ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಅಂಬಲಪಾಡಿಯಲ್ಲಿ ಸೋಮವಾರ ಸಂಭವಿಸಿದ ಅಗ್ನಿದುರಂತದಲ್ಲಿ ತೀವ್ರವಾಗಿ ಅಸ್ವಸ್ಥರಾಗಿದ್ದ ಬಿಜೆಪಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಅಶ್ವಿನಿ ಆರ್. ಶೆಟ್ಟಿ (45) ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.ಮನೆಯೊಳಗೆ ಹೊಗೆಯಿಂದ ಪ್ರಜ್ಞೆ ಕಳೆದುಕೊಂಡಿದ್ದ ಪತಿ, ಹೊಟೇಲ್ ಉದ್ಯಮಿ ರಮಾನಂದ ಶೆಟ್ಟಿ (55) ಸೋಮವಾರ ಆಸ್ಪತ್ರೆಯ ದಾರಿಯಲ್ಲಿ ಮೃತಪಟ್ಟಿದ್ದರು. ಇದೀಗ ಅವರ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.
ಮೂರು ಮಹಡಿಯ ಈ ಮನೆಯಲ್ಲಿ ಸೋಮವಾರ ಮುಂಜಾನೆ 5.30ರ ಸುಮಾರಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿಕೊಂಡಿತ್ತು. ಮರವನ್ನು ಹೆಚ್ಚಾಗಿ ಬಳಸಲಾಗಿದ್ದ ಈ ಮನೆ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಮನೆಗೆ ಅಳವಡಿಸಿದ್ದ ಸೆಂಟರ್ ಲಾಕ್ ತೆರೆಯಲಾಗದೇ, ದಂಪತಿ ಹೊರಗೆ ಬರಲಾಗದೇ ಉಸಿರುಗಟ್ಟಿ ಪ್ರಜ್ಞೆ ಕಳೆದುಕೊಂಡಿದ್ದರು.ಅಗ್ನಿಶಾಮಕ ಸಿಬ್ಬಂದಿ ಬಂದು ಕಿಟಿಕಿ, ಬಾಗಿಲು ಒಡೆದು ಒಳಪ್ರವೇಶಿ ಇನ್ನೊಂದು ಕೋಣೆಯ ಬಾತ್ ರೂಮ್‌ನಲ್ಲಿ ಕುಳಿತು ಸಹಾಯಕ್ಕೆ ಕೂಗುತ್ತಿದ್ದ ಮಕ್ಕಳಿಬ್ಬರನ್ನು ರಕ್ಷಿಸಿದ್ದಾರೆ. ಆದರೆ ಮೇಲಿನ ಮಹಡಿಯ ಬೆಡ್ ರೂಮ್‌ನಲ್ಲಿ ಮಲಗಿದ್ದ ರಮಾನಂದ - ಅಶ್ವಿನಿ ಅವರನ್ನು ತಲುಪುವಷ್ಟರಲ್ಲಿ ತಡವಾಗಿತ್ತು.
ಮಣಿಪಾಲ ಕೆಎಂಸಿಯ ತೀವ್ರ ನಿಗಾ ಘಟಕಕ್ಕೆ ಸೇರಿಸಲಾಗಿದ್ದ ಅಶ್ವಿನಿ ಶೆಟ್ಟಿ ಮಂಗಳವಾರ ಮಧ್ಯಾಹ್ನ ನಿಧನರಾಗಿದ್ದಾರೆ. ರಾಜಕೀಯ ಮಾತ್ರವಲ್ಲದೇ ಸಾಮಾಜಿಕ, ಸಾಹಿತ್ಯಿಕ ಚಟುವಟಿಕೆಗಳಲ್ಲಿಯೂ ಅವರು ಸಕ್ರಿಯರಾಗಿದ್ದರು, ಮಕ್ಕಳನ್ನು ಜೊತೆಗೂಡಿಸಿಕೊಂಡು ತುಳು ಭಾಷೆ, ಆಚಾರವಿಚಾರಗಳ, ಅಡುಗೆ, ಧರ್ಮ ಇತ್ಯಾದಿಗಳ ಬಗ್ಗೆ ರೀಲ್ಸ್ ಮೂಲಕ ಪ್ರಸಿದ್ಧರಾಗಿದ್ದರು.ಬಿಜೆಪಿ ನಗರ ಮಹಿಳಾ ಮೋರ್ಚದ ಅಧ್ಯಕ್ಷೆಯಾಗಿದ್ದ ಅಶ್ವಿನಿ ಶೆಟ್ಟಿ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಮಾಜಿ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್, ಮಾಜಿ ಅಧ್ಯಕ್ಷೆ ವೀಣಾ ಎಸ್.ಶೆಟ್ಟಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.