ಗಣತಿ ವೇಳೆ ಮನೆ ಹುಡುಕೋದುಕಷ್ಟವಾಗುತ್ತಿದೆ: ಶಿಕ್ಷಕರ ಅಳಲು

KannadaprabhaNewsNetwork |  
Published : Sep 25, 2025, 01:00 AM IST
ಗಣತಿ | Kannada Prabha

ಸಾರಾಂಶ

ಜಿಯೋ ಟ್ಯಾಗ್ ಮಾಡಿದ ಮನೆಯನ್ನು ಲೊಕೇಷನ್ ಮೂಲಕ ಹುಡುಕುವುದು ಶಿಕ್ಷಕರಿಗೆ ತೀವ್ರ ಕಷ್ಟವಾಗುತ್ತಿದೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

ಜಿಯೋ ಟ್ಯಾಗ್ ಮಾಡಿದ ಮನೆಯನ್ನು ಲೊಕೇಷನ್ ಮೂಲಕ ಹುಡುಕುವುದು ಶಿಕ್ಷಕರಿಗೆ ತೀವ್ರ ಕಷ್ಟವಾಗುತ್ತಿದೆ. ಒಬ್ಬ ಗಣತಿದಾರರಿಗೆ 75ಕ್ಕಿಂತ ಹೆಚ್ಚು ಮನೆ ನೀಡಿದರೆ ಅದರಲ್ಲೂ ಬೇರೆ ಬೇರೆ ಊರುಗಳಲ್ಲಿ ನೀಡುತ್ತಿರುವುದರಿಂದ ನಿಗದಿತ ಸಮಯದಲ್ಲಿ ಗಣತಿ ಪೂರೈಸಲು ಸಾಧ್ಯವಿಲ್ಲ.

ಹೀಗೆ, ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿರುವ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳ ಪಟ್ಟಿ ಮಾಡಿರುವ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು, ಸರ್ಕಾರದೊಂದಿಗೆ ಚರ್ಚಿಸಿ ಅವುಗಳಿಗೆ ಪರಿಹಾರ ಒದಗಿಸಲು ಮನವಿ ಮಾಡಿದೆ.

ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಸೇರಿದಂತೆ ಮತ್ತಿತರ ಪದಾಧಿಕಾರಿಗಳು ಬುಧವಾರ ನಗರದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ ನಾಯಕ ಮತ್ತು ಸದಸ್ಯ ಕಾರ್ಯದರ್ಶಿ ದಯಾನಂದ ಅವರನ್ನು ಭೇಟಿ ಮನವಿ ಸಲ್ಲಿಸಿದ್ದಾರೆ.

ಮನವಿ ಪತ್ರದಲ್ಲಿ ಪ್ರಮುಖವಾಗಿ ಜಿಯೋ ಟ್ಯಾಗ್‌ ಅಂಟಿಸಿದ ಮನೆಗಳ ಲೊಕೇಷನ್‌ ಹುಡುಕುವುದು ಗಣತಿದಾರರಿಗೆ ಕಷ್ಟವಾಗುತ್ತಿದೆ. ಹಾಗಾಗಿ ಒಳ ಮೀಸಲಾತಿ ಸಮೀಕ್ಷೆ ವೇಳೆ ನೀಡಿದ್ದಂತೆ ಮನೆಗಳ ಸಂಪೂರ್ಣ ವಿಳಾಸವನ್ನು ನೀಡಬೇಕು. ಒಬ್ಬ ಗಣತಿದಾರರಿಗೆ 75 ಮನೆಗಳಿಗಿಂತ ಹೆಚ್ಚು ಮನೆಗಳನ್ನು ನಿಗದಿಗೊಳಿಸಿದರೆ, ನಿಗದಿತ ಸಮಯದಲ್ಲಿ ಗಣತಿಯನ್ನು ಪೂರೈಸಲು ಸಾಧ್ಯವಿಲ್ಲ. ಅಲ್ಲದೆ, ಒಬ್ಬ ಗಣತಿದಾರರಿಗೆ ಒಂದು ಊರಿನಲ್ಲಿ ಒಂದು ಮನೆ ಇನ್ನೊಂದು ಊರಿನಲ್ಲಿ ಮತ್ತೊಂದು ಮನೆ ಹೀಗೆ ಒಬ್ಬ ಗಣತಿದಾರರಿಗೆ ನಾಲ್ಕು ಊರುಗಳಲ್ಲಿ ಗಣತಿ ಕಾರ್ಯ ನೀಡದರೆ, ಗಣತಿ ಲೆಕ್ಕ ಮಾಡುವುದು ಹೇಗೆ? ಎಂದು ಸಂಘವು ಪ್ರಶ್ನಿಸಿದೆ.

ಅದೇ ರೀತಿ ಬೂತ್‌ ಹಂತದ ಅಧಿಕಾರಿಗಳಾಗಿರುವ (ಬಿಎಲ್‌ಒ) ಶಿಕ್ಷಕರಿಗೆ ಮತಪಟ್ಟಿ ಪರಿಷ್ಕರಣೆ ಅಥವಾ ಸಮೀಕ್ಷೆ ಎರಡರಲ್ಲಿ ಒಂದು ಕೆಲಸ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಬೇಕು. 55 ವರ್ಷಕ್ಕಿಂತ ಮೇಲ್ಪಟ್ಟ ಶಿಕ್ಷಕರು, ವಿಶೇಷ ಚೇತನ ಶಿಕ್ಷಕರು ಹಾಗೂ ತೀವ್ರತರ ಕಾಯಿಲೆಯಿಂದ ಬಳಲುತ್ತಿರುವ ಶಿಕ್ಷಕರಿಗೆ ಗಣತಿ ಕಾರ್ಯದಿಂದ ವಿನಾಯಿತಿ ನೀಡಬೇಕು ಎಂದು ಸಂಘವು ಆಯೋಗಕ್ಕೆ ಮನವಿ ಮಾಡಿದೆ.

PREV

Recommended Stories

ಪಾಲಿಕೆಗಳ ಚುನಾವಣೆ ಮುಗಿವವರೆಗೆ ಬೆಂಗಳೂರಲ್ಲಿ ಮತಪಟ್ಟಿ ಪರಿಷ್ಕರಣೆ ಮುಂದೂಡಿ : ಕೇಂದ್ರ ಆಯುಕ್ತರಿಗೆ ಪತ್ರ
ಡ್ರಾಪ್‌ ನೆಪದಲ್ಲಿ ಗುತ್ತಿಗೆದಾರನ ದರೋಡೆ ಮಾಡಿದ್ದ ನಾಲ್ವರ ಬಂಧನ