3 ಕಂದಾಯ ಗ್ರಾಮ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ

KannadaprabhaNewsNetwork |  
Published : Jun 12, 2026, 01:15 AM IST
3.ಟೌನ್ ಶಿಪ್ ನಿರ್ಮಾಣವಾಗಲಿರುವ ಸ್ಥಳ | Kannada Prabha

ಸಾರಾಂಶ

ರಾಮನಗರ: ರೈತರ ಪರ-ವಿರೋಧದ ನಡುವೆಯೂ ರಾಜ್ಯ ಸರ್ಕಾರ ಭಾರತದ ಮೊದಲ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್ ಶಿಪ್) ಯೋಜನೆಗಾಗಿ 9 ಕಂದಾಯ ಗ್ರಾಮಗಳ ಪೈಕಿ 3 ಗ್ರಾಮಗಳ ಭೂ ಸ್ವಾಧೀನಕ್ಕಾಗಿ ಅಂತಿಮ ಅಧಿಸೂಚನೆ ಹೊರಡಿಸಿದೆ

ರಾಮನಗರ: ರೈತರ ಪರ-ವಿರೋಧದ ನಡುವೆಯೂ ರಾಜ್ಯ ಸರ್ಕಾರ ಭಾರತದ ಮೊದಲ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್ ಶಿಪ್) ಯೋಜನೆಗಾಗಿ 9 ಕಂದಾಯ ಗ್ರಾಮಗಳ ಪೈಕಿ 3 ಗ್ರಾಮಗಳ ಭೂ ಸ್ವಾಧೀನಕ್ಕಾಗಿ ಅಂತಿಮ ಅಧಿಸೂಚನೆ ಹೊರಡಿಸಿದೆ.

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿ ಪಡಿಸುತ್ತಿರುವ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಗಾಗಿ ಮೊದಲ ಹಂತದಲ್ಲಿ ಕೆಂಪಯ್ಯನಪಾಳ್ಯ - 367.15 ಎಕರೆ, ಮಂಡಲಹಳ್ಳಿ - 70.37 ಎಕರೆ ಹಾಗೂ ವಡೇರಹಳ್ಳಿ - 61.2 ಎಕರೆ ಭೂಮಿ ಸ್ವಾಧೀನಕ್ಕೆ ಅಧಿಸೂಚನೆ ಹೊರ ಬಿದ್ದಿದೆ.

ಈ ಯೋಜನೆಗೆ ರಾಮನಗರ ತಾಲೂಕು ಬಿಡದಿ ಹೋಬಳಿ ವ್ಯಾಪ್ತಿಯಲ್ಲಿ ಬೈರಮಂಗಲ, ಬನ್ನಿಗಿರಿ, ಹೊಸೂರು, ಕಂಚುಗಾರನಹಳ್ಳಿ, ಕೆಂಪಯ್ಯನಪಾಳ್ಯ, ಕೆ.ಜಿ.ಗೊಲ್ಲರಪಾಳ್ಯ, ಮಂಡಲಹಳ್ಳಿ, ಅರಳಾಳುಸಂದ್ರ ಹಾಗೂ ಹಾರೋಹಳ್ಳಿ ತಾಲೂಕು ಹಾರೋಹಳ್ಳಿ ಹೋಬಳಿಯ ವಡೇರಹಳ್ಳಿ ಸೇರಿ ಒಟ್ಟು 9 ಕಂದಾಯ ಗ್ರಾಮಗಳ

ಸುಮಾರು 7881 ಎಕರೆ ಸ್ವಾಧೀನಕ್ಕೆ ಒಳಪಡಲಿದ್ದು, ಇದರಲ್ಲಿ ಖಾಸಗಿ ಮಾಲೀಕತ್ವದ 6731 ಎಕರೆ ಜಮೀನು ಇದೆ.

498 ಎಕರೆ 54 ಗುಂಟೆ ಭೂ ಸ್ವಾಧೀನಕ್ಕೆ ಅಧಿಸೂಚನೆ:

ಬಿಡದಿ ಹೋಬಳಿಯಲ್ಲಿ ಸುಮಾರು 20 ಸಾವಿರ ಕೋಟಿ ವೆಚ್ಚದಲ್ಲಿ ಅನುಷ್ಠಾನಕ್ಕೆ ತರುತ್ತಿರುವ ಸಮಗ್ರ ಉಪನಗರ ನಿರ್ಮಾಣಕ್ಕಾಗಿ ಒಟ್ಟು 7881 ಎಕರೆ ಭೂ ಸ್ವಾಧೀನಕ್ಕಾಗಿ 2025ರ ಮಾ.12ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಭೂ ಸ್ವಾಧೀನ ಕಾಯ್ದೆಗಳ ಪ್ರಕಾರ ಪ್ರಾಥಮಿಕ ಅಧಿಸೂಚನೆ ಹೊರಡಿಸಿ ಒಂದು ವರ್ಷದೊಳಗಾಗಿ ಅಂತಿಮ ಅಧಿಸೂಚನೆ ಹೊರಡಿಸಬೇಕು. ಒಂದು ವೇಳೆ ಆಡಳಿತಾತ್ಮಕ ಕಾರಣಗಳಿಂದಾಗಿ ಇದು ಸಾಧ್ಯವಾಗದಿದ್ದಲ್ಲಿ, ಅವಧಿಯನ್ನು ವಿಸ್ತರಿಸುವ ಅವಕಾಶ ಸರ್ಕಾರಕ್ಕೆ ಇತ್ತು. ಅದರಂತೆಯೇ ನಗರಾಭಿವದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಂತಿಮ ಅಧಿಸೂಚನೆ ಪ್ರಕಟಿಸುವ ಅವಧಿಯನ್ನು 2027ರ ಮಾ.11ರವರೆಗೆ ವಿಸ್ತರಿಸಿದ್ದರು. ಇದೀಗ 498 ಎಕರೆ 54 ಗುಂಟೆ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿದೆ.

ವರ್ಕ್-ಲಿವ್-ಪ್ಲೇ ಮಾದರಿಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿ ಪಡಿಸಲು ಮೇ 7 ರಂದು ಸಚಿವ ಸಂಪುಟ ಅನುಮೋದನೆ ನೀಡಿತ್ತು. ಅಂತಿಮ ಅಧಿಸೂಚನೆಯಲ್ಲಿ ಆಕಾರ್ ಬಂದ್ ಹಾಗೂ ಪಹಣಿಯಲ್ಲಿ ವ್ಯತ್ಯಾಸವಿದ್ದರೆ ಆಕಾರ್ ಬಂದ್ ವಿಸ್ತೀರ್ಣವೇ ಅಂತಿಮವೆಂದು ಪರಿಗಣಿಸಲಾಗಿದೆ.

ಸರ್ಕಾರಿ ಸರ್ವೆ ನಂಬರ್‌ಗಳಲ್ಲಿ ಭೂ ಮಂಜೂರಾತಿಯಾಗಿ ದುರಸ್ಥಿಯಾಗದೇ ಇರುವ ಪ್ರಕರಣಗಳಲ್ಲಿ ಭೂಮಾಲೀಕತ್ವದ ವಿಸ್ತೀರ್ಣದ ನಿರ್ಧರಣೆಯನ್ನು 2012ರ ಸರ್ಕಾರದ ಸುತ್ತೋಲೆಯಂತೆ ನಿರ್ಣಯಿಸಲಾಗಿದೆ. ಅಲ್ಲದೆ, ಸರ್ಕಾರಿ ಸರ್ವೆ ನಂಬರ್ ಗಳಲ್ಲಿನ ಭೂ ಮಂಜೂರಾತಿ ಪ್ರಕರಣಗಳಲ್ಲಿ ಪರಿಹಾರ ಅರ್ಹತೆಯನ್ನು ಕಂದಾಯ ಇಲಾಖೆಯ ನೈಜತೆ ವರದಿಯನುಸಾರ ತೀರ್ಮಾನಿಸಿ ಕ್ರಮವಹಿಸಲು ಸೂಚಿಸಲಾಗಿದೆ.

6 ಗ್ರಾಮಗಳ 7 ಸಾವಿರ ಎಕರೆ ಬಾಕಿ:

ಟೌನ್ ಶಿಪ್ ಯೋಜನೆ ವಿರೋಧಿಸಿ ಒಂದೆಡೆ ರೈತರು 450ಕ್ಕೂ ಹೆಚ್ಚು ದಿನಗಳಿಂದ ಹೋರಾಟ ಮಾಡುತ್ತಿದ್ದರೆ, ಮತ್ತೊಂದೆಡೆ ಯೋಜನೆ ಪರವಾಗಿರುವ ರೈತರು ಶೀಘ್ರ ಭೂ ಸ್ವಾಧೀನ ಪಡಿಸಿಕೊಂಡು ಪರಿಹಾರ ನೀಡುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದರು.

ಕೊನೆಗೆ ಡಿ.ಕೆ.ಶಿವಕುಮಾರ್ ರವರು ಜೂನ್ ತಿಂಗಳಲ್ಲಿ 9 ಕಂದಾಯ ಗ್ರಾಮಗಳ ಪೈಕಿ ತಲಾ 3 ಗ್ರಾಮಗಳ ಭೂ ಸ್ವಾಧೀನ ಸಂಬಂಧ ಅಂತಿಮ ಅಧಿಸೂಚನೆ ಹೊರಡಿಸುವುದಾಗಿ ಘೋಷಿಸಿದ್ದರು. ಅದರಂತೆ ಜೂನ್ 11ರಂದು ಮೊದಲ ಹಂತದಲ್ಲಿ ಬಿಡದಿ ಹೋಬಳಿಯ ಕೆಂಪಯ್ಯನಪಾಳ್ಯ, ಮಂಡಲಹಳ್ಳಿ ಹಾಗೂ ಹಾರೋಹಳ್ಳಿ ಹೋಬಳಿಯ ವಡೇರಹಳ್ಳಿ ಗ್ರಾಮ ವ್ಯಾಪ್ತಿಯ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರ ಬಿದ್ದಿದೆ. ಇನ್ನು 6 ಗ್ರಾಮಗಳ ಸುಮಾರು 7 ಸಾವಿರ ಎಕರೆ ಭೂ ಸ್ವಾಧೀನ ಅಂತಿಮ ಅಧಿಸೂಚನೆ ಬಾಕಿಯಿದೆ.

ಬಾಕ್ಸ್ ................

ಗ್ರಾಮಭೂಸ್ವಾಧೀನ ವಿಸ್ತೀರ್ಣನಿಗದಿ ಪಡಿಸಿರುವ ದರ(ಪ್ರತಿ ಎಕರೆಗೆ)

ಕೆಂಪಯ್ಯನಪಾಳ್ಯ367.15 ಎಕರೆ207.30 ಲಕ್ಷ

ಮಂಡಲಹಳ್ಳಿ70.37 ಎಕರೆ214.50 ಲಕ್ಷ

ವಡೇರಹಳ್ಳಿ61.02 ಎಕರೆ14.50 ಲಕ್ಷ

ಕೋಟ್..............

ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯ ಭೂ ಸ್ವಾಧೀನಕ್ಕೆ ಒಪ್ಪಿಗೆ ನೀಡಿರುವ ರೈತರಿಗೆ ಜೂನ್ 15ರಿಂದ ಪರಿಹಾರ ಮೊತ್ತ ಬಿಡುಗಡೆ ಆಗಲಿದೆ. ಈಗಾಗಲೇ ಪರಿಹಾರ ಮೊತ್ತ ಕೋರಿ 200ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಒಂದೇ ಕಂತಿನಲ್ಲಿ ಭೂ ಪರಿಹಾರ ನೀಡಲಾಗುವುದು.

-ಗಾಣಕಲ್ ನಟರಾಜ್, ಅಧ್ಯಕ್ಷರು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

11ಕೆಆರ್ ಎಂಎನ್ 3,4.ಜೆಪಿಜಿ

3.ಟೌನ್ ಶಿಪ್ ನಿರ್ಮಾಣವಾಗಲಿರುವ ಸ್ಥಳ

4. ಟೌನ್ ಶಿಪ್ ಮಾದರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ ನಗರಕ್ಕೆ ಸೋಮನಾಥ ಜ್ಯೋತಿರ್ಲಿಂಗ ಆಗಮನ
ಜ್ಞಾನಜಾತ್ರೆಯ ಲೋಗೋ ಬಿಡುಗಡೆ ಮಾಡಿದ ಡಿಸಿ ಶುಭಾ ಕಲ್ಯಾಣ್