ರೈತರು ಸಂಗ್ರಹಿಸಿಟ್ಟಿದ್ದ ಗೋವಿನಜೋಳದ ಬಣವೆಗಳಿಗೆ ಆಕಸ್ಮಿಕ ಬೆಂಕಿ ಬಿದ್ದು ಸುಮಾರು ಒಂದು ಕೋಟಿಗೂ ಹೆಚ್ಚಿನ ಹಾನಿಯಾದ ಘಟನೆ ತಾಲೂಕಿನ ಹುರಳಿಕುಪ್ಪಿಯಿಂದ ಕುರುಬರಮಲ್ಲೂರ ರಸ್ತೆಯ ಕೃಷಿ ಜಮೀನಿನಲ್ಲಿ ಶನಿವಾರ ನಡೆದಿದೆ.
ಸವಣೂರು: ರೈತರು ಸಂಗ್ರಹಿಸಿಟ್ಟಿದ್ದ ಗೋವಿನಜೋಳದ ಬಣವೆಗಳಿಗೆ ಆಕಸ್ಮಿಕ ಬೆಂಕಿ ಬಿದ್ದು ಸುಮಾರು ಒಂದು ಕೋಟಿಗೂ ಹೆಚ್ಚಿನ ಹಾನಿಯಾದ ಘಟನೆ ತಾಲೂಕಿನ ಹುರಳಿಕುಪ್ಪಿಯಿಂದ ಕುರುಬರಮಲ್ಲೂರ ರಸ್ತೆಯ ಕೃಷಿ ಜಮೀನಿನಲ್ಲಿ ಶನಿವಾರ ನಡೆದಿದೆ.
ಸುಮಾರು 120 ಎಕರೆಗೂ ಹೆಚ್ಚಿನ ಕೃಷಿಭೂಮಿಯಲ್ಲಿ 66ಕ್ಕೂ ಹೆಚ್ಚಿನ ರೈತರು ಬೆಳೆದ ಗೋವಿನಜೋಳ ತೆನೆಗಳನ್ನು ಹೊಲದಲ್ಲಿ ಕಣ ಮಾಡಿ ಹತ್ತಿರ ಹತ್ತಿರದಲ್ಲಿ ಶೇಖರಿಸಿದ್ದರು. ಅದರಲ್ಲಿ, 16 ರೈತರ ಬಣವೆಗಳಲ್ಲಿದ್ದ ಸುಮಾರು 277 ಟನ್ ತೂಕದ ಗೋವಿನಜೋಳ ಸಂಪೂರ್ಣ ಸುಟ್ಟು ಕರಕಲಾಗಿವೆ. ಘಟನೆಯಲ್ಲಿ ಬೆಂಕಿಗೆ ಆಹುತಿಯಾದ ಗೋವಿನಜೋಳವನ್ನು ಸುಮಾರು 80 ಲಕ್ಷದಿಂದ ಒಂದು ಕೋಟಿ ಅಂದಾಜು ವೆಚ್ಚ ಮಾಡಲಾಗಿದೆ. ಬೆಂಕಿ ಅನಾಹುತ ಸುದ್ದಿ ತಿಳಿದು ಹಾವೇರಿ, ಶಿಗ್ಗಾಂವಿ ಹಾಗೂ ಸವಣೂರಿನ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಹರ ಸಾಹಸಪಟ್ಟರು. ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸುವಲ್ಲಿ ಸಫಲರಾಗಿ, ಮುಂದಾಗುವ ಭಾರೀ ಅನಾಹುತವನ್ನು ತಪ್ಪಿಸಿದರು.ಜಿಲ್ಲಾಧಿಕಾರಿ ವಿಜಯಮಾಂತೇಶ ದಾನಮ್ಮನವರ, ಉಪ ವಿಭಾಗಾಧಿಕಾರಿ ಶುಭಂ ಶುಕ್ಲಾ, ತಹಸೀಲ್ದಾರ್ ರವಿಕುಮಾರ ಕೊರವರ, ಪಿಎಸ್‌ಐ ರಂಗನಾಥ ಅಂತರಗಟ್ಟಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸವಿತಾ ಚಕ್ರಸಾಲಿ, ಕಂದಾಯ ನಿರೀಕ್ಷಕ ರವಿ ಹೂಗಾರ ಸೇರಿದಂತೆ ವಿವಿಧ ಅಧಿಕಾರಿಗಳ ಸ್ಥಳಕ್ಕೆ ಭೆಟ್ಟಿ ನೀಡಿ ಪರಿಶೀಲಿಸಿ ರೈತರಿಗೆ ಆತ್ಮಸ್ಥೈರ್ಯ ಹೇಳಿದರು. ಪ್ರಮುಖರಾದ ಸುಭಾಸ ಮಜ್ಜಗಿ, ಎಂ.ಜೆ. ಮುಲ್ಲಾ, ಪ್ರಕಾಶ ಬಾರ್ಕಿ ಹಾಗೂ ಇತರರು ಇದ್ದರು. ಅಧಿಕಾರಿ- ರೈತರ ವಾಗ್ವಾದ:ಬೆಂಕಿ ಅನಾಹುತ ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳ ತಂಡದೊಂದಿಗೆ ರೈತರು ಸರ್ಕಾರ ಗೋವಿನಜೋಳ ಖರೀದಿಯಲ್ಲಿ ಮಾಡುತ್ತಿರುವ ಗೊಂದಲದಿಂದಾಗಿ ನಾವು ತೆನೆಗಳನ್ನು ಹಾಗೆಯೇ ಇಟ್ಟಿದ್ದೆವು. ಈಗ ಅವೆಲ್ಲ ಬೆಂಕಿಗೆ ಆಹುತಿಯಾಗಿವೆ ಎಂದು ವಾಗ್ವಾದ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಕೂಡಲೇ ಈ ಘಟನೆಯಿಂದ ಎಚ್ಚೆತ್ತು ಖರೀದಿಯನ್ನು ತೀವ್ರಗೊಳಿಸಿ ಉತ್ತಮ ಬೆಂಬಲ ಬೆಲೆಯನ್ನು ನೀಡಬೇಕು ಎಂದು ಒತ್ತಾಯಿಸಿದರು.
ಬೆಂಕಿ ಅನಾಹುತದಲ್ಲಿ ರೈತರು ಬೆಳೆದ ಗೋವಿನಜೋಳ ತೆನೆರಾಶಿ ಅಪಾರ ಹಾನಿ ಉಂಟಾಗಿದೆ. ಹಾನಿಗೊಳಗಾದ ರೈತರಿಗೆ ತ್ವರಿತ ಗತಿಯಲ್ಲಿ ಪರಿಹಾರ ನೀಡುವುದಾಗಿ ಸ್ಥಳದಲ್ಲಿಯೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.