ಎಸಿ ಬಸ್‌ಗಳಲ್ಲಿ ಅಗ್ನಿ ಸುರಕ್ಷತಾ ಆಡಿಟ್‌ಗೆ ಮುಂದಾದ ನಿಗಮ

KannadaprabhaNewsNetwork |  
Published : Oct 30, 2025, 01:45 AM IST
AC Bus

ಸಾರಾಂಶ

ಕರ್ನೂಲ್‌ನಲ್ಲಿ ಖಾಸಗಿ ಬಸ್‌ ಅಗ್ನಿದುರಂತ ನಂತರ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಹವಾನಿಯಂತ್ರಿತ ಬಸ್‌ಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳ ಕುರಿತು ಆಡಿಟ್‌ ನಡೆಸಲು ನಿಗಮಗಳು ಮುಂದಾಗಿವೆ.

 ಬೆಂಗಳೂರು :  ಕರ್ನೂಲ್‌ನಲ್ಲಿ ಖಾಸಗಿ ಬಸ್‌ ಅಗ್ನಿದುರಂತ ನಂತರ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಹವಾನಿಯಂತ್ರಿತ ಬಸ್‌ಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳ ಕುರಿತು ಆಡಿಟ್‌ ನಡೆಸಲು ನಿಗಮಗಳು ಮುಂದಾಗಿವೆ.

ಕಳೆದ ಕೆಲದಿನಗಳ ಹಿಂದೆ ಆಂಧ್ರಪ್ರದೇಶದ ಕರ್ನೂಲ್‌ ಬಳಿ ಸಂಭವಿಸಿದ ಅಗ್ನಿ ಅವಘಡದಿಂದಾಗಿ ಖಾಸಗಿ ಬಸ್‌ಗೆ ಬೆಂಕಿಗಾಹುತಿಯಾಗಿ 20 ಮಂದಿ ಸಾವಿಗೀಡಾಗಿದ್ದರು. ಅದರ ನಂತರ ರಾಜ್ಯದ ಖಾಸಗಿ ಮತ್ತು ಸರ್ಕಾರಿ ಬಸ್‌ಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳ ಕುರಿತು ಪರಿಶೀಲಿಸಬೇಕು ಹಾಗೂ ಬೆಂಕಿ ಸ್ಪರ್ಶಕ್ಕೆ ಸುಲಭವಾಗಿ ಉರಿಯುವ ವಸ್ತುಗಳು ಮತ್ತು ಇತರ ಸ್ಫೋಟಕ ವಸ್ತುಗಳನ್ನು ಸಾಗಿಸುವುದನ್ನು ನಿಷೇಧಿಸಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದ್ದರು.

ಅದರಲ್ಲೂ ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿನ ಹವಾನಿಯಂತ್ರಿತ ಬಸ್‌ಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳ ಕುರಿತು ಆಡಿಟ್‌ ನಡೆಸಿ, ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಈ ಸೂಚನೆ ನಂತರವೂ ನಿರ್ಲಕ್ಷ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ರಾಮಲಿಂಗಾರೆಡ್ಡಿ ಎಚ್ಚರಿಕೆ ನೀಡಿದ್ದಾರೆ. ಆ ಹಿನ್ನೆಲೆಯಲ್ಲಿ ನಿಗಮಗಳ ಹವಾನಿಯಂತ್ರಿತ ಬಸ್‌ಗಳಲ್ಲಿನ ಸುರಕ್ಷತಾ ಕ್ರಮಗಳ ಕುರಿತು ಆಡಿಟ್‌ ನಡೆಸುವ ಆಯಾ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ತಮ್ಮ ವ್ಯಾಪ್ತಿಯಲ್ಲಿನ ಘಟಕ ವ್ಯವಸ್ಥಾಪಕರು, ಹಿರಿಯ ಅಥವಾ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಯಾವೆಲ್ಲ ಅಂಶಗಳ ಪರಿಶೀಲನೆ?:

ರಾತ್ರಿ ವೇಳೆ ಸೇವೆ ನೀಡುವ ಪ್ರತಿಷ್ಠಿತ (ಹವಾನಿಯಂತ್ರಿತ) ಬಸ್‌ಗಳಲ್ಲಿ 5 ಲೀ.ನ 2 ಅಗ್ನಿನಂದಕ ಇದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ. ಅದರ ಜತೆಗೆ ಫೈರ್‌ ಡಿಟೆಕ್ಷನ್‌ ಮತ್ತು ಅಲಾರ್ಮ್‌ ಸಿಸ್ಟಂ ಮತ್ತು ಪ್ಯಾನಿಕ್‌ ಬಟನ್‌ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆಯೇ ಎಂಬುದನ್ನು ಖಾತ್ರಿಪಡಿಸಿಕೊಂಡು, ಚಾಲಕರಿಗೆ ಆ ಬಗ್ಗೆ ಸೂಕ್ತ ತಿಳಿವಳಿಕೆ ನೀಡಬೇಕು. ಬಸ್‌ಗಳು ಕಾರ್ಯಾಚರಣೆಗೊಳ್ಳುವುದಕ್ಕೂ ಮುನ್ನ ಅವುಗಳ ಎಲೆಕ್ಟ್ರಿಕ್‌ ವೈರ್‌ಗಳು ಸರಿಯಾಗಿವೆಯೇ? ಎಲ್ಲ ಎಸಿ ಬಸ್‌ಗಳಲ್ಲಿ ಗಾಜುಗಳನ್ನು ಒಡೆಯಲು ಸುತ್ತಿಗೆ ಅಳವಡಿಕೆ, ಬಸ್‌ಗಳಲ್ಲಿ ತುರ್ತು ನಿರ್ಗಮನ ಬಾಗಿಲು, ಪ್ರಯಾಣಿಕರ ಮತ್ತು ಚಾಲಕರ ಬಾಗಿಲುಗಳು ಸಮರ್ಪಕವಾಗಿವೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ.

ತುರ್ತು ಕ್ರಮಗಳ ಕುರಿತು ನಿರ್ದೇಶನ

ಇದರ ಜತೆಗೆ ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ಚಾಲಕರು ಮತ್ತು ನಿರ್ವಾಹಕರು ಕೈಗೊಳ್ಳಬೇಕಾದ ತುರ್ತು ಕ್ರಮಗಳ ಕುರಿತು ನಿರ್ದೇಶನ ನೀಡಲಾಗಿದೆ. ಅಗ್ನಿ ಅವಘಡ ಸಂಭವಿಸಿದ ಕೂಡಲೇ ಪ್ಯಾನಿಕ್‌ ಬಟನ್‌ ಒತ್ತು ಎಲ್ಲ ಪ್ರಯಾಣಿಕರನ್ನು ಎಚ್ಚರಗೊಳಿಸಬೇಕು. ವಾಹನದಲ್ಲಿ ಲಭ್ಯವಿರುವ ಅಗ್ನಿನಂದಕಗಳನ್ನು ಬಳಸಿ ಬೆಂಕಿ ನಂದಿಸಲು ಪ್ರಯತ್ನಿಸಬೇಕು. ವಾಹನದಲ್ಲಿನ ಹ್ಯಾಮರ್‌ ಮೂಲಕ ಕಿಟಕಿ ಗಾಜುಗಳನ್ನು ಒಡೆದು ಪ್ರಯಾಣಿಕರನ್ನು ಹೊರ ಕರೆತರುವ ಕೆಲಸ ಮಾಡಬೇಕು ಎಂದು ಸೂಚಿಸಲಾಗಿದೆ.

PREV
Read more Articles on

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು