ಕನ್ನಡಪ್ರಭ ವಾರ್ತೆ ಶಿರಸಿ
ನಗರದ ಮಾರಿಕಾಂಬಾ ವ್ಯಾಯಾಮ ಶಾಲೆಯ ಆವಾರದಲ್ಲಿ ಸ್ಕಿಲ್ ಯುವಮ್ ಅಕಾಡೆಮಿಯಿಂದ ಅಗ್ನಿಶಾಮಕದಳ, ಪೊಲೀಸ್, ಕಂದಾಯ ಇಲಾಖೆ, ಪಂಡಿತ ಸಾರ್ವಜನಿಕ ಆಸ್ಪತ್ರೆಯ ಸಹಯೋಗದಲ್ಲಿ ಅಗ್ನಿಅವಘಡ ಸುರಕ್ಷತಾ ಮುನ್ನೆಚ್ಚರಿಕಾ ಅಣಕು ಕಾರ್ಯಾಚರಣೆ ನಡೆಸಿ, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.ಅಣಕು ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಶಿರಸಿ ಡಿಎಸ್ಪಿ ಗೀತಾ ಪಾಟೀಲ ಮಾತನಾಡಿ, ಅಗ್ನಿ ಅವಘಡ ಉಂಟಾದ ವೇಳೆ ಸುರಕ್ಷತಾ ಕ್ರಮಗಳ ಕುರಿತು ಎಲ್ಲರಿಗೂ ತಿಳಿದಿರಬೇಕು. ಅವಘಡ ಉಂಟಾದ ವೇಳೆ ಪ್ರಾಥಮಿಕ ಕ್ರಮಗಳ ಕುರಿತು ಪ್ರತಿಯೊಬ್ಬರೂ ಮಾಹಿತಿ ತಿಳಿದಿಟ್ಟುಕೊಳ್ಳಬೇಕು. ಅವಘಡ ಉಂಟಾದ ವೇಳೆ 112 ನಂಬರ್ ಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದರು.
ಅಗ್ನಿಶಾಮಕದಳದ ವಿನಾಯಕ ಗೌಡ ಮಾತನಾಡಿ, ಅಗ್ನಿ ಅವಘಡ ಉಂಟಾದ ವೇಳೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮ ಹಾಗೂ ಅಗ್ನಿಶಾಮಕದಳದ ಸಂಖ್ಯೆಗೆ ಅಥವಾ 112 ನಂಬರ್‌ಗೆ ಕರೆ ಮಾಡಿ ಮಾಹಿತಿ ನೀಡುವ ಕುರಿತು ವಿವರಿಸಿದರು. ಅಲ್ಲದೇ ಅಗ್ನಿಶಾಮಕದಳದ ವಾಹನ ಆಗಮಿಸಲು ಅವಘಡ ಉಂಟಾದ ಸ್ಥಳವನ್ನು ಸ್ಪಷ್ಟವಾಗಿ ತಿಳಿಸಬೇಕು ಎಂದರು.ಶಿರಸಿ ನಗರ ಠಾಣೆಯ ತನಿಖಾ ಪಿಎಸ್‌ಐ ನಾರಾಯಣ ರಾಠೋಡ, ರಾಜ್ಯ ಸಮಿತಿ ಸದಸ್ಯ ಅಂಜಯ ಗಾಂವಕರ, ಟ್ರಾಫಿಕ್ ಪೊಲೀಸ್ ಠಾಣೆಯ ಎಎಸ್ಐ ಸಂತೋಷ ಸಿರ್ಸಿಕರ, ಸ್ಕಿಲ್ ಯುವಮ್ ಮ್ಯಾನೇಜಿಂಗ್ ಡೈರೆಕ್ಟರ್ ರೋಷನ ಗೌಡ, ಪಂಡಿತ ಸಾರ್ವಜನಿಕ ಆಸ್ಪತ್ರೆಯ ಸಹಾಯಕ ಆರೋಗ್ಯಾಧಿಕಾರಿ ಎಚ್.ಎಫ್. ಇಂಗಳೆ ಮತ್ತಿತರರು ಇದ್ದರು.
ಮನೆಗೆ ಆಕಸ್ಮಿಕ ಅಗ್ನಿ ಅವಘಡ ಉಂಟಾದ ವೇಳೆ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸುವುದು. ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವುದು. ಕೈಗೊಂಡ ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಅಣಕು ಕಾರ್ಯಾಚರಣೆ ಮೂಲಕ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತಿಳಿಸಲಾಯಿತು.