ಸಾಲ ಪಡೆಯುವಾಗ ಆರ್ಥಿಕ ಸಾಕ್ಷರತೆ ಬಹಳ ಅಗತ್ಯ-ಲಕ್ಷ್ಮಣ ಶಿರಕೋಳ

KannadaprabhaNewsNetwork |  
Published : Jul 05, 2026, 02:00 AM IST
ಹಾವೇರಿಯ ಜಿಲ್ಲಾ ಗುರುಭವನದಲ್ಲಿ ಗ್ರಾಮೀಣ ಕೂಟದಿಂದ ಆಯೋಜಿಸಿದ್ದ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಕಾರ್ಯಾಗಾರದಲ್ಲಿ ಹೆಚ್ಚುವರಿ ಎಸ್‌ಪಿ ಲಕ್ಷ್ಮಣ ಶಿರಕೋಳ ಮಾತನಾಡಿದರು. | Kannada Prabha

ಸಾರಾಂಶ

ಸಾಲವನ್ನು ಪಡೆದುಕೊಳ್ಳುವಾಗ ಆರ್ಥಿಕ ಸಾಕ್ಷರತೆ ಬಹಳ ಅಗತ್ಯ. ಬಡ್ಡಿ ದರಗಳು, ಕ್ರೆಡಿಟ್ ಸ್ಕೋರ್‌ಗಳು ಹಾಗೂ ಸಾಲ ನಿರ್ವಹಣೆಯಂತಹ ಪರಿಕಲ್ಪನೆಗಳನ್ನು ಮಹಿಳೆಯರು ಅರ್ಥಮಾಡಿಕೊಂಡು ಸುರಕ್ಷಿತವಾಗಿ ವ್ಯವಹಾರ ಮಾಡಬೇಕು ಎಂದು ಹೆಚ್ಚುವರಿ ಎಸ್‌ಪಿ ಲಕ್ಷ್ಮಣ ಶಿರಕೋಳ ಹೇಳಿದರು.

ಹಾವೇರಿ: ಸಾಲವನ್ನು ಪಡೆದುಕೊಳ್ಳುವಾಗ ಆರ್ಥಿಕ ಸಾಕ್ಷರತೆ ಬಹಳ ಅಗತ್ಯ. ಬಡ್ಡಿ ದರಗಳು, ಕ್ರೆಡಿಟ್ ಸ್ಕೋರ್‌ಗಳು ಹಾಗೂ ಸಾಲ ನಿರ್ವಹಣೆಯಂತಹ ಪರಿಕಲ್ಪನೆಗಳನ್ನು ಮಹಿಳೆಯರು ಅರ್ಥಮಾಡಿಕೊಂಡು ಸುರಕ್ಷಿತವಾಗಿ ವ್ಯವಹಾರ ಮಾಡಬೇಕು ಎಂದು ಹೆಚ್ಚುವರಿ ಎಸ್‌ಪಿ ಲಕ್ಷ್ಮಣ ಶಿರಕೋಳ ಹೇಳಿದರು.

ನಗರದ ಜಿಲ್ಲಾ ಗುರುಭವನದಲ್ಲಿ ಶನಿವಾರ ಗ್ರಾಮೀಣ ಕೂಟ ವತಿಯಿಂದ ಆಯೋಜಿಸಿದ್ದ ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಕಾರ್ಯಾಗಾರ ಹಾಗೂ ಜ್ಞಾನದಿಂದ ಉತ್ತಮ ಜೀವನ ನಿರ್ಮಾಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರು ಉತ್ತಮ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಬೇಕು. ಗ್ರಾಮೀಣ ಕೂಟವು ಹಳ್ಳಿಗಾಡಿನ ಬಡ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆಯಾಗಲು ಕಿರು ಬಂಡವಾಳ ನೀಡುತ್ತದೆ. ಮಹಿಳೆಯರು ಜವಾಬ್ದಾರಿಯುತವಾಗಿ ಸಾಲ ಪಡೆದುಕೊಂಡು, ಅಷ್ಟೇ ಜವಾಬ್ದಾರಿಯುತವಾಗಿ ಸಾಲ ಮರುಪಾವತಿ ಮಾಡಬೇಕು. ಸಾಲ ಪಡೆದುಕೊಳ್ಳುವಲ್ಲಿ ಕ್ರೆಡಿಟ್ ಶಿಸ್ತು ಬಹಳ ಮುಖ್ಯವಾಗಿದೆ. ವಿಶೇಷವಾಗಿ ಹಣಕಾಸು ವಹಿವಾಟಿಗೆ ಸಂಬಂಧಿಸಿದಂತೆ ಓಟಿಪಿ, ಪಿನ್ ನಂಬರ್, ಸಿವಿವಿ ಹೀಗೆ ಯಾವುದೇ ವೈಯಕ್ತಿಕ ಮಾಹಿತಿಯನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಬೇಡಿ. ಇದರಿಂದ ಡಿಜಿಟಲ್ ವಂಚನೆಯಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹೆಚ್ಚು ಜಾಗರೂಕರಾಗಬೇಕು. ಮಹಿಳೆಯರು ಮಕ್ಕಳಿಗೆ ಏನೇ ಸಮಸ್ಯೆಯಾದರೂ 1098 ಕರೆ ಮಾಡಬೇಕು. ತುರ್ತು ಪರಿಸ್ಥಿತಿಯಲ್ಲಿ 112ಗೆ ಕರೆ ಮಾಡಬೇಕು ಎಂದು ಹೇಳಿದರು.

ತಾಲೂಕು ಆರೋಗ್ಯಾಕಾರಿ ಡಾ. ಪ್ರಭಾಕರ್ ಕುಂದೂರ ಅವರು ಗರ್ಭಕಂಠದ ಕ್ಯಾನ್ಸರ್ ಕುರಿತು ಉಪನ್ಯಾಸ ನೀಡಿ, ಮಹಿಳೆಯರು ಹೆಚ್ಚಾಗಿ ಆರೋಗ್ಯದ ಕಡೆಗೆ ಗಮನಹರಿಸಬೇಕು. ಸರ್ವೈಕಲ್ ಕ್ಯಾನ್ಸರ್ ಗರ್ಭಾಶಯದ ಕೆಳಭಾಗದ ಜೀವಕೋಶಗಳಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ ಆಗಿದೆ. ಇದನ್ನು ತಡೆಗಟ್ಟಲು 14 ರಿಂದ 35 ವರ್ಷದೊಳಗಿನ ಹೆಣ್ಣು ಮಕ್ಕಳು ಕಡ್ಡಾಯವಾಗಿ ವ್ಯಾಕ್ಸಿನ್ ಪಡೆಯಬೇಕು. ವರ್ಷಕ್ಕೊಮ್ಮೆಯಾದರೂ ಸಮೀಪದ ಆಸ್ಪತ್ರೆಗೆ ಹೋಗಿ ತಪಾಸಣೆಗೆ ಒಳಗಾಗಬೇಕು. ಆರಂಭಿಕ ಹಂತ 1, ಹಂತ 2 ಇದ್ದರೆ ಶೀಘ್ರ ಗುಣಪಡಿಸಬಹುದು. 3-4 ಹಂತದಲ್ಲಿದ್ದರೆ ಗುಣಪಡಿಸಲು ಅಸಾಧ್ಯವಾಗಲಿದೆ. ಈ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು ಎಂದರು.

ಜತೆಗೆ ಮಾನಸಿಕ ಒತ್ತಡ, ಆರೋಗ್ಯದಲ್ಲಿ ವ್ಯತ್ಯಾಸವಾಗಿ ಹದಿಹರೆಯದವರಲ್ಲಿ ಬಿಪಿ, ಶುಗರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅಂದಾಜು ಮಾಹಿತಿ ಪ್ರಕಾರ 100 ಜನರದಲ್ಲಿ 20 ಜನರಿಗೆ ಬಿಪಿ, 15 ಜನರಿಗೆ ಶುಗರ್ ಇರುತ್ತದೆ. ಇದಕ್ಕೂ ಉಚಿತವಾಗಿ ಚಿಕಿತ್ಸೆ ಪಡೆಯಲು ಅವಕಾಶವಿದ್ದು, ಕಾಲಕಾಲಕ್ಕೆ ಬಿಪಿ ಶುಗರ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಯೋಗ, ಧ್ಯಾನ, ಆಹಾರ, ಕಾಳು ಪದಾರ್ಥ, ಸೊಪ್ಪು ಸೇವನೆ ಮಾಡಬೇಕು ಎಂದು ಮಾಹಿತಿ ನೀಡಿದರು. ಈ ವೇಳೆ ಗ್ರಾಮೀಣ ಕೂಟದ ಪ್ರಾದೇಶಿಕ ಅಧಿಕಾರಿ ನಾಗಪ್ಪ ಸಿ., ಬೆಳಗಾವಿ ಪ್ರಾಂತದ ಅಧಿಕಾರಿ ರವಿ ಎಸ್.ಎನ್., ಆರ್.ಪಿ.ಸಿ ಮುಖ್ಯಸ್ಥ ವಿಜಯಕುಮಾರ, ರಾಜ್ಯ ಎಡಿಟೆಡ್ ಮುಖ್ಯಸ್ಥ ಪ್ರಕಾಶ ಸೇರಿದಂತೆ ಗ್ರಾಮೀಣ ಕೂಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

18 ವರ್ಷ ಮೇಲ್ಪಟ್ಟ ಮಹಿಳೆಯರು ಪ್ರಧಾನಮಂತ್ರಿ ಜೀವನ್‌ಜ್ಯೋತಿ ಭಿಮಾ ಯೋಜನೆಯಡಿ ವರ್ಷಕ್ಕೆ 436 ರು. ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆಯಡಿ ವಾರ್ಷಿಕ 20 ರು. ಜೀವ ವಿಮೆ ಪಾವತಿಸಿದರೆ, ಅಪಘಾತದಲ್ಲಿ ಮರಣ ಹೊಂದಿದರೆ 2 ಲಕ್ಷ ರು. ವಿಮೆ ಬರುತ್ತದೆ. ಮಹಿಳೆಯರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಅಗ್ರಣೀಯ ಬ್ಯಾಂಕ್‌ ಮುಖ್ಯಸ್ಥ ಪ್ರಭುದೇವ ಅಂಜಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗದಗ ಜಿಲ್ಲೆಯ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ವ್ಯಾಪಕ ಅಕ್ರಮ: ಬಸವರಾಜ ಬೊಮ್ಮಾಯಿ
ಮೂರು ಬೂತ್‌ಗಳಲ್ಲಿ ಎಚ್.ಕೆ. ಪಾಟೀಲ ಹೆಸರು: ಬಸವರಾಜ ಬೊಮ್ಮಾಯಿ ಆರೋಪ