ಶಿವಾನಂದ ಗೊಂಬಿ
ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದಾಗಿದೆ. ಮೈತ್ರಿ ಧರ್ಮ ಸರಿಯಾಗಿ ಪಾಲನೆಯಾಗಬೇಕೆಂದರೆ ಎರಡೂ ಪಕ್ಷಗಳ ರಾಜ್ಯಾಧ್ಯಕ್ಷರು ಸೇರಿಕೊಂಡು ಜಂಟಿ ಸಭೆ ನಡೆಸಬೇಕು ಎನ್ನುವ ಆಗ್ರಹ ಹೆಚ್ಚುತ್ತಿದೆ.
ಇಂಥ ಸಂದೇಶವನ್ನು ಇಲ್ಲಿನ ಜೆಡಿಎಸ್ ಮುಖಂಡರು, ಪಕ್ಷದ ವರಿಷ್ಠರು, ರಾಜ್ಯಾಧ್ಯಕ್ಷರಿಗೆ ರವಾನಿಸಿದ್ದಾರೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿ ಆಗಿದೆ. ದೆಹಲಿ ಮಟ್ಟದಲ್ಲಿ ಮಾತುಕತೆಯಾಗಿ 28 ಕ್ಷೇತ್ರಗಳ ಪೈಕಿ 3 ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟು ಕೊಡಲಾಗಿದೆ. ಆದರೆ ಕ್ಷೇತ್ರಗಳಲ್ಲಿ ಮಾತ್ರ ಮೈತ್ರಿಯಾದ ಕುರುಹುಗಳೇ ಇಲ್ಲ. ಬಿಜೆಪಿ ಅಭ್ಯರ್ಥಿಗಳು ಈಗಾಗಲೇ ಪ್ರಚಾರವನ್ನು ಶುರುಮಾಡಿದ್ದರೂ ಜೆಡಿಎಸ್‌ನ ಯಾವ ಮುಖಂಡರಾಗಲಿ, ಕಾರ್ಯಕರ್ತರಾಗಲಿ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಲೇ ಇಲ್ಲ. ಬಿಜೆಪಿಯವರು ತಮ್ಮ ಪಾಡಿಗೆ ಪ್ರಚಾರದಲ್ಲಿ ತೊಡಗಿದ್ದರೆ, ಇತ್ತ ಕಾರ್ಯಕರ್ತರು, ಮುಖಂಡರು, ಇದಕ್ಕೆ ತಮಗೂ ಯಾವುದೇ ಸಂಬಂಧವೇ ಇಲ್ಲದಂತೆ ಮನೆಗಳಲ್ಲೇ ಕುಳಿತ್ತಿದ್ದಾರೆ.ಜೆಡಿಎಸ್ ಸಭೆ:ಮೈತ್ರಿ ಮಾಡಿಕೊಂಡರೂ ನಮ್ಮನ್ನು ಯಾವುದೇ ಸಭೆ, ಸಮಾರಂಭಕ್ಕೂ ಕರೆಯುತ್ತಿಲ್ಲ. ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಬೇಕೋ ಬೇಡವೋ ಎಂಬುದನ್ನು ಚರ್ಚಿಸಲು ಇತ್ತೀಚಿಗೆ ಧಾರವಾಡ ಗ್ರಾಮೀಣ ಹಾಗೂ ಮಹಾನಗರ ಜಿಲ್ಲಾ ಜೆಡಿಎಸ್ ಸಭೆ ಕೂಡ ನಡೆಸಿದ್ದು ಆಗಿದೆ.
ಸ್ಥಳೀಯ ಮಟ್ಟದಲ್ಲೂ:
ಸ್ಥಳೀಯ ಮಟ್ಟದಲ್ಲೂ ಮೈತ್ರಿ ಆಗಬೇಕು. ಜಿಪಂ, ತಾಪಂ ಸೇರಿದಂತೆ ಮುಂದೆ ಬರುವ ಎಲ್ಲ ಚುನಾವಣೆಗಳಲ್ಲೂ ಮೈತ್ರಿ ಆಗಬೇಕು. ಈಗಲೇ ಆ ಬಗ್ಗೆಯೂ ಚರ್ಚೆಯಾಗಬೇಕು. ಬಳಿಕ ಎರಡು ಪಕ್ಷಗಳ ರಾಜ್ಯಾಧ್ಯಕ್ಷರು ಸೇರಿಕೊಂಡು ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪಕ್ಷದ ಮುಖಂಡರೊಂದಿಗೆ ಜಂಟಿ ಸಭೆ ನಡೆಸಬೇಕು. ಅಲ್ಲಿ ಮೈತ್ರಿ ಧರ್ಮವನ್ನು ಎರಡು ಪಕ್ಷದವರು ಪಾಲಿಸುವಂತೆ ಸೂಚಿಸಬೇಕು. ಎರಡು ಪಕ್ಷಗಳು ಜಂಟಿಯಾಗಿ ಪ್ರಚಾರ ನಡೆಸಬೇಕು.ಈ ನಿಟ್ಟಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಚರ್ಚಿಸಿ ಕ್ರಮಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ನಾವು ಪ್ರಚಾರದಲ್ಲೇ ತೊಡಗುವುದಿಲ್ಲ. ಅದೂ ಸಾಧ್ಯವಾಗದಿದ್ದಲ್ಲಿ ಮೈತ್ರಿ ಮುರಿದುಕೊಂಡು ಬಿಡಿ, ನಾವೇ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸೋಣ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಧಾರವಾಡ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ನಮಗೆ ಸಂಘಟನೆ ಇಲ್ಲ. ಆದರೆ ಉತ್ತರ ಕರ್ನಾಟಕ ಯಾದಗಿರಿ, ಶಿವಮೊಗ್ಗ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಂಘಟನೆ ಇದೆ. ಅಲ್ಲಿ ನಮ್ಮ ಬೆಂಬಲ ಬಿಜೆಪಿಗೆ ದೊಡ್ಡ ಶಕ್ತಿ ನೀಡುತ್ತದೆ. ಆದರೆ ನಮ್ಮನ್ನು ಈವರೆಗೂ ಪ್ರಚಾರಕ್ಕೆ ಕರೆಯುತ್ತಿಲ್ಲ. ಆದಕಾರಣ 2 ಪಕ್ಷಗಳ ರಾಜ್ಯಾಧ್ಯಕ್ಷರು ಸೇರಿದಂತೆ ಮುಖಂಡರ ಜಂಟಿ ಸಭೆ ಕರೆದು ಸಮಸ್ಯೆ ಬಗೆಹರಿಸಬೇಕು ಎಂಬ ಬೇಡಿಕೆ ಇಟ್ಟಿದ್ದೇವೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಹೇಳಿದರು.