)
- ರೆಫ್ರಿಜರೇಟರಲ್ಲಾದ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಸಂಭವಿಸಿದ ಅನಾಹುತ - - -
ರೆಫ್ರಿಜಿರೇಟರ್‌ನಲ್ಲಿ ಆದ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಇಡೀ ಐಷಾರಾಮಿ ಮನೆಯೇ ಹೊತ್ತಿ ಉರಿದಿದ್ದು, ಸುಮಾರು ₹70 ಲಕ್ಷಕ್ಕೂ ಅಧಿಕ ಮೌಲ್ಯದ ಪೀಠೋಪಕರಣ, ವಿದ್ಯುತ್ ಉಪಕರಣಗಳು, ದುಬಾರಿ ವಸ್ತುಗಳು, ಬಟ್ಟೆಗಳು ಸುಟ್ಟು ಕರಕಲಾಗಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದ 7 ಜನ ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ನಗರದ ಶ್ರೀ ಬಸವೇಶ್ವರ ಬಡಾವಣೆಯಲ್ಲಿ ಗುರುವಾರ ಬೆಳಗಿನ ಜಾವ ಸಂಭವಿಸಿದೆ.
ನಗರದ ಶ್ರೀ ಬಸವೇಶ್ವರ ಬಡಾವಣೆಯಲ್ಲಿ ವೇಣುಗೋಪಾಲ ಎಂಬವರಿಗೆ ಸೇರಿದ ನೂತನ ಹಾಗೂ ಐಷಾರಾಮಿ ಮನೆಯಲ್ಲಿ ಬುಧವಾರ ತಡರಾತ್ರಿ ಹಾಗೂ ಗುರುವಾರ ಬೆಳಗಿನ ಜಾವದ ಮಧ್ಯೆ ರೆಫ್ರಿಜಿರೇಟರ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿಯೋ, ವಿದ್ಯುತ್ ಅವಘಡದಿಂದಾಗಿಯೇ ಸಣ್ಣದಾಗಿ ಬೆಂಕಿ ಕಾಣಿಸಿಕೊಂಡು, ವೈರ್‌ಗಳ ಮೂಲಕ, ಸಮೀಪದಲ್ಲಿದ್ದ ವಸ್ತು, ಬಟ್ಟೆಗಳಿಗೆ ಹರಡಿಕೊಳ್ಳುತ್ತಾ ಸಾಗಿದೆ.ನಸುಕಿನ ಸಿಹಿನಿದ್ರೆಯಲ್ಲಿ ಇದ್ದವರಿಗೆ ಏನೋ ಸುಟ್ಟ ವಾಸನೆ, ಹೊಗೆ ಬಂದಂತಾಗಿದ್ದರಿಂದ ತಕ್ಷಣ ಎದ್ದವರು ಉಳಿದವರನ್ನೂ ಎಬ್ಬಿಸಿ, ಮನೆಯಿಂದ ಹೊರಗೆ ಸುರಕ್ಷಿತ ಸ್ಥಳಕ್ಕೆ ಹೋಗಿದ್ದಾರೆ. ತಕ್ಷಣವೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬಂದು, ಬೆಂಕಿ ನಂದಿಸುವಷ್ಟರಲ್ಲಿ ವೇಣುಗೋಪಾಲರಿಗೆ ಸೇರಿದ ಐಷಾರಾಮಿ ಮನೆಯ ಬೆಲೆ ಬಾಳುವ ವಸ್ತುಗಳು, ಟಿವಿ, ರೆಫ್ರಿಜಿರೇಟರ್, ವಾಷಿಂಗ್ ಮಷಿನ್, ಟೇಬಲ್, ಕುರ್ಚಿಗಳು, ಕರ್ಟನ್ ಸೇರಿದಂತೆ ಬಹುತೇಕ ವಸ್ತುಗಳು ಸುಟ್ಟು ಕರಕಲಾಗಿದ್ದವು.
- - -