ನಾಡೋಜ ಡಾ.ಸಿದ್ಧಲಿಂಗಯ್ಯ ಕರ್ನಾಟಕದ ಅಂಬೇಡ್ಕರ್

KannadaprabhaNewsNetwork |  
Published : Jun 12, 2026, 01:15 AM IST
1.ರಾಮನಗರದ ನ್ಯೂ ಎಕ್ಸ್ ಪರ್ಟ್ ಕಾಲೇಜಿನಲ್ಲಿ ನಾಡೋಜ ಡಾ.ಸಿದ್ಧಲಿಂಗಯ್ಯ ಅವರ 5ನೇ ವರ್ಷದ ಪರಿನಿಬ್ಬಾಣ ಸ್ಮರಣಾ ಕಾರ್ಯಕ್ರಮ ಮತ್ತು ರೂಪ - ನಿರೂಪ ಕೃತಿ ಲೋಕಾರ್ಪಣೆ ಹಾಗೂ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಹಿ.ಜಿ.ಬೋರಲಿಂಗಯ್ಯ ಉದ್ಘಾಟಿಸಿದರು. | Kannada Prabha

ಸಾರಾಂಶ

ರಾಮನಗರ: ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ನಾಡೋಜ ಡಾ.ಸಿದ್ಧಲಿಂಗಯ್ಯ ಮೊಟ್ಟಮೊದಲ ದಲಿತ ಕವಿ ಡಾ.ಬಿ.ಆರ್.ಅಂಬೇಡ್ಕರ್ ಅವರಂತೆ ದಲಿತರ ಮತ್ತು ಶೋಷಿತರ ಧ್ವನಿಯಾಗಿ ಸಾಹಿತ್ಯದ ಮೂಲಕ ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಅವರು ಕರ್ನಾಟಕದ ಅಂಬೇಡ್ಕರ್ ಎಂದು ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಡಾ.ಹಿ.ಚಿ.ಬೋರಲಿಂಗಯ್ಯ ಬಣ್ಣಿಸಿದರು

ರಾಮನಗರ: ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ನಾಡೋಜ ಡಾ.ಸಿದ್ಧಲಿಂಗಯ್ಯ ಮೊಟ್ಟಮೊದಲ ದಲಿತ ಕವಿ ಡಾ.ಬಿ.ಆರ್.ಅಂಬೇಡ್ಕರ್ ಅವರಂತೆ ದಲಿತರ ಮತ್ತು ಶೋಷಿತರ ಧ್ವನಿಯಾಗಿ ಸಾಹಿತ್ಯದ ಮೂಲಕ ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಅವರು ಕರ್ನಾಟಕದ ಅಂಬೇಡ್ಕರ್ ಎಂದು ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಡಾ.ಹಿ.ಚಿ.ಬೋರಲಿಂಗಯ್ಯ ಬಣ್ಣಿಸಿದರು.

ನಗರದ ನ್ಯೂ ಎಕ್ಸ್ ಪರ್ಟ್ ಕಾಲೇಜಿನಲ್ಲಿ ಬೆಂಗಳೂರು ವಿವಿ ರಾಮನಗರ ಸ್ನಾತಕೋತ್ತರ ಕೇಂದ್ರ ಕನ್ನಡ ಅಧ್ಯಯನ ವಿಭಾಗ ಹಾಗೂ ನ್ಯೂಎಕ್ಸ್ ಪರ್ಟ್ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ನಾಡೋಜ ಕವಿ ಡಾ.ಸಿದ್ಧಲಿಂಗಯ್ಯ ಸ್ಮಾರಕ ಪ್ರತಿಷ್ಠಾನ ಆಯೋಜಿಸಿದ್ದ ಜನಮಾನಸ ಕವಿ, ಪದ್ಮಶ್ರೀ ನಾಡೋಜ ಡಾ.ಸಿದ್ಧಲಿಂಗಯ್ಯ ಅವರ 5ನೇ ವರ್ಷದ ಪರಿನಿಬ್ಬಾಣ ಮತ್ತು ರೂಪ-ನಿರೂಪ ಕೃತಿ ಲೋಕಾರ್ಪಣೆ ಹಾಗೂ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಅಂಬೇಡ್ಕರ್ ಅವರಿಂದ ಪ್ರಭಾವಿತರಾದ ಸಿದ್ಧಲಿಂಗಯ್ಯನವರು ಶೋಷಿತ ಮತ್ತು ದಲಿತ ಸಮುದಾಯದ ಒಳತಿಗಾಗಿ ಬದುಕಿದವರು. ದಲಿತ ಹೋರಾಟಗಾರರಾದರೂ ಎಲ್ಲ ಜಾತಿ ವರ್ಗದವರನ್ನು ಹತ್ತಿರದಿಂದ ಕಾಣುತ್ತಿದ್ದರು. ಅಂಬೇಡ್ಕರ್ ಇಡೀ ದೇಶಕ್ಕಾದರೆ, ಡಾ.ಸಿದ್ಧಲಿಂಗಯ್ಯ ನಮ್ಮ ಕರ್ನಾಟಕದ ಅಂಬೇಡ್ಕರ್ ಆದರು ಎಂದು ತಿಳಿಸಿದರು.

ಡಾ.ಸಿದ್ಧಲಿಂಗಯ್ಯ ಬಂಡಾಯ ಸಾಹಿತ್ಯದ ಪ್ರವರ್ತಕ ಮಾತ್ರವಲ್ಲದೆ ದಲಿತ ಚಳವಳಿಯ ಪ್ರಮುಖ ರೂವಾರಿ.

ತಮ್ಮ ಕವಿತೆಗಳಲ್ಲಿ ಶೋಷಿತರು ಮತ್ತು ದಲಿತರ ನೋವನ್ನು ಮಾತ್ರ ಹೇಳದೆ, ದಲಿತರ ಸ್ವಾಭಿಮಾನ, ಪ್ರತಿಭಟನೆ ಮತ್ತು ನಗುವಿನ ಶಕ್ತಿಯನ್ನು ಬಿಂಬಿಸಿದರು. ಅವರ ಮನಸ್ಸು ಮೃಧುವಾದರು ಬರೆದಿದ್ದೆಲ್ಲ ಕ್ರಾಂತಿ ಗೀತೆಗಳು ಎಂದು ಹೇಳಿದರು.

ವಿದ್ಯಾರ್ಥಿ ದಿಸೆಯಲ್ಲಿಯೇ ಶೋಷಿತರ ಪರ ಚಳವಳಿಗೆ ಧುಮುಕಿದವರು. ಸಮಾಜದಲ್ಲಿ ನಿರ್ಲಕ್ಷಕ್ಕೆ ಒಳಗಾದವರಿಗೆ ಒಳ್ಳೆಯದಾಗಬೇಕೆಂದು ಬಯಸಿದ ಮನಸ್ಸಿನವರು. ಹೀಗಾಗಿಯೇ ಶ್ರಮಜೀವಿಗಳು, ಅಸಹಾಯಕರು ಹಾಗೂ ಸಮಾಜದ ಕಟ್ಟಕಡೆಯವರ ಬಗ್ಗೆ ಬರೆದು ಅವರೆಲ್ಲರ ನೋವುಗಳಿಗೆ ಧ್ವನಿಯಾದ ಸಿದ್ಧಲಿಂಗಯ್ಯ ಸಮಾಜ ಚಿಂತಕ ಎಂದು ತಿಳಿಸಿದರು.

ಕರ್ನಾಟಕದಲ್ಲಿ ದಲಿತ ಚಳವಳಿ ಕಟ್ಟಿದವರಲ್ಲಿ ಡಿ.ಕೃಷ್ಣಪ್ಪ, ದೇವನೂರು ಮಹದೇವ ಹಾಗೂ ಸಿದ್ಧಲಿಂಗಯ್ಯ ಪ್ರಮುಖರು. ಆ ಚಳವಳಿ ಇಡೀ ಕರ್ನಾಟಕಕ್ಕೆ ವ್ಯಾಪಿಸಿ ಹೊಸ ಆಂದೋಲನ ಸೃಷ್ಟಿಸಿತು. ಜಾತಿ ತಾರತಮ್ಯ, ವರ್ಗ ಸಂಘರ್ಷಕ್ಕೆ ಒಳಗಾದ ಹಾಗೂ ಸಮಾಜದಲ್ಲಿ ಗೌರವದ ಬದುಕು ನಡೆಸಲಾಗದವರಿಗೆ ದಲಿತ ಚಳವಳಿ ದಾರಿ ದೀಪವಾಯಿತು ಎಂದು ಡಾ.ಹಿ.ಚಿ.ಬೋರಲಿಂಗಯ್ಯ ಹೇಳಿದರು.

ಸಾಹಿತಿ ಡಾ.ಬೈರಮಂಗಲ ರಾಮೇಗೌಡ ಮಾತನಾಡಿ, ಕೇರಿಯ ದಲಿತ ಕುಟುಂಬದಲ್ಲಿ ಆಕಸ್ಮಿಕವಾಗಿ ಹುಟ್ಟಿದ ಸಿದ್ಧಲಿಂಗಯ್ಯ ಅಸ್ಪೃಶ್ಯತೆ, ಬಡತನ, ಹಸಿವು ಮತ್ತು ಜಾತಿ ಕಾರಣಕ್ಕೆ ಅವಮಾನ ಅನುಭವಿಸಿದವರು. ಅವರ ಎದೆಗೆ ಬಿದ್ದ ಅಕ್ಷರಗಳಿಂದಾಗಿ ಎತ್ತರಕ್ಕೆ ಬೆಳೆದರು. ಜಾತಿಯ ಕಾರಣಕ್ಕೆ ಬಂದ ಅಡೆತಡೆಗಳನ್ನು ಎದುರಿಸುವ ಧೀಮಂತ ಶಕ್ತಿ, ಆತ್ಮವಿಶ್ವಾಸ ಬೆಳೆಸಿಕೊಂಡರು ಎಂದರು.

ಸಿದ್ಧಲಿಂಗಯ್ಯನವರ ತಂದೆ ಜೀತದಾಳಿನಂತೆ ದುಡಿದವರು. ಬಡತನವನ್ನು ಮೀರಿ ಸಿದ್ಧಲಿಂಗಯ್ಯ ಅಕ್ಷರ ಪಡೆದರು. ಆ ಅಕ್ಷರದಿಂದ ಎಲ್ಲ ಪ್ರಯೋಜನ ಪಡೆದರು. ದುಸ್ಥಿತಿಯಲ್ಲಿದ್ದ ಸಿದ್ಧಲಿಂಗಯ್ಯನವರು ಮೇಲಕ್ಕೇರಿ ಸಾಧನೆ ಮಾಡಲು ಸಾಧ್ಯ ಎನ್ನುವುದಾದರೆ ಈಗಿನ ವಿದ್ಯಾರ್ಥಿಗಳಿಗೂ ಅದನ್ನು ಸಾಧಿಸಲು ಅವಕಾಶವಿದೆ. ಅದಕ್ಕಾಗಿ ಸಂಕಲ್ಪದ ಜೊತೆಗೆ ಪ್ರಾಮಾಣಿಕ ಪ್ರಯತ್ನ ಇರಬೇಕು ಎಂದು ಕಿವಿಮಾತು ಹೇಳಿದರು.

ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಮಾತನಾಡಿ, ಕನ್ನಡ ಸಾರಸ್ವತ ಲೋಕದಲ್ಲಿ ದಲಿತ ಬಂಡಾಯ ಸಾಹಿತ್ಯ

ಪ್ರಕಾರ ಹುಟ್ಟು ಹಾಕಿದ ಡಾ.ಸಿದ್ಧಲಿಂಗಯ್ಯ ಕನ್ನಡ ನಾಡಿನ ಸಾಂಸ್ಕೃತಿಕ ನಾಯಕ. ಅವರು ಜ್ಞಾನ ಸಂಪಾದನೆ ಮೂಲಕ ಕಷ್ಟದ ಬದುಕಿನಿಂದ ಎತ್ತರಕ್ಕೆ ಬೆಳೆದರು. ಸಮಾಜದಲ್ಲಿನ ಅನ್ಯಾಯ, ಶೋಷಿತರು, ದಮನಿತರ ಮೇಲಿನ ದೌರ್ಜನ್ಯಗಳನ್ನು ದಿಟ್ಟತನದಿಂದ ಎದುರಿಸಿ ಕವನಗಳನ್ನು ಬರೆದರು. ಆ ಕವನಗಳು ಹಾಡುಗಳ ರೂಪ ತಾಳಿ ಚಳವಳಿಗಾರರಿಗೆ ಪ್ರೇರಣೆಯಾದವು ಎಂದರು.

ಈ ಸಂದರ್ಭದಲ್ಲಿ ಅತಿಥಿಗಳು ರೂಪ - ನಿರೂಪ ಕೃತಿ ಬಿಡುಗಡೆ ಮಾಡಿದರು. ಪ್ರತಿಷ್ಠಾನ ಉಪಾಧ್ಯಕ್ಷೆ ರಮಾಕುಮಾರಿ ಸಿದ್ಧಲಿಂಗಯ್ಯ, ಬೆಂಗಳೂರು ವಿವಿ ರಾಮನಗರ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಬಿ.ಗಂಗಾಧರ, ನ್ಯೂ ಎಕ್ಸ್ ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಕಾರ್ಯದರ್ಶಿ ಡಾ.ಡಿ.ಆರ್.ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಕೋಟ್ ...................

ಈಗಿನ ರಾಜಕಾರಣ, ಶಿಕ್ಷಣ, ಆರೋಗ್ಯ ಎಲ್ಲವೂ ಉದ್ಯಮವಾಗಿ ರೂಪುಗೊಂಡಿದೆ. ಆದರೆ, ಡಾ.ಸಿದ್ಧಲಿಂಗಯ್ಯ ರಾಜಕಾರಣವನ್ನು ಸೇವೆಯಾಗಿಯೇ ಪರಿಗಣಿಸಿದವರು. ಪ್ರಾಧಿಕಾರಗಳ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಸ್ಥಾನಗಳನ್ನು ಸಮರ್ಥವಾಗಿ ನಿಭಾಯಿಸಿದರು. ಅವರ ಮೇಲೆ ಒಂದೇ ಒಂದು ಭ್ರಷ್ಟಾಚಾರದ ಆರೋಪ ಕೇಳಿ ಬರಲಿಲ್ಲ. ಅಷ್ಟರ ಮಟ್ಟಿಗೆ ಪ್ರಾಮಾಣಿಕ ಸೇವಕರಾಗಿದ್ದರು.

-ಡಾ.ಹಿ.ಚಿ.ಬೋರಲಿಂಗಯ್ಯ, ಅಧ್ಯಕ್ಷರು, ಕರ್ನಾಟಕ ಜಾನಪದ ಪರಿಷತ್ತು

ಕೋಟ್ ................

ಡಾ.ಸಿದ್ಧಲಿಂಗಯ್ಯಮವರ ಕ್ರಾಂತಿ ಗೀತೆಗಳು ದಲಿತ ಚಳವಳಿಯ ಶಕ್ತಿ ಸಂಪನ್ಮೂಲವಾಯಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷರಾದರು. ಇದಕ್ಕೆಲ್ಲ ಕಳಶ ಇಟ್ಟ ರೀತಿಯಲ್ಲಿ ವಿಧಾನ ಪರಿಷತ್‌ ಸದಸ್ಯ ಸ್ಥಾನ ಸಿಕ್ಕಿತು. ಇವೆಲ್ಲ ತಾನಾಗಿಯೇ ಬಂದಿದ್ದಲ್ಲ. ಸಮಾಜ ಮತ್ತು ಜನಪರ ನಿಲುವುಗಳ ಕಾರಣಗಳಿಂದಾಗಿ ಸಿಕ್ಕಿತು.

-ಬೈರಮಂಗಲ ರಾಮೇಗೌಡ, ಸಾಹಿತಿ

ಕೋಟ್ ............

ಈಗ ರಾಜಕಾರಣ ಕಲುಷಿತಗೊಂಡಿದೆ. ಆರೇಳು ತಿಂಗಳಿರುವಂತೆ ಹಣದ ಥೈಲಿ ಹಿಡಿದು ಬರುವ ಉದ್ಯಮಿಗಳು ತವಾ, ಕುಕ್ಕರ್ ಆಮಿಷವೊಡ್ಡಿ ಮತ ಪಡೆಯುತ್ತಿದ್ದಾರೆ. ಹೀಗೆ ಶಾಸನಸಭೆ ಪ್ರವೇಶಿಸುವ ಉದ್ಯಮಿಗಳು ತಮ್ಮ ಅನುಕೂಲಕ್ಕೆ ತಕ್ಕ ಶಾಸನಗಳನ್ನು ರಚಿಸಿದರೆ ಸಮಾಜವನ್ನು ಸರಿದಾರಿಗೆ ತರಲು ಸಾಧ್ಯವಿಲ್ಲ. ಸಂವೇದನೆ ಉಳ್ಳವರು ಶಾಸನಸಭೆ ಪ್ರವೇಶಿಸುವಂತಾಗಬೇಕು. ಹೀಗಾಗಿ ಜನರನ್ನು ಜಾಗೃತಿಗೊಳಿಸಲು ಬುದ್ಧಿಜೀವಿಗಳು, ಸಾಹಿತಿಗಳು ಧ್ವನಿ ಎತ್ತಬೇಕು. ಇದಕ್ಕೆ ವಿದ್ಯಾರ್ಥಿಗಳು ಕೈಜೋಡಿಸಬೇಕು.

- ಕೆ.ಶೇಷಾದ್ರಿ, ಅಧ್ಯಕ್ಷರು, ನಗರಸಭೆ, ರಾಮನಗರ

11ಕೆಆರ್ ಎಂಎನ್ 1,2.ಜೆಪಿಜಿ

1.ರಾಮನಗರದ ನ್ಯೂ ಎಕ್ಸ್ ಪರ್ಟ್ ಕಾಲೇಜಿನಲ್ಲಿ ನಾಡೋಜ ಡಾ.ಸಿದ್ಧಲಿಂಗಯ್ಯ ಅವರ 5ನೇ ವರ್ಷದ ಪರಿನಿಬ್ಬಾಣ ಸ್ಮರಣಾ ಕಾರ್ಯಕ್ರಮ ಮತ್ತು ರೂಪ - ನಿರೂಪ ಕೃತಿ ಲೋಕಾರ್ಪಣೆ ಹಾಗೂ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಹಿ.ಜಿ.ಬೋರಲಿಂಗಯ್ಯ ಉದ್ಘಾಟಿಸಿದರು.

2.ರಾಮನಗರದ ನ್ಯೂ ಎಕ್ಸ್ ಪರ್ಟ್ ಕಾಲೇಜಿನಲ್ಲಿ ನಾಡೋಜ ಡಾ.ಸಿದ್ಧಲಿಂಗಯ್ಯ ಅವರ 5ನೇ ವರ್ಷದ ಪರಿನಿಬ್ಬಾಣ ಸ್ಮರಣಾ ಕಾರ್ಯಕ್ರಮದಲ್ಲಿ ಅತಿಥಿಗಳು ರೂಪ - ನಿರೂಪ ಕೃತಿ ಬಿಡುಗಡೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ ನಗರಕ್ಕೆ ಸೋಮನಾಥ ಜ್ಯೋತಿರ್ಲಿಂಗ ಆಗಮನ
ಜ್ಞಾನಜಾತ್ರೆಯ ಲೋಗೋ ಬಿಡುಗಡೆ ಮಾಡಿದ ಡಿಸಿ ಶುಭಾ ಕಲ್ಯಾಣ್