ಗಂಗಾವತಿ:
ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದ್ದು, ಬಳಕೆ ಮತ್ತು ಮಾರಾಟ ಕಂಡುಬಂದಲ್ಲಿ ದಂಡದೊಂದಿಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಜಿಲ್ಲಾ ಒಂದನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್ ಹೇಳಿದರು.ನಗರಸಭೆಯಲ್ಲಿ ಜಿಲ್ಲಾಡಳಿತ ಮತ್ತು ನಗರಾಭಿವೃದ್ಧಿ ಕೋಶದಿಂದ ವ್ಯಾಪಾರಸ್ಥರಿಗೆ ಬುಧವಾರ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ನಿಷೇಧ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಣ್ಣಿನಲ್ಲಿ ಕರಗದ ಪ್ಲಾಸ್ಟಿಕ್ ಬಳಕೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಮಾರಕವಾದ ಕ್ಯಾನ್ಸರ್ ರೋಗಕ್ಕೆ ತುತ್ತಾಗುವ ಸಾಧ್ಯತೆಗಳಿವೆ. ಪ್ಲಾಸ್ಟಿಕ್ ಬಳಕೆ ನಿಷೇಧವಿದ್ದೂ, ಮಾರಾಟ ಮಾಡಿದರೆ ಕಾನೂನಿನಲ್ಲಿ ಪ್ರಕರಣ ದಾಖಲಿಸುವ ಅವಕಾಶಗಳಿವೆ. ದಂಡದೊಂದಿಗೆ ಜೈಲು ಶಿಕ್ಷೆ ವಿಧಿಬಹುದಾಗಿದ್ದು, ಪ್ಲಾಸ್ಟಿಕ್ ಮುಕ್ತ ನಗರ ನಿರ್ಮಾಣಕ್ಕೆ ವ್ಯಾಪಾರಿಗಳು ಮತ್ತು ಸಾರ್ವಜನಿಕರು ಸಹಕಾರ ನೀಡಬೇಕಿದೆ. ಹಲವು ವರ್ಷಗಳಿಂದ ಕಾಯ್ದೆಯಿದ್ದರೂ, ಕಟ್ಟುನಿಟ್ಟಿನ ಕ್ರಮಕೈಗೊಂಡಿರಲಿಲ್ಲ. ಮಾನವೀಯತೆ ದೃಷ್ಟಿಯಿಂದಲೂ ವ್ಯಾಪಾರಿಗಳು ಪ್ಲಾಸ್ಟಿಕ್ ಪ್ರೇರಿತ ವಸ್ತುಗಳ ಮಾರಾಟ ಕೈಬಿಡಬೇಕಿದೆ ಎಂದರು.ಜೆಎಂಎಫ್‍ಸಿ ಪ್ರಧಾನ ಸಿವಿಲ್ ನ್ಯಾಯಾಧೀಶ ರಮೇಶ ಗಾಣಿಗೇರ ಮಾತನಾಡಿ, ಮಾ. 31ರೊಳಗೆ ಅಂಗಡಿಗಳಲ್ಲಿನ ಪರಿಸರಕ್ಕೆ ಮಾರಕವಾದ ಎಲ್ಲ ಪ್ಲಾಸ್ಟಿಕ್ ಪ್ರೇರಿತ ವಸ್ತುಗಳನ್ನು ನಗರಸಭೆಗೆ ಒಪ್ಪಿಸಬೇಕು. ಮಾರಾಟ ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಯುವ ಪೀಳಿಗೆಯ ಆರೋಗ್ಯದ ಹಿತದೃಷ್ಟಿಯಿಂದಲಾದರೂ ಪ್ಲಾಸ್ಟಿಕ್ ಬಳಸದಂತೆ ಸೂಚಿಸಿದರು.
ಇದೇ ವೇಳೆ ಪ್ಲಾಸ್ಟಿಕ್ ಮಾರಾಟ ಮತ್ತು ಬಳಸುವರ ವಿರುದ್ಧ ಕ್ರಮಕೈಗೊಳ್ಳಲಾಗುವ ಕಾಯ್ದೆಯ ಮಾಹಿತಿ ಪತ್ರವನ್ನು ವ್ಯಾಪಾರಸ್ಥರಿಗೆ ವಿತರಿಸಲಾಯಿತು.ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ನಾಗೇಶ ಪಾಟೀಲ್, ನಗರಸಭೆ ಅಧ್ಯಕ್ಷ ಮೌಲಸಾಬ್, ಕಾನೂನು ಸಲಹೆಗಾರರಾದ ರಾಜೇಶ್ವರಿ, ಪೌರಾಯುಕ್ತ ಅರ್. ವಿರೂಪಾಕ್ಷಮೂರ್ತಿ, ವಕೀಲರ ಸಂಘದ ತಾಲೂಕಾಧ್ಯಕ್ಷ ಎಸ್.ಎನ್. ನಾಯಕ, ಕಾರ್ಯದರ್ಶಿ ಎಚ್.ಎಂ. ಮಂಜುನಾಥ, ಉಪಾಧ್ಯಕ್ಷೆ ಪುಷ್ಪಾವತಿ, ಕಂದಾಯ ಇಲಾಖೆ ಶಿರಸ್ತೇದಾರ ರವಿಕುಮಾರ ನಾಯಕ್ವಾಡಿ ಇದ್ದರು.