ಕನ್ನಡಪ್ರಭ ವಾರ್ತೆ ಮಂಗಳೂರು
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಆರ್ಥಿಕ ದುಸ್ಥಿತಿಗೆ ಕಾರಣವಾಗಿರುವ ಕಾಂಗ್ರೆಸ್ ಸರ್ಕಾರ ವಿನಾ ಕಾರಣ ಕೇಂದ್ರ ಸರ್ಕಾರವನ್ನು ದೂಷಿಸುವ ಮೂಲಕ ಜನತೆಯ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಆರೋಪಿಸಿದ್ದಾರೆ. ಮಂಗಳೂರಿನ ಜಿಲ್ಲಾ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 16 ಬಾರಿ ಬಜೆಟ್ ಮಂಡಿಸಿ ಆರ್ಥಿಕ ತಜ್ಞ ಎನಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಕಳೆದ 45 ವರ್ಷಗಳಿಂದ ರಾಜ್ಯಗಳಿಗೆ ಕೇಂದ್ರ ಹೇಗೆ ಅನುದಾನ ಬಿಡುಗಡೆ ಮಾಡುತ್ತದೆ ಎಂಬುದು ಸಿದ್ದರಾಮಯ್ಯಗೆ ತಿಳಿಯದ ಸಂಗತಿ ಏನಲ್ಲ. ಕೇಂದ್ರ ಹಣಕಾಸು ಸಚಿವಾಲಯದಲ್ಲಿ ಮಾತನಾಡುವುದು ಬಿಟ್ಟು ಈ ರೀತಿ ಜನತೆಗೆ ತಪ್ಪು ಮಾಹಿತಿ ನೀಡುವುದು ಸಿಎಂಗೆ ಶೋಭೆ ಅಲ್ಲ ಎಂದರು. ಚುನಾವಣಾ ಬಾಂಡ್ ಕುರಿತು ಸುಪ್ರೀಂ ಕೋರ್ಟ್ ಸೂಚನೆ ಪ್ರಕಾರ ತನ್ನಲ್ಲಿರುವ ವಿವರಗಳನ್ನು ಎಸ್‌ಬಿಐ ಚುನಾವಣಾ ಆಯೋಗಕ್ಕೆ ನೀಡಿದೆ. ಇನ್ನಷ್ಟು ವಿವರಗಳನ್ನು ನೀಡುವಂತೆ ಗಡು ವಿಧಿಸಲಾಗಿದೆ. ಒಟ್ಟು 20 ಸಾವಿರ ಕೋಟಿ ರು.ಗಳಲ್ಲಿ ಕೇವಲ 6.50 ಸಾವಿರ ಕೋಟಿ ರು. ಮಾತ್ರ ಬಿಜೆಪಿಗೆ ಉಳಿದ 16 ಸಾವಿರ ಕೋಟಿ ರು. ಯಾರಿಗೆ ಎನ್ನುವುದು ಗೊತ್ತಾಗಬೇಕಾಗಿದೆ ಎಂದರು. ವಿದೇಶದಿಂದ ಸಂಪೂರ್ಣವಾಗಿ ಕಪ್ಪು ಹಣ ವಾಪಸ್ ತರುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಈ ಬಗ್ಗೆ ವಿದೇಶಿ ಬ್ಯಾಂಕ್‌ಗಳ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. 25 ಸಾವಿರ ಕೋಟಿ ರು.ಗಳಷ್ಟು ವಿದೇಶಿ ಹಣ ಈಗಾಗಲೇ ವಶಪಡಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು. ಮುಖಂಡರಾದ ನಿತಿನ್ ಕುಮಾರ್, ಪ್ರೇಮಾನಂದ ಶೆಟ್ಟಿ, ಸುದರ್ಶನ್ ಎಂ., ಕಿಶೋರ್ ಬೊಟ್ಯಾಡಿ, ಸಂಜಯ ಪ್ರಭು ಮತ್ತಿತರರಿದ್ದರು. ಬಿಜೆಪಿಯಲ್ಲಿ ಅಸಮಾಧಾನಗೊಂಡಿರುವ ಮಾಜಿ ಸಚಿವರಾದ ಈಶ್ವರಪ್ಪ, ಡಿ.ವಿ.ಸದಾನಂದ ಗೌಡ ಮತ್ತಿತರರನ್ನು ಪಕ್ಷದ ಹಿರಿಯ ನಾಯಕರು ಮಾತುಕತೆ ನಡೆಸಿ ಸರಿಪಡಿಸಲಿದ್ದಾರೆ. ಚುನಾವಣೆ ವೇಳೆಗೆ ಎಲ್ಲವೂ ಸರಿಯಾಗುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಹೇಳಿದರು.