ಚನ್ನಗಿರಿ: ಪ್ರಸ್ತುತ ಬಹುತೇಕ ಮಂದಿ ದ್ವೇಷ, ಅಸೂಯೆ ಸಾಧಿಸುತ್ತ, ಸಣ್ಣಪುಟ್ಟ ವ್ಯಾಜ್ಯಗಳ ಬಗೆಹರಿಸಲು ನ್ಯಾಯಾಲಯ ಮೆಟ್ಟಿಲು ಏರುತ್ತ ಹಣ ಹಾಗೂ ಸಮಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರ ಬದಲಿಗೆ ಸೌಹಾರ್ದದಿಂದ ಸಮಸ್ಯೆಗಳ ಪರಿಹರಿಸಿಕೊಂಡಲ್ಲಿ ಉತ್ತಮ ಬಾಂಧವ್ಯ ಹೊಂದಲು ಸಾಧ್ಯವೆಂಬುದು ಯೋಚಿಸಬೇಕು ಎಂದು ದಾವಣಗೆರೆಯ 1ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶ ಎಂ.ಎಚ್. ಅಣ್ಣಯ್ಯನವರ್ ಹೇಳಿದರು. ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಲೋಕ್ ಅದಾಲತ್ ಪೂರ್ವಭಾವಿ ಸಭೆ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ದಾವಣಗೆರೆ ಜಿಲ್ಲಾ ಕಾನೂನು ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ್ ಮಾತನಾಡಿ, ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ನ್ಯಾಯಾಲಯದಲ್ಲಿರುವ ವ್ಯಾಜ್ಯಗಳನ್ನು ಕಡಿತ ಮಾಡುವ ಉದ್ದೇಶದಿಂದ ಲೋಕ್ ಅದಾಲತ್ ನಡೆಸುತ್ತಿದೆ. ಕಕ್ಷಿದಾರರು ವಕೀಲರ ಮೂಲಕ ರಾಜಿ ಸಂಧಾನ ಮುಖೇನ ಪ್ರಕರಣ ಶೀಘ್ರ ಮಾಡಿಕೊಳ್ಳಲು ಅವಕಾಶವಿದೆ ಎಂದ ಅವರು, ಚನ್ನಗಿರಿಯ ನ್ಯಾಯಾಲಯದಲ್ಲಿಯೇ 5297 ವ್ಯಾಜ್ಯಗಳ ಪ್ರಕರಣಗಳು ನಡೆಯುತ್ತಿವೆ ಎಂದರು.
ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸೌಭಾಗ್ಯ ಬುಷೇರ್, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶಮಶ್ರೀವತ್ಸ, 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಜಿ.ಮಹಾಲಕ್ಷ್ಮೀ, ಹಿರಿಯ ನ್ಯಾಯವಾದಿ ವೈ.ಎಂ. ರಾಮಚಂದ್ರ ರಾವ್, ಕೆ.ಜಿ.ಶಿವಾನಂದ್, ನ್ಯಾಯವಾದಿಗಳ ಸಂಘದ ಅಧ್ಯಕ್ಷ ರಾಜಪ್ಪ ಉಪಸ್ಥಿತರಿದ್ದರು.- - - -3ಕೆಸಿಎನ್‌ಜಿ1:
ರಾಷ್ಟ್ರೀಯ ಲೋಕ್ ಅದಾಲತ್ ಪೂರ್ವಭಾವಿ ಸಭೆಯನ್ನು ನ್ಯಾಯಾಧೀಶ ಎಂ.ಎಚ್. ಅಣ್ಣಯ್ಯನವರ್ ಉದ್ಘಾಟಿಸಿದರು.