ಭಟ್ಕಳದಲ್ಲಿ ಶಾಲಾ ಟೆಂಪೋಗೆ ಬೆಂಕಿ: ವಿದ್ಯಾರ್ಥಿಗಳು ಪಾರು

KannadaprabhaNewsNetwork | Published : Dec 17, 2024 1:00 AM

ಸಾರಾಂಶ

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬರುವ ಪೂರ್ವದಲ್ಲೇ ಹೊಗೆ ಬೆಂಕಿಯಾಗಿ ಧಗ ಧಗ ಉರಿದು ಟೆಂಪೋದ ಮುಂಭಾಗ ಬೆಂಕಿಗೆ ಸಂಪೂರ್ಣ ಭಸ್ಮವಾಗಿದೆ.

ಭಟ್ಕಳ: ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ನ್ಯೂ ಶಮ್ಸ್ ಆಂಗ್ಲ ಮಾಧ್ಯಮ ಶಾಲೆಯ ಟೆಂಪೊಗೆ ವೆಂಕಟಾಪುರ ಹೆದ್ದಾರಿಯಲ್ಲಿ ದಿಢೀರ್ ಬೆಂಕಿ ಹೊತ್ತಿಕೊಂಡಿದ್ದು, ಚಾಲಕನ ಸಮಯಪ್ರಜ್ಞೆಯಿಂದ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ.

ಸೋಮವಾರ ಮಧ್ಯಾಹ್ನ 1.45ರ ಸುಮಾರಿಗೆ ನ್ಯೂ ಶಮ್ಸ್ ಶಾಲೆಯ ಟೆಂಪೋ 12 ಮಕ್ಕಳನ್ನು ತುಂಬಿಕೊಂಡು ಶಿರಾಲಿ ಕಡೆಗೆ ಹೋಗುವಾಗ ವೆಂಕಟಾಪುರದಲ್ಲಿ ಟೆಂಪೋ ಎಂಜಿನ್‌ನಲ್ಲಿ ದಿಢೀರ್ ಹೊಗೆ ಕಾಣಿಸಿಕೊಂಡಿದೆ. ಮುಂದಾಗಬಹುದಾದ ಅನಾಹುತದ ಬಗ್ಗೆ ಜಾಗೃತಿ ವಹಿಸಿದ ಚಾಲಕ ತಕ್ಷಣ ಟೆಂಪೋದಲ್ಲಿದ್ದ ಎಲ್ಲ ವಿದ್ಯಾರ್ಥಿಗಳನ್ನು ಕೆಳಗೆ ಇಳಿಸಿ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬರುವ ಪೂರ್ವದಲ್ಲೇ ಹೊಗೆ ಬೆಂಕಿಯಾಗಿ ಧಗ ಧಗ ಉರಿದು ಟೆಂಪೋದ ಮುಂಭಾಗ ಬೆಂಕಿಗೆ ಸಂಪೂರ್ಣ ಭಸ್ಮವಾಗಿದೆ. ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಬಂದಿದ್ದರಿಂದ ದೊಡ್ಡ ಹಾನಿ ತಪ್ಪಿದ್ದು, ಅವರು ಟೆಂಪೋಗೆ ಹೊತ್ತಿದ್ದ ಬೆಂಕಿ ನಂದಿಸಿ, ಮತ್ತಷ್ಟು ಹರಡದಂತೆ ತಡೆದಿದ್ದಾರೆ. ಚಾಲಕನ ಸಮಯಪ್ರಜ್ಞೆಯಿಂದ ನಡೆಯಬೇಕಿದ್ದ ದುರಂತವೊಂದು ತಪ್ಪಿದಂತಾಗಿದ್ದು, ಅವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಸುದ್ದಿ ತಿಳಿದ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಅರಣ್ಯ ಸಿಬ್ಬಂದಿ ಮೇಲೆ ಹಲ್ಲೆ: ಇಬ್ಬರಿಗೆ ಶಿಕ್ಷೆ

ಶಿರಸಿ: ಅರಣ್ಯ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಇಬ್ಬರು ಅಪರಾಧಿಗಳಿಗೆ ಕೆಳ ನ್ಯಾಯಾಲಯವು ವಿಧಿಸಿದ ಶಿಕ್ಷೆಯನ್ನು ಭಾಗಶಃ ಪುರಸ್ಕರಿಸಿ, ನಗರದ ೧ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯು ಆದೇಶ ನೀಡಿದೆ.ಗೋವಿಂದ ಮಾಣು ರಾಠೋಡ ಹಾಗೂ ಶಾರದಾ ಗೋವಿಂದ ಎಂಬವರೇ ಶಿಕ್ಷೆಗೊಳಗಾದ ಅಪರಾಧಿಗಳು. ಮುಂಡಗೋಡ ತಾಲೂಕಿನ ಚೌಡಳ್ಳಿಯಲ್ಲಿಯ ಅರಣ್ಯ ವಸತಿಗೃಹದಲ್ಲಿ 2016ರ ಡಿ. 31ರಂದು ಅರುಣಕುಮಾರ ಸೀತಾರಾಮ ಕಾಶಿ ಎಂಬವರು ಮನೆಯಲ್ಲಿ ಸಮವಸ್ತ್ರದಲ್ಲಿ ಸರ್ಕಾರಿ ಕಡತ ನಿರ್ವಹಿಸುತ್ತಿದ್ದಾಗ ಆರೋಪಿಗಳಿಬ್ಬರು ಮನೆಗೆ ಅಕ್ರಮವಾಗಿ ಪ್ರವೇಶಿಸಿ, ಅವಾಚ್ಯ ಶಬ್ದದಿಂದ ನಿಂದಿಸಿ, ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿರುವ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ದೋಷಾರೋಪಣ ಪಟ್ಟಿಯನ್ನು ಮುಂಡಗೋಡದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪವು ಸಾಬೀತಾಗಿದ್ದರಿಂದ ಅಪರಾಧಿಗಳಿಗೆ ೧ ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು ₹೪,೫೦೦ ದಂಡ ಹಾಗೂ ಗಾಯಾಳುವಿಗೆ ಮತ್ತು ಹೆಂಡತಿಗೆ ತಲಾ ₹೧೦ ಸಾವಿರ ಪರಿಹಾರ ನೀಡಬೇಕೆಂದು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಈ ತೀರ್ಪಿನ ಆದೇಶದ ವಿರುದ್ಧ ಆರೋಪಿತರು ನಗರದ ೧ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದು, ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಜಿಲ್ಲಾ ನ್ಯಾಯಾಲಯವು ಆರೋಪಿತರ ಆರೋಪವು ಸಿದ್ಧಪಟ್ಟಿದ್ದರಿಂದ ಕೆಳ ನ್ಯಾಯಾಲಯದ ತೀರ್ಪನ್ನೇ ಎತ್ತಿ ಹಿಡಿದಿದೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ್ ಎಂ. ಮಳಗಿಕರ್ ವಾದ ಮಂಡಿಸಿದ್ದರು.

Share this article