ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ವಿ.ಸಿ ಫಾರಂ ವಲಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಕೃಷಿ ಮೇಳವನ್ನು ಉದ್ಘಾಟಿಸಿ ಮಾತನಾಡಿ, ರೈತರು ಹೆಚ್ಚಾಗಿ ಬೆಳೆಯುತ್ತಿರುವ ಕೃಷಿ ಉತ್ಪನ್ನಗಳನ್ನು ಸಂಸ್ಕರಣೆ ಮಾಡಿ ಮೌಲ್ಯವರ್ಧನೆಗೊಳಿಸಬೇಕು. ರೈತ ಉತ್ಪಾದಕ ಸಂಸ್ಥೆಗಳನ್ನು ಸದೃಢಗೊಳಿಸುವಂತೆ ಸಲಹೆ ನೀಡಿದರು.
ಇಂದಿನ ಯುವ ಪೀಳಿಗೆ ಉದ್ಯೋಗವನ್ನರಸಿಕೊಂಡು ಹಳ್ಳಿಯಿಂದ ನಗರಕ್ಕೆ ವಲಸೆ ಹೋಗುತ್ತಿರುವ ಕಾರಣದಿಂದ ಕೃಷಿ ಕ್ಷೇತ್ರದಲ್ಲಿ ಕೂಲಿ ಕಾರ್ಮಿಕರ ಲಭ್ಯತೆ ಕಡಿಮೆ ಇದೆ. ಕೃಷಿ ಅನಿವಾರ್ಯವಾಗಿರುವ ಸಂದರ್ಭದಲ್ಲಿ ರೈತರು ಕೃಷಿ ಯಂತ್ರೋಪಕರಣಗಳ ಮೇಲಿನ ಅವಲಂಬನೆಯನ್ನು ಹೆಚ್ಚು ಮಾಡಿಕೊಳ್ಳಬೇಕು ಎಂದರು.ಕೃಷಿಯಲ್ಲಿ ರೈತರು ರಾಸಾಯನಿಕ ಗೊಬ್ಬರವನ್ನು ಹಾಗೂ ಕೀಟನಾಶಕಗಳನ್ನು ಹೆಚ್ಚಾಗಿ ಬಳಸುವುದರಿಂದ ಮಣ್ಣು ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ. ಮಣ್ಣಿನ ಪೋಷಕಾಂಶ ಹಾಗೂ ಫಲವತ್ತತೆಯನ್ನು ಕಾಪಾಡಿಕೊಂಡು ಕೃಷಿಯನ್ನು ಮುನ್ನಡೆಸಬೇಕು. ರೈತರು ಸಾವಯವ ಗೊಬ್ಬರವನ್ನು ಬೇಸಾಯದಲ್ಲಿ ಉಪಯೋಗಿಸುವುದರಿಂದ ಫಲವತ್ತತೆ ಹೆಚ್ಚುತ್ತದೆ. ಮಣ್ಣಿನ ಸಂರಕ್ಷಣೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಕೃಷಿಯಲ್ಲಿ ಬಹಳ ದುಷ್ಪರಿಣಾಮ ಉಂಟಾಗುತ್ತದೆ ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಿಂದ ಕಳೆದ ವರ್ಷ ಬಿಡುಗಡೆಯಾಗಿರುವ ಹೊಸ ತಳಿಗಳು, ತಂತ್ರಜ್ಞಾನ ಹಾಗೂ ಕಿರುಹೊತ್ತಿಗೆಗಳನ್ನು ಅನಾವರಣಗೊಳಿಸಲಾಯಿತು.
ಕೃಷಿ ಮೇಳದ ವಿಶೇಷತೆಗಳು
ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗೆ ಶಿಫಾರಸ್ಸು ಮಾಡಲಾಗಿರುವ ಭತ್ತ, ರಾಗಿ ಮತ್ತು ಸಿರಿಧಾನ್ಯ, ಮುಸುಕಿನ ಜೋಳದಲ್ಲಿ ಹೈಬ್ರಿಡ್ ತಳಿ, ಅತ್ಯುತ್ತಮ ಇಳುವರಿ ಕೊಡುವ ಹಾಗೂ ಹೆಚ್ಚು ಸಕ್ಕರೆ ಅಂಶವಿರುವ ಕಬ್ಬಿನ ತಳಿಯಾದ ಬಾಹುಬಲಿ - ೫೧೭, ಮೇವಿನ ಬೆಳೆ, ದ್ವಿದಳ ಧಾನ್ಯಗಳು, ಎಣ್ಣೆ ಕಾಳುಗಳು, ನೀರಾವರಿ ಪದ್ಧತಿ ಹಾಗೂ ಇನ್ನಿತರೆ ರೈತರಿಗೆ ಬೇಕಾದ ಮುಖ್ಯ ವಿಷಯಗಳ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು.
ಬಂಬಾರ ಕಡಲೆ ಮತ್ತು ಹಡಲೆ ರಾಗಿ
ಅಡಲೆ ರಾಗಿಯಲ್ಲಿ ಅಧಿಕ ಪ್ರೊಟೀನ್ ಅಂಶ ಇದ್ದು, ಮೇಘಾಲಯ, ಮಿಜೋರಾಮ್, ಸಿಕ್ಕಿಂನಲ್ಲಿ ಈ ಬೆಳೆಯನ್ನು ಬೆಳೆದು ಗಂಜಿ ರೂಪದಲ್ಲಿ ಬಳಸಲಾಗುತ್ತದೆ. ಹಡಲೆ ರಾಗಿಯು ಮಾನವನ ಮೂಳೆಯ ಸಾಂದ್ರತೆ ಕಾಪಾಡಲು, ರಕ್ತದೊತ್ತಡ, ಸಕ್ಕರೆ ಕಾಯಿಲೆ ಹಾಗೂ ಹಾಸ್ಟಿಯೋ ಪೊರೋಸಿಸ್ ರೋಗವನ್ನು ಹೋಗಲಾಡಿಸಲು ಬಹಳ ಉಪಯುಕ್ತವಾಗಿದೆ.
ರಾಜಮುಡಿ ಎತ್ತರ, ಅವಧಿ ಕಡಿಮೆ
ಕೃಷಿಯಲ್ಲಿ ರಾಜಮುಡಿ ತಳಿ ಭತ್ತವು ಬಹಳ ಗುಣಮಟ್ಟದ ತಳಿಯಾಗಿದೆ. ಇದು ಎತ್ತರವಾಗಿ ಬೆಳೆಯುವ ಹಾಗೂ ಕೊಟ್ಟಿಗೆ ಗೊಬ್ಬರದಲ್ಲಿ ಮಾತ್ರ ಬೆಳೆಯಾಗಿತ್ತು. ಹಿಂದೆ ರಾಜಮುಡಿ ಬೆಳೆಯನ್ನು ೧ ವರ್ಷಕ್ಕೆ ೧ ಬೆಳೆಯನ್ನು ಬೆಳೆಯಲಾಗುತ್ತಿತ್ತು. ಆದರೆ, ಈ ಬಾರಿ ನಾವು ವಾರ್ಷಿಕವಾಗಿ ೨ ಬೆಳೆ ಬೆಳೆಯಲು ರಾಜಮುಡಿ ತಳಿಯಲ್ಲಿ ಗುಣಮಟ್ಟತೆಯನ್ನು ಕಾಪಾಡುವ ಜೊತೆಗೆ ಅದರ ಎತ್ತರ ಹಾಗೂ ಅವಧಿಯನ್ನು ಕಡಿಮೆಗೊಳಿಸಲಾಗಿದೆ. ಸಾವಯವ ಹಾಗೂ ರಾಸಾಯನಿಕ ಸಮಗ್ರ ಗೊಬ್ಬರದಿಂದ ಬೆಳೆಯುವ ಜೊತೆಗೆ ಹಿಂಗಾರು ಹಾಗೂ ಮುಂಗಾರು ೨ ಹವಾಮಾನಕ್ಕೂ ಹೊಂದಿಕೆಯಾಗುತ್ತದೆ.