ಕನ್ನಡಪ್ರಭ ವಾರ್ತೆ ಮಂಡ್ಯ
ಬುಧವಾರ ನಗರದ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ನಡೆದ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಜಲಜೀವನ್ ಯೋಜನೆಯ ಪ್ರಗತಿ ಬಗ್ಗೆ ಅಧಿಕಾರಿ ಮಾಹಿತಿ ನೀಡುತ್ತಿದ್ದ ವೇಳೆ ಬೇವುಕಲ್ಲು, ಜಿ. ಮಲ್ಲೀಗೆರೆ, ತಿಮ್ಮಾಪುರ, ಹೊನ್ನೇಮಡು,, ಹೊಳಲು, ಮುದಗಂದೂರು ಗ್ರಾಮಗಳಲ್ಲಿ ವಾಟರ್ ಟ್ಯಾಂಕ್ ನಿರ್ಮಾಣಕ್ಕೆ ಜಾಗವಿಲ್ಲ ಎಂದು ಹೇಳಿದರು.
ಜಾಗವಿಲ್ಲ ಎಂದು ಸುಮ್ಮನೆ ಕುಳಿತಿದ್ದೀರಾ, ಪಿಡಿಒ ಮತ್ತು ಗ್ರಾಮ ಆಡಳಿತ ಅಧಿಕಾರಿ ಗಮನಕ್ಕೆ ತಂದಿದ್ದೀರಾ ಎಂದು ದರ್ಶನ್ ಪುಟ್ಟಣ್ಣಯ್ಯ ಪ್ರಶ್ನಿಸಿದಾಗ, ಅವರ ಗಮನಕ್ಕೂ ತಂದಿದ್ದೇವೆ ಎಂದು ಅಧಿಕಾರಿ ಉತ್ತರಿಸಿದರು. ಇದಕ್ಕೆ ಪಿಡಿಒಗಳು ಉತ್ತರಿಸಿ, ಬೇವುಕಲ್ಲು ಗ್ರಾಮದಲ್ಲಿ ಗ್ರಾಮಠಾಣಾ ಇಲ್ಲ, ಹೊನ್ನೇಮಡುವಿನಲ್ಲಿದ್ದರೂ ಗ್ರಾಮದಿಂದ ದೂರವಿದೆ. ತಿಮ್ಮಾಪುರ, ಹೊಳಲು ಗ್ರಾಮದಲ್ಲೂ ಜಾಗವಿಲ್ಲ. ಮುದಗಂದೂರು ಗ್ರಾಮದಲ್ಲೂ ಜಾಗದ ಕೊರತೆ ಇರುವುದಾಗಿ ಸಭೆಯ ಗಮನಕ್ಕೆ ತಂದರು.ಇದು ಕುಡಿಯುವ ನೀರಿನ ವಿಚಾರ. ಜಾಗ ಇಲ್ಲ ಎಂದು ಸುಮ್ಮನೆ ಕೂರಲಾಗುವುದಿಲ್ಲ. ಸರ್ವೇ ನಂಬರ್‌ಗಳಲ್ಲಿ ಜಾಗ ಹುಡುಕಿ. ಜಾಗವನ್ನು ಹುಡುಕಿಕೊಡುವ ಜವಾಬ್ದಾರಿ ಪಿಡಿಒಗಳದ್ದು, ಪಿಡಿಒ ಮತ್ತು ಗ್ರಾಮ ಆಡಳಿತಾಧಿಕಾರಿಗಳು ಈ ವಿಷಯದಲ್ಲಿ ಒಗ್ಗೂಡಿ ಕೆಲಸ ಮಾಡಬೇಕು. ಶೀಘ್ರವೇ ಜಾಗವನ್ನು ಹುಡುಕಿಕೊಡುವಂತೆ ಸೂಚನೆ ನೀಡಿದರು.
ಮೇಲುಕೋಟೆ ಕ್ಷೇತ್ರ ವ್ಯಾಪ್ತಿಯಲ್ಲಿ ೪೧ ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಒಂದು ಘಟಕ ಮಾತ್ರ ದುರಸ್ತಿಯಲ್ಲಿದೆ ಎಂದಾಗ, ಕೋಪಗೊಂಡ ದರ್ಶನ್ ಪುಟ್ಟಣ್ಣಯ್ಯ, ಸುಳ್ಳು ಯಾಕ್ರೀ ಹೇಳ್ತೀರಾ. ನಾನು ಕಂಡಂತೆ ೪೧ ಘಟಕಗಳಲ್ಲಿ ೨೦ ಘಟಕಗಳು ಕೆಲಸ ಮಾಡುತ್ತಿಲ್ಲ. ಬನ್ನಿ ಈಗಲೇ ನೋಡಿಕೊಂಡು ಬರೋಣ ಎಂದರು.
ಹುಲಿಕೆರೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಪದೇ ಪದೇ ಕೆಟ್ಟುಹೋಗುತ್ತಿರುವ ಬಗ್ಗೆ ಕೇಳಿದಾಗ ಟ್ರಾನ್ಸ್‌ಫಾರ್ಮರ್ ಸಮಸ್ಯೆ ಇರುವುದಾಗಿ ಅಧಿಕಾರಿ ತಿಳಿಸಿದರು. ಊರಿನವರಿಂದಲೂ ಟ್ರಾನ್ಸ್‌ಫಾರ್ಮರ್ ಬಗ್ಗೆ ದೂರುಗಳಿವೆ. ಅದನ್ನು ಬದಲಾಯಿಸಿ ಸಮಸ್ಯೆಗೆ ಪರಿಹಾರ ಸೂಚಿಸುವಂತೆ ಸಭೆಯಲ್ಲಿದ್ದ ಸೆಸ್ಕಾಂ ಇಲಾಖೆ ಅಧಿಕಾರಿಗೆ ತಿಳಿಸಿದರು.
ವಿ.ಸಿ.ಫಾರಂ, ಬಿಳಿಗುಲಿ, ಉಪ್ಪಾರಕೊಪ್ಪಲು, ದುದ್ದ ಗ್ರಾಮಗಳಲ್ಲಿ ಕೆಆರ್‌ಐಡಿಎಲ್ ವತಿಯಿಂದ ಬಸ್ ನಿಲ್ದಾಣಗಳನ್ನು ನಿರ್ಮಿಸಲು ರಸ್ತೆ ಪಕ್ಕದಲ್ಲಿ ಜಾಗ ಸಿಗುತ್ತಿಲ್ಲವೆಂದು ಅಧಿಕಾರಿ ತಿಳಿಸಿದಾಗ, ನೀವು ಈ ವಿಷಯವನ್ನು ಪಿಡಿಒಗಳ ಗಮನಕ್ಕೆ ತಂದಿದ್ದೀರಾ ಎಂದು ದರ್ಶನ್ ಕೇಳಿದರು. ಸಭೆಯಲ್ಲೇ ಪಿಡಿಒ ಇದ್ದಾರೆ ಕೇಳಿ ಎಂದಾಗ ಕೆಲ ಪಿಡಿಒಗಳು ಜಾಗವಿಲ್ಲದಿರುವ ವಿಷಯವನ್ನು ನಮ್ಮ ಗಮನಕ್ಕೆ ತಂದಿಲ್ಲ ಎಂದರು. ದುದ್ದ ಗ್ರಾಮದಲ್ಲಿ ಹಳೆಯ ಬಸ್ ನಿಲ್ದಾಣ ಶಿಥಿಲಾವಸ್ಥೆಯಲ್ಲಿದ್ದು, ಅಲ್ಲಿ ನಿರ್ಮಿಸಬಹುದು. ವಿ.ಸಿ.ಫಾರಂನಲ್ಲೂ ಸ್ಥಳಾವಕಾಶ ದೊರಕಿಸಿಕೊಡುವುದಾಗಿ ಪಿಡಿಒಗಳು ತಿಳಿಸಿದರು.
ಕ್ಷೇತ್ರದ ಚಂದಗಾಲು ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಎರಡು ಎಕರೆ ಜಾಗವನ್ನು ಗುರುತಿಸಲಾಗಿದೆ. ಅದು ಇಲಾಖೆ ಹೆಸರಿಗೆ ಖಾತೆಯಾಗಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಟಿ.ಜವರೇಗೌಡ ಅವರು ಸಭೆಗೆ ತಿಳಿಸಿದಾಗ, ಆ ಜಾಗ ಎರಡು- ಮೂರು ತಿಂಗಳ ಹಿಂದೆಯೇ ಖಾತೆಯಾಗಿದೆಯಲ್ಲ ಎಂದು ದರ್ಶನ್ ಹೇಳಿದರು. ಇದಕ್ಕೆ ತಹಸೀಲ್ದಾರ್ ಶಿವಕುಮಾರ್ ಬಿರಾದರ್ ಕೂಡ ದನಿಗೂಡಿಸಿದರು.
ಎಂಟು ಮಾದರಿ ಹಣ್ಣುಗಳನ್ನು ಬೆಳೆಯಬಹುದು:
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಕಳೆದ ವರ್ಷಕ್ಕಿಂತ ಈ ವರ್ಷ ಸರ್ಕಾರಿ ಶಾಲೆಗಳಿಗೆ ೯೦ ಮಕ್ಕಳು ಕಡಿಮೆಯಾಗಿದ್ದಾರೆ. ಮಕ್ಕಳ ಸಂಖ್ಯೆ ಕುಸಿಯದಂತೆ ಹೆಚ್ಚು ದಾಖಲಾಗುವುದಕ್ಕೆ ಏನು ಕ್ರಮ ಕೈಗೊಳ್ಳಬೇಕೆಂಬ ಕುರಿತು ಕಾರ್ಯಕ್ರಮಗಳನ್ನು ರೂಪಿಸುವಂತೆ ತಿಳಿಸಿದರು.
ಸಭೆಯಲ್ಲಿ ತಾಪಂ ಇಒ ಎಂ.ಎಸ್.ವೀಣಾ, ತಹಸೀಲ್ದಾರ್ ಶಿವಕುಮಾರ್ ಬಿರಾದಾರ್ ಇದ್ದರು.