ಹೊಸಪೇಟೆ: ಸ್ಥಳೀಯ ಬಿಜೆಪಿ ಕಚೇರಿಯಲ್ಲಿ ಶನಿವಾರ ಬಿಜೆಪಿ ಯುವ ಮೋರ್ಚಾದಿಂದ ಆತ್ಮನಿರ್ಭರ ಭಾರತ ಯುವ ಸಮಾವೇಶ ನಡೆಯಿತು.ಬಿಜೆಪಿ ವಿಜಯನಗರ ಜಿಲ್ಲಾಧ್ಯಕ್ಷ ಸಂಜೀವರೆಡ್ಡಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಪಕ್ಷದ ಮುಖಂಡರು ಯುವಕರನ್ನು ಹೆಚ್ಚು ಹೆಚ್ಚಾಗಿ ಪಕ್ಷಕ್ಕೆ ಸೆಳೆಯಬೇಕು. ಆ ಮೂಲಕ ಪಕ್ಷವನ್ನು ಮತ್ತಷ್ಟು ಬಲಪಡಿಸಬೇಕು. ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ. ಮಲ್ಲಿಕಾರ್ಜುನ ಬಾಳೆಕಾಯಿ ಮಾತನಾಡಿ, ಇಂದು ಭಾರತ ಎಲ್ಲ ಕ್ಷೇತ್ರಗಳಲ್ಲಿ ಬಲಿಷ್ಠವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸ್ವಾವಲಂಬಿ ಭಾರತವನ್ನು ನಿರ್ಮಿಸಲಾಗಿದೆ. ರಕ್ಷಣಾ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಇದರಿಂದ ರಕ್ಷಣಾ ಕ್ಷೇತ್ರಗಳಲ್ಲಿನ ಸಾಮಗ್ರಿಗಳ ಆಮದು ಶೇ. 90ರಷ್ಟು ಕಡಿಮೆ ಆಗಿದೆ ಎಂದರು.
ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಿಚಿಡಿ ಕೊಟ್ರೇಶ್ ಮಾತನಾಡಿ, ಜಿಲ್ಲೆಯಲ್ಲಿ ಯುವ ಮೋರ್ಚಾ ಪ್ರಬಲವಾಗಿದೆ. ತಾಲೂಕು ಘಟಕದ ಪದಾಧಿಕಾರಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಇನ್ನು ಹೆಚ್ಚಿನ ಯುವಕರನ್ನು ಪಕ್ಷಕ್ಕೆ ಸೆಳೆಯುವ ಮೂಲಕ ಪಕ್ಷವನ್ನು ಬಲಪಡಿಸಿ ಎಂದರು.ಸಮಾವೇಶದಲ್ಲಿ ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಯ್ಯಾಳಿ ತಿಮ್ಮಪ್ಪ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್. ರಾಘವೇಂದ್ರ, ಮುಖಂಡರಾದ ಶಂಕರ್ ಮೇಟಿ, ಸಂದೀಪ್ ಸಿಂಗ್, ಸಚಿನ್ ಕುಮಾರ್, ಪ್ರಕಾಶ್, ವಿನೋದ್, ಸಂಗಮೇಶ್, ಸೂರಿ ಬಂಗಾರು, ಶಂಕರ ನವಲಿ, ರಾಘವೇಂದ್ರ, ಸಂತೋಷ್, ಮಂಜುನಾಥ, ಮಣಿಕಂಠ, ಶ್ರೀಧರ, ಸಚಿನ್, ವಿಕ್ರಮ್, ವಿನೋದ್ ಸೇರಿದಂತೆ ಯುವ ಮೋರ್ಚಾ ವಿವಿಧ ತಾಲೂಕುಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.