡುವಂತೆ ಮುಗಿಬಿದ್ದರು. ಪೊಲೀಸರು ಅವರನ್ನು ನಿಯಂತ್ರಿಸಲು ಹರಸಾಹಸಪಟ್ಟರು.

ವಿಪಿಐಗಳನ್ನು ನೇರವಾಗಿ ಬಿಡುತ್ತಿದ್ದಂತೆ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ಸಿಟ್ಟಾಗಿ ಪೊಲೀಸರ ಮೇಲೆಯೇ ಹರಿಹಾಯ್ದರು. ಗರ್ಭಗುಡಿಯೊಳಗೂ ವಿಐಪಿಗಳೇ ತುಂಬಿದ್ದರು. ಪೊಲೀಸರು ಭಕ್ತರಿಗಿಂತ ವಿಐಪಿಗಳನ್ನು ನಿಯಂತ್ರಿಸಲೇ ಹೆಚ್ಚು ಹರಸಾಹಸಪಟ್ಟರು. ಹಾಗೆಯೇ, 2 ಸಾವಿರ ರೂ. ಟಿಕೆಟ್ ಪಡೆದುಕೊಂಡು ಬಂದವರ ಸಂಖ್ಯೆಯೂ ಹೆಚ್ಚಾಗಿತ್ತು. ಇದರಿಂದ ನೂಕುನುಗ್ಗಲು ಉಂಟಾಯಿತು. ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲೆಯ ವಿವಿಧೆಡೆ ಬರದ ಭೀಕರ ಪರಿಸ್ಥಿತಿ ದರ್ಶನ
ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಸಂಘಟಿತ ಕೆಲಸ