ಕುಕನೂರು: ನಾನು ನನ್ನೂರು ತಳಕಲ್ಲ ಗ್ರಾಮದ ಕೆರೆಗೆ ನೀರು ತಂದಿದ್ದೇನೆ. ಅದೇ ರೀತಿ ನೀರಾವರಿ ಬಗ್ಗೆ ಮಾತನಾಡುವ ಮಾಜಿ ಸಚಿವ ಹಾಲಪ್ಪ ಆಚಾರ್ ತಮ್ಮೂರು ಮಸಬಹಂಚಿನಾಳಕ್ಕೆ ತರಬಹುದಿತ್ತಲ್ಲ?
ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ಕೊಪ್ಪಳ ಏತ ನೀರಾವರಿ ಯೋಜನೆಯಡಿಯಲ್ಲಿ ಬರುವ ಕೆರೆ ತುಂಬಿಸುವ ಯೋಜನೆಯಲ್ಲಿ ತುಂಬಿದ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ನೀರಾವರಿ ಎಂದು ಭಾಷಣದಲ್ಲಿ ಮಾತನಾಡಿದರೆ ಸಾಲದು. ಈಗ ಮಾತನಾಡುವವರು ತಮ್ಮೂರಿಗೆ ಯಾಕೆ ನೀರು ತರಲಿಲ್ಲ? ಎಂದು ಪ್ರಶ್ನಸಿದರು.
ಕಳೆದ ಅವಧಿಯಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಘೋಷಣೆಯಾಗಿವೆ. ಕ್ಷೇತ್ರಕ್ಕೆ 26 ಕೆರೆ ತುಂಬಿಸುವ ಯೋಜನೆ ತಂದೆವು. ಕೋರ್ಟಿನಲ್ಲಿ ಕೃಷ್ಣಾ ಬೀ ಸ್ಕೀಂ ಬಗ್ಗೆ ವ್ಯಾಜ್ಯ ಇರುವುದರಿಂದ ನೀರಾವರಿ ಮಾಡಲು ಬರುವುದಿಲ್ಲ. ಹಾಗಾಗಿ ಯೋಜನೆ ಹಾಳಾಗುತ್ತದೆ ಎಂದು ಕೆರೆ ತುಂಬಿಸಲು ಪರ್ಯಾಯವಾಗಿ ಚಾಲನೆ ನೀಡಿದೆವು. ಅದರ ಫಲವಾಗಿ ಕೆರೆಗಳಿಗೆ ನೀರು ಬಂದಿದೆಯೇ ಹೊರತು ಇದರಲ್ಲಿ ಯಾರೊಬ್ಬರ ಶ್ರಮ ಇಲ್ಲ.ಸಿಎಂಗಳ ಸಭೆ ಇಲ್ಲ:ಕೃಷ್ಣಾ ಬೀ ಸ್ಕೀಂ ಬಗ್ಗೆ ವ್ಯಾಜ್ಯವಿದ್ದರೂ ಸಹ 13 ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಒಂದು ಬಾರಿಯೂ ನಾಲ್ಕೂ ರಾಜ್ಯದ ಮುಖ್ಯಮಂತ್ರಿಗಳ ಸಭೆ ಮಾಡಿಲ್ಲ. ಪ್ರಧಾನಿ ಸಭೆ ಕರೆದು ರಾಜ್ಯಗಳ ಮಧ್ಯೆ ಇರುವ ಜಗಳ ಬಗೆಹರಿಸಲಿ. ಡ್ಯಾಂ ಎತ್ತರ ಹೆಚ್ಚಿಸಬೇಕು. ಆಗಲೇ ಸಮಸ್ಯೆ ಬಗೆಹರಿದಿದ್ದರೆ ಬರೀ 17 ಸಾವಿರ ಕೋಟಿಯಲ್ಲಿ ಹಿನ್ನೀರಿನ ಭೂ ಸ್ವಾಧೀನ, ಭೂ ಪರಿಹಾರ, ಡ್ಯಾಂ ಎತ್ತರ ಹೆಚ್ಚಳ ಖರ್ಚಾಗುತ್ತಿತ್ತು. ಸದ್ಯ ಅದು ಲಕ್ಷ ಕೋಟಿ ದಾಟಿದೆ ಎಂದರು.
ಯಾರೂ ಭೂ ಕೊಡಲಿಲ್ಲ: ನೂತನ ಕೆರೆ ನಿರ್ಮಿಸಿ ಕೆರೆಗೆ ನೀರು ತರುತ್ತೇನೆ ಭೂಮಿ ನೀಡಿ ಎಂದು ಇಬ್ಬರೂ ಐಎಎಸ್ ಅಧಿಕಾರಿಗಳನ್ನು ಕರೆದುಕೊಂಡು ಗ್ರಾಮ ಗ್ರಾಮಗಳಿಗೆ ತಿರುಗಿದರೂ ಯಾರೂ ಸಹ ಭೂಮಿ ನೀಡಲಿಲ್ಲ. ಭೂಮಿ ನೀಡಿದ್ದರೆ 40 ಕೆರೆಗಳ ನಿರ್ಮಾಣ ಆಗುತ್ತಿದ್ದವು. ರೈತರು ಭೂಮಿ ನೀಡದ ಕಾರಣ ಇದ್ದ ಕೆರೆಗಳಿಗೆ ನೀರು ತುಂಬಿಸಲು ಕ್ಷೇತ್ರದಲ್ಲಿ ₹274 ಕೋಟಿ ವೆಚ್ಚದಲ್ಲಿ 19 ಕೆರೆಗಳಿಗೆ ನೀರು ತರಲು ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದಿದ್ದೇನೆ ಎಂದರು.ಕುದರಿಮೋತಿಯ ಶ್ರೀವಿಜಯ ಮಹಾಂತೇಶ್ವರ ಸ್ವಾಮೀಜಿ ಮಾತನಾಡಿ, ಶಾಸಕ ರಾಯರಡ್ಡಿ ಅವರು ಅಭಿವೃದ್ಧಿ ಕಾರ್ಯಕ್ಕೆ ಮುಂದಾದ ಪ್ರಾಮಾಣಿಕ ರಾಜಕಾರಣಿ. ಅವರ ಅಭಿವೃದ್ಧಿ ಕಾರ್ಯಕ್ಕೆ ಜನರು ಸ್ಪಂದಿಸಬೇಕು. ಸರ್ಕಾರದ ಜತೆಗೆ ಜನರು ಕೈ ಜೋಡಿಸಿದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.
ಕೆಬಿಜೆಎನ್ಎಲ್ ಅಧಿಕಾರಿ ಚನ್ನಪ್ಪ, ಗ್ರಾಪಂ ಅಧ್ಯಕ್ಷೆ ಫರೀಧಾ ಬೇಗಂ, ಅಶೋಕ ತೋಟದ, ಹನುಮಂತಗೌಡ ಚಂಡೂರು, ಮಂಜುನಾಥ ಕಡೆಮನಿ, ಶಿವನಗೌಡ ದಾನರಡ್ಡಿ, ಕೆರಿಸಬಪ್ಪ ನಿಡಗುಂದಿ, ಯಂಕಣ್ಣ ಯರಾಶಿ, ಬಸವರಾಜ ಹನುಮನಹಟ್ಟಿ, ಅಮರೇಶ ತಲ್ಲೂರು, ಮಂಜುನಾಥ ಗಟ್ಟೆಪ್ಪನವರ್, ದುರುಗೇಶ, ಹನುಮೇಶ ಕಡೆಮನಿ, ಹಂಪಯ್ಯಸ್ವಾಮಿ, ಸುರೇಶ ಚೌಡ್ಕಿ, ಭೀಮಣ್ಣ ನಡುಲಮನಿ, ಸುಭಾಷ ಈಳಗೇರ ಇತರರಿದ್ದರು.ಆ ಸಿಎಂ, ಈ ಸಿಎಂ: ಆ ಸಿಎಂ, ಈ ಸಿಎಂ ಎಂದು, ಸಿಎಂ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಬೇಡಿ. ಡಿಕೆಶಿ ಅವರೆ ಹೇಳಿದ್ದಾರೆ, ಸಿದ್ದರಾಮಯ್ಯ ಅವರೇ ಪೂರ್ಣ ಅವಧಿಯ ಸಿಎಂ ಎಂದು. ಇನ್ನೂ 2.5 ವರ್ಷ ಸಿದ್ದರಾಮಯ್ಯ ರಾಜ್ಯದಲ್ಲಿ ಸಿಎಂ ಆಗಿರ್ತಾರೆ ಎಂದು ರಾಯರಡ್ಡಿ ಹೇಳಿದರು.
ಜನರು ರಾಜ್ಯದಲ್ಲಿ ಅಭಿವೃದ್ಧಿ ಕಾಣುತ್ತಿದ್ದಾರೆ. ಜನರ ತಲಾ ಆದಾಯ ಹೆಚ್ಚಳ ಆಗಿದೆ. ತಿಂಗಳಿಗೆ ಜನರಿಗೆ 6 ರಿಂದ 7 ಸಾವಿರ ಹಣ ಗ್ಯಾರಂಟಿ ಯೋಜನೆಯಿಂದ ಸಿಗುತ್ತಿದೆ. ಇದರಿಂದ ಜನರು ಹೆಚ್ಚು ಖರೀದಿಗೆ ಮುಂದಾಗಿದ್ದಾರೆ. ಜನರ ಪರ್ಚೇಸ್ ಕ್ಯಾಪಾಸಿಟಿ ಹೆಚ್ಚಳ ಆಗಿದೆ. ನಮ್ಮ ರಾಜ್ಯದ ಗ್ಯಾರಂಟಿ ಯೋಜನೆ ನೋಡಿ ಪ್ರಧಾನಿ ಮೋದಿ ಅವರು ಸಹ ಚುನಾವಣೆ ಇರುವ ರಾಜ್ಯಗಳಲ್ಲಿ ಕಾಪಿ ಮಾಡುತ್ತಿದ್ದಾರೆ ಎಂದರು.