ಸಾರ್ವಜನಿಕರ ಅರ್ಜಿಗಳ ವಿಲೇವಾರಿ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ: ಲೋಕಾಯುಕ್ತ ಎಸ್ಪಿ

KannadaprabhaNewsNetwork |  
Published : Mar 13, 2025, 12:48 AM IST
12ಕೆಎಂಎನ್ ಡಿ15 | Kannada Prabha

ಸಾರಾಂಶ

ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಕಾಡಂಚಿನ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ರೈತರ ಸಮಸ್ಯೆ ಬಗೆಹರಿಸಬೇಕು. ನೆಡುತೋಪು ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುವ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ವಹಿಸಲು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ ಬರುವ ದೂರಿನ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದು ಅರ್ಜಿಗಳ ವಿಲೇವಾರಿ ಮಾಡಿ ಪರಿಹಾರ ಕಂಡುಕೊಳ್ಳಬೇಕು ಎಂದು ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಬುಧವಾರ ಲೋಕಾಯುಕ್ತ ಪೊಲೀಸರು ಆಯೋಜಿಸಿದ್ದ ಸಾರ್ವಜನಿಕ ಅಹವಾಲು, ದೂರು ಸ್ವೀಕಾರ ಮತ್ತು ಕುಂದುಕೊರತೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಂದಾಯ ಇಲಾಖೆ ಬಗ್ಗೆ ಅತಿ ಹೆಚ್ಚು ದೂರುಗಳು ಬಂದಿವೆ. ಈ ಬಗ್ಗೆ ತಹಸೀಲ್ದಾರ್ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಿ ಅರ್ಜಿಗಳ ಸಮರ್ಪಕ ವಿಲೇವಾರಿಗೆ ಮುಂದಾಗಬೇಕು ಎಂದರು.

ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಕಾಡಂಚಿನ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ರೈತರ ಸಮಸ್ಯೆ ಬಗೆಹರಿಸಬೇಕು. ನೆಡುತೋಪು ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುವ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ವಹಿಸಲು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದರು.

ಇಲಾಖೆಗಳ ಕಾರ್ಯವೈಕರಿ ವಿರುದ್ಧ ಲೋಕಾಯುಕ್ತಕ್ಕೆ ದೂರುಗಳ ಮಹಾಪೂರವೇ ಬರುತ್ತಿರುವ ಹಿನ್ನೆಲೆಯಲ್ಲಿ ತಾಲೂಕು ಮಟ್ಟದಲ್ಲೇ ಸಭೆ ನಡೆಸಿ ಸ್ಥಳೀಯವಾಗಿಯೇ ಸಮಸ್ಯೆ ಬಗೆಹರಿಸಲು ಕ್ರಮ ವಹಿಸುವಂತೆ ಲೋಕಾಯುಕ್ತರ ಸೂಚನೆಯಂತೆ ಕುಂದುಕೊರತೆ ಸಭೆ ಆಯೋಜಿಸಲಾಗುತ್ತಿದೆ. ಅಲ್ಲದೇ, ಸಾರ್ವಜನಿಕರು ನೀಡುವ ದೂರಿನ ಬಗ್ಗೆ ಸಂಬಂಧಿಸಿದ ಇಲಾಖೆ ಕ್ರಮ ವಹಿಸಿ ಆ ಬಗ್ಗೆ ನಮಗೆ ವರದಿ ನೀಡಬೇಕು ಎಂದು ಸೂಚಿಸಿದರು.

ರೈತ ಸಂಘದ ಚಿಕ್ಕಣ್ಣ ಮಾತನಾಡಿ, ಕಳೆದ 15 ವರ್ಷಗಳ ಹಿಂದೆ ಸಲ್ಲಿಸಿರುವ ಅರ್ಜಿ ವಿಲೇವಾರಿಯಾಗಿಲ್ಲ ಎಂದು ಸಭೆ ಗಮನಕ್ಕೆ ತಂದರು. ಈ ಬಗ್ಗೆ ತಹಸೀಲ್ದಾರ್ ಎಸ್.ವಿ.ಲೋಕೇಶ್ ಪ್ರತಿಕ್ರಿಯಿಸಿ, ಕಳೆದ ತಿಂಗಳ ಹಿಂದೆಷ್ಟೇ ಅರ್ಜಿ ಬಂದಿದೆ. ಈಗಾಗಲೇ ಬಾಕಿ ಉಳಿದಿರುವ ಎಲ್ಲ ಕಡತಗಳ ವಿಲೇವಾರಿಗೆ ಮುಂದಾಗಿದ್ದೇವೆ. ಇನ್ನೂ ಮೂರು ವಾರಗಳಲ್ಲಿ ಅದನ್ನು ಬಗೆಹರಿಸಲಾಗುವುದು ಎಂದರು.

ಡಿವೈಎಸ್ಪಿ ಎಚ್.ಟಿ.ಸುನೀಲ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿನ ಸಹಕಾರ ಇಲಾಖೆ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಅಧಿಕಾರಿಗಳು ಎಲ್ಲ ಸಹಕಾರ ಸಂಘಗಳಿಗೆ ಭೇಟಿ ನೀಡಿ ಸದಸ್ಯರ ಸಮಸ್ಯೆ ಆಲಿಸಬೇಕು ಎಂದರು.

ಗ್ರಾಮ ಪಂಚಾಯ್ತಿಗಳಲ್ಲಿನ ಇ-ಖಾತಾ ಆಂದೋಲನ ತ್ವರಿತಗತಿಯಲ್ಲಿ ಮುಗಿಸಬೇಕು. ಕೆಲವು ಪಂಚಾಯ್ತಿಗಳ ಅಭಿವೃದ್ಧಿ ಅಧಿಕಾರಿಗಳು ನಿಗದಿ ವೇಳೆಯಲ್ಲಿ ಇ-ಖಾತಾ ಮಾಡುವುದಿಲ್ಲ ಎಂಬ ದೂರುಗಳಿವೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಅಲ್ಲದೇ, ಪ್ರತಿ ತಿಂಗಳು ಸಾಮಾನ್ಯ ಸಭೆ ಕರೆಯಬೇಕು ಎಂದು ಸೂಚಿಸಿದರು.

ತಾಪಂ ಇಒ ಎಚ್.ಜಿ.ಶ್ರೀನಿವಾಸ್ ಮಾತನಾಡಿ, ಕೆಲವೆಡೆ ಪಂಚಾಯ್ತಿ ಅಧ್ಯಕ್ಷರ ಮಕ್ಕಳಿಗೆ ಕಾಮಗಾರಿಗಳ ಕೆಲಸ ನೀಡುತ್ತಿರುವುದರಿಂದ ಅವರ ಸದಸ್ಯತ್ವ ರದ್ದಾಗಲಿದೆ. ಅಲ್ಲದೇ, ಒಂದು ಲಕ್ಷ ಮೇಲ್ಪಟ್ಟ ಸಾಮಗ್ರಿಗಳ ಖರೀದಿಗೆ ಟೆಂಡರ್ ಕರೆಯಬೇಕು ಎಂಬ ನಿಯಮವಿದ್ದರೂ ಅದು ಉಲ್ಲಂಘನೆಯಾಗುತ್ತಿದೆ ಎಂದರು.

ಈಗಾಗಲೇ ಕೆಲವರ ವಿರುದ್ಧ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಸಮರ್ಪಕ ಕಸ ವಿಲೇವಾರಿ ಯಾಗುವಂತೆ ಜಾಗೃತಿ ವಹಿಸಬೇಕು ಎಂದರು.

ನಿವೇಶನಗಳ ಅಳತೆ ಹಾಗೂ ದಾಖಲೆಗಳ ವ್ಯತ್ಯಾಸದಿಂದ ಸಾರ್ವಜನಿಕರು ಲೋಕಾಯುಕ್ತಕ್ಕೆ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಕಚೇರಿಗಳಿಗೆ ಜನರು ಅಲೆಯುವ ಸ್ಥಿತಿಯಾಗಿದೆ. ಈ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದರು.

ಬಹುತೇಕ ಗ್ರಾಮಗಳಲ್ಲಿ ಕಸಗಳ ವಿಲೇವಾರಿ ಸರಿಯಾಗಿ ನಡೆಯದೆ ವಾಹನಗಳು ನಿಂತಲ್ಲೇ ತುಕ್ಕು ಹಿಡಿಯುತ್ತಿವೆ. ಶುದ್ಧ ನೀರಿನ ಘಟಕಗಳು ಕೆಟ್ಟು ನಿಂತಿವೆ. ಈ ಬಗ್ಗೆ ಗಮನ ಹರಿಸಬೇಕು. ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಹೆರಿಗೆ ವಾರ್ಡ್ ನಲ್ಲಿ ವೈದ್ಯರು ಹಾಗೂ ಸಿಬ್ಬಂಯಿಂದ ಹಣ ವಸೂಲಿ ಆರೋಪ ಕೇಳಿಬರುತ್ತಿದೆ. ಈ ಬಗ್ಗೆ ಕ್ರಮ ವಹಿಸುವಂತೆ ಆಸ್ಪತ್ರೆಯ ಆಡಳಿತಾಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಲೋಕಾಯುಕ್ತ ಇನ್ಸ್ ಪೆಕ್ಟರ್ ಮೋಹನ್ ರೆಡ್ಡಿ, ತಹಸೀಲ್ದಾರ್ ಎಸ್.ವಿ.ಲೋಕೇಶ್ ಸೇರಿದಂತೆ ಲೋಕಾಯಕ್ತ ಸಿಬ್ಬಂದಿ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ