ರಿಯಾಜಅಹ್ಮದ ಎಂ ದೊಡ್ಡಮನಿ ಡಂಬಳ
ಹಿರೇವಡ್ಡಟ್ಟಿ, ಡೋಣಿ, ಬಸಾಪೂರ, ಕಲಕೇರಿ ಭಾಗದ ಸಂರಕ್ಷಿತ ಪ್ರದೇಶ, ಸೂಕ್ಷ್ಮ ಪ್ರದೇಶಗಳಲ್ಲಿ ಬೆಂಕಿ ತಡೆಗೆ ಕಪ್ಪತ್ತಗುಡ್ಡದ 4 ಶಾಖೆಗಳಲ್ಲಿ ಫೈರ್ ಲೈನ್ ನಿರ್ಮಿಸಲಾಗುತ್ತಿದೆ. ಪ್ರಾಣಿಗಳು ವಾಸವಿರುವ ಜಾಗೆ ಗುರುತಿಸಿ ಕಪ್ಪತ್ತಗುಡ್ಡ ಫ್ಯಾನ್‌ಗಳ ನಿರ್ವಹಣೆಗಾಗಿ ನಿರ್ಮಾಣವಾಗಿರುವ ರಸ್ತೆ ಪಕ್ಕದ ಅರಣ್ಯ ವಲಯದಲ್ಲಿ ವಾಹನಗಳು ಸಂಚರಿಸುವ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿನ ರಸ್ತೆಗಳಲ್ಲಿ ಬೆಂಕಿ ತಡೆಯುವ ರೇಖೆ ನಿರ್ಮಿಸಲಾಗಿದೆ ಎಂದು ಅರಣ್ಯ ವಲಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೆಲ ಕಿಡಿಗೇಡಿಗಳು, ಬೆಂಕಿ ಹಚ್ಚುವ ಮೌಢ್ಯಯುಳ್ಳವರು ಮತ್ತು ವಿವಿಧ ಕಂಪನಿ ನಿರ್ಮಿಸಿರುವ ಫ್ಯಾನ್‌ಗಳಲ್ಲಿ (ಗಾಳಿ ವಿದ್ಯುತ್ ಯಂತ್ರ) ಕೆಲ ಭಾರಿ ಶಾರ್ಟ್ ಸರ್ಕ್ಯೂಟ್ ನಿಂದ ಉಂಟಾಗುವ ಬೆಂಕಿ ತಡೆಯಲು ನಿಗಾ ವಹಿಸಲಾಗಿದೆ. ಕಪ್ಪತ್ತಗುಡ್ಡದ ಸುತ್ತಮುತ್ತಲಿನ ಗ್ರಾಮಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮತ್ತು ಪರಿಸರವಾದಿಗಳಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಇಲಾಖೆ ಮುಂದಾಗುವುದರ ಮೂಲಕ ಬೆಂಕಿ ಹಾಕಿದ್ದಲ್ಲಿ ಪರಿಸರ ಮೇಲಾಗುವ ಪರಿಣಾಮ ಕುರಿತು ಅರಿವು ಮೂಡಿಸುವ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಪ್ಯಾನ್ ನಿರ್ವಹಿಸುವ ಕಂಪನಿ, ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಈಗಾಗಲೇ ತಿಳಿವಳಿಕೆ ಮತ್ತು ಕಪ್ಪತ್ತಗುಡ್ಡದ ಸುರಕ್ಷತಾ ವಿಷಯವಾಗಿ ಕ್ರಮ ವಹಿಸಲಾಗಿದೆ. ಪರಿಸರ ಉಳಿವಿಗಾಗಿ ಅರಣ್ಯ ಸಿಬ್ಬಂದಿ ಮತ್ತು ಗುತ್ತಿಗೆ ವಾಚರಗಳ ಮತ್ತು ಕೆಲ ಪರಿಸರ ಕಾಳಜಿಯುಳ್ಳ ಯುವಕರ ಸಹಕಾರದೊಂದಿಗೆ ಬೆಂಕಿ ತಡೆಗೆ ಇಲಾಖೆ ಕ್ರಮ ತೆಗೆದುಕೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಡ್ರೋಣ್ ಕ್ಯಾಮೇರಾ ವಿಡಿಯೋ ಕ್ಯಾಮೆರಾ ಬಳಸಿಕೊಳ್ಳಲಾಗುತ್ತಿದೆ ಎಂದು ಮುಂಡರಗಿ ವಲಯದ ಆರ್.ಎಫ್.ಒ ಮಂಜುನಾಥ ಮೇಗಲಮನಿ ಮಾಹಿತಿ ನೀಡಿದರು.
ಫೈರ್ ತಡೆಗಾಗಿ 150 ಭಾಗಗಳಲ್ಲಿ ಪೂರ್ವ ಸಿದ್ಧತೆ ಮೂಲಕ ಫೈರ್ ಲೈನ್ ಕಾರ್ಯ ನಡೆದಿದೆ. ಬೇಸಿಗೆ ಮುಗಿಯುವ ತನಕ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಫೈರ್ ವಾಚರ್ ಹಗಲು ರಾತ್ರಿ ಎನ್ನದೆ ಕೆಲಸ ಮಾಡಲು ಸನ್ನದ್ಧರಾಗಿದ್ದಾರೆ. ಹಿರಿಯ ಅಧಿಕಾರಿಗಳ ಸಲಹೆ ಸೂಚನೆಯಂತೆ ಕಪ್ಪತ್ತಗುಡ್ಡಕ್ಕೆ ಬೆಂಕಿ ತಾಗದಂತೆ ಇಲಾಖೆ ಎಲ್ಲ ಮುಂಜಾಗೃತಾ ಕ್ರಮ ತೆಗೆದುಕೊಂಡಿದೆ. ಬೆಂಕಿ ಹಚ್ಚುವ ಕಿಡಿಗೇಡಿಗಳಿಗೆ ಕಾನೂನಿ ಸಂಕೋಲೆಗೆ ಒಳಪಡಿಸಲಾಗುವುದು ಎಂದು ಮುಂಡರಗಿ ತಾಲೂಕು ಅರಣ್ಯ ವಲಯ ಅಧಿಕಾರಿ ಮಂಜುನಾಥ ಮೇಗಲಮನಿ ಹೇಳಿದರು.ಕಪ್ಪತ್ತಗುಡ್ಡದ ಉಳವಿಗಾಗಿ ಅರಣ್ಯ ಇಲಾಖೆ ಮಾತ್ರ ಶ್ರಮಿಸಿದರೂ ಸಾಲದು ಪರಿಸರದ ಉಳವಿಗಾಗಿ ಜನತೆಯ ಸಹಕಾರ. ಪರಿಸರವಾದಿಗಳ ಕಾಳಜಿಯೊಂದಿಗೆ ಆಮ್ಲಜನಕ ಸೃಷ್ಟಿಯ ಫ್ಯಾಕ್ಟರಿ ಜನರ ಹೃದಯದಂತಿರುವ ಸಸ್ಯಗಳ ತಾಣ ಕಪ್ಪತ್ತಗುಡ್ಡದ ಸಸ್ಯ ಸಂಪತ್ತಿನ ಉಳವಿಗಾಗಿ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದು ಮುಂಡರಗಿ ತಹಸೀಲ್ದಾರ ಯರಿಸ್ವಾಮಿ ಪಿ.ಎಸ್, ಹೇಳಿದರು.