ರೈತರ ವಾಹನ ಜಪ್ತಿ ಖಂಡಿಸಿ ಫೈನಾನ್ಸ್‌ಗೆ ಮುತ್ತಿಗೆ

KannadaprabhaNewsNetwork |  
Published : Aug 06, 2025, 01:15 AM IST
5ಕೆಡಿವಿಜಿ24, 25-ದಾವಣಗೆರೆಯಲ್ಲಿ ಮಂಗಳವಾರ ಮಹೇಂದ್ರ ಫೈನಾನ್ಸ್ ಕಂಪನಿ ವಿರುದ್ಧ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪ್ರತಿಭಟಿಸುತ್ತಿರುವುದು. | Kannada Prabha

ಸಾರಾಂಶ

ಸಾಲ ಪಡೆದ ರೈತರಿಗೆ ಯಾವುದೇ ನೋಟಿಸ್ ನೀಡದೇ, ಮಾಹಿತಿಯನ್ನೂ ಕೊಡದೇ ವಾಹನ ಜಪ್ತಿ ಮಾಡಿ, ಗೂಂಡಾ ವರ್ತನೆ ತೋರಲಾಗುತ್ತಿದೆ. ಇದು ಸರಿಯಲ್ಲ ಎಂದು ಆರೋಪಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದ ಮಹೇಂದ್ರ ಫೈನಾನ್ಸ್‌ ಕಂಪನಿ ಕಚೇರಿಗೆ ರೈತರು ಮುತ್ತಿಗೆ ಹಾಕಿದ್ದಾರೆ.

- ಮಹೇಂದ್ರ ಫೈನಾನ್ಸ್ ಕಂಪನಿಗೆ ರೈತ ಮುಖಂಡ ಗುಮ್ಮನೂರು ಬಸವರಾಜ ಎಚ್ಚರಿಕೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಸಾಲ ಪಡೆದ ರೈತರಿಗೆ ಯಾವುದೇ ನೋಟಿಸ್ ನೀಡದೇ, ಮಾಹಿತಿಯನ್ನೂ ಕೊಡದೇ ವಾಹನ ಜಪ್ತಿ ಮಾಡಿ, ಗೂಂಡಾ ವರ್ತನೆ ತೋರಲಾಗುತ್ತಿದೆ. ಇದು ಸರಿಯಲ್ಲ ಎಂದು ಆರೋಪಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದ ಮಹೇಂದ್ರ ಫೈನಾನ್ಸ್‌ ಕಂಪನಿ ಕಚೇರಿಗೆ ರೈತರು ಮುತ್ತಿಗೆ ಹಾಕಿದರು.

ನಗರದ ಡಾ. ಎಂ.ಸಿ. ಮೋದಿ ವೃತ್ತದಿಂದ ಸಂಘದ ಜಿಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಹೊರಟು, ಮಹೇಂದ್ರ ಫೈನಾನ್ಸ್ ಕಂಪನಿಗೆ ರೈತರು ಮುತ್ತಿಗೆ ಹಾಕಿದರು. ಕಂಪನಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಬಳಿಕ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಅರ್ಪಿಸಿದರು.

ಸಂಘದ ಜಿಲ್ಲಾಧ್ಯಕ್ಷ ಗುಮ್ಮನೂರು ಬಸವರಾಜ ಮಾತನಾಡಿ, ಜಗಳೂರು ತಾಲೂಕಿನ ಅಣಬೂರು ಗ್ರಾಮದ ರೈತರೊಬ್ಬರಿಗೆ ಮಹೇಂದ್ರ ಫೈನಾನ್ಸ್‌ 2019ರಲ್ಲಿ ವಾಹನ ಸಾಲ ನೀಡಿತ್ತು. ಕೋವಿಡ್ ಸಂಕಷ್ಟದಲ್ಲೂ ರೈತ ಕಂಪನಿಗೆ ಸಾಲದ ತೀರುವಳಿ ಮಾಡುತ್ತಾ ಬಂದಿದ್ದಾರೆ. ಬರಗಾಲ ಆಗಿದ್ದರಿಂದ ಸಾಲ ಮರು ಪಾವತಿಯಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ. ಅದನ್ನೇ ಕಂಪನಿಯವರು ದೊಡ್ಡದು ಮಾಡಿ, ಯಾವುದೇ ನೋಟಿಸ್ ಸಹ ನೀಡದೇ ರೈತನ ವಾಹನ ಜಪ್ತಿ ಮಾಡಿದ್ದಾರೆ. ವಾಹನವನ್ನು ಈಗಾಗಲೇ ಹರಾಜು ಮಾಡಿದ್ದೇವೆಂಬ ಉತ್ತರ ನೀಡುತ್ತಿದ್ದಾರೆ. ಇದು ಕಾನೂನು ಬಾಹಿರ. ರೈತರನ್ನು ಆರ್ಥಿಕವಾಗಿ ಕುಗ್ಗಿಸಿ, ಆತ್ಮಹತ್ಯೆಗೆ ಪ್ರಚೋದನೆ ನೀಡುವ ಕೆಲಸ ಕಂಪನಿಯವರು ಮಾಡಿದ್ದಾರೆ ಎಂದು ಕಿಡಿಕಾರಿದರು.

ಸೀಜಿಂಗ್ ಸಿಬ್ಬಂದಿ ಹೆಸರಿನಲ್ಲಿ ಕಂಪನಿಯವರು ಹೀಗೆ ಗೂಂಡಾಗಿರಿ ವರ್ತನೆ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಕಂಪನಿ ವಿರುದ್ಧ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು. ಇಂತಹ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿ ಬಂದ್‌, ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಸೇರಿದಂತೆ ವಿವಿಧ ಹಂತದ ಹೋರಾಟಗಳ ನಡೆಸುವುದಾಗಿಯೂ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಂಘದ ಚಿಕ್ಕಬೂದಾಳ್ ಭಗತ್ ಸಿಂಗ್, ಕೆಂಚಮ್ಮನಹಳ್ಳಿ ಹನುಮಂತಪ್ಪ, ಭರಮಸಮುದ್ರ ಬಿ.ಕುಮಾರ, ದೊಣ್ಣೇಹಳ್ಳಿ ಲೋಕಣ್ಣ, ಕಿರಣಕುಮಾರ ಲಿಂಗದಹಳ್ಳಿ, ಎಸ್.ಎಂ. ಜಗದೀಶ, ಏಕಾಂತಪ್ಪ, ಕೆ.ಬಿ.ಚೌಡಮ್ಮ, ಕೆ.ಎಸ್.ಮಧು, ದಾದಾಪೀರ್, ಗುಂಡಪ್ಪ ಇತರರು ಇದ್ದರು.

- - -

-5ಕೆಡಿವಿಜಿ24, 25.ಜೆಪಿಜಿ:

ರೈತನ ವಾಹನ ಜಪ್ತಿ ಖಂಡಿಸಿ ದಾವಣಗೆರೆಯಲ್ಲಿ ಮಂಗಳವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಮಹೇಂದ್ರ ಫೈನಾನ್ಸ್ ಕಂಪನಿ ವಿರುದ್ಧ ಪ್ರತಿಭಟನೆ ನಡೆಸಿದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ