ರೌಡಿಶೀಟರ್ ಮೇಲೆ ಪೊಲೀಸರಿಂದ ಫೈರಿಂಗ್

KannadaprabhaNewsNetwork |  
Published : Oct 31, 2023, 01:15 AM IST
೩೦ಬಿಹೆಚ್‌ಆರ್ ೨: ಸ್ಥಳ ಪರಿಶೀಲನೆ ಮಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ. | Kannada Prabha

ಸಾರಾಂಶ

ರೌಡಿಶೀಟರ್ ಮೇಲೆ ಪೊಲೀಸರಿಂದ ಫೈರಿಂಗ್

- ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆ । ರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ರೌಡಿ ಶೀಟರ್‌ನನ್ನು ಹಿಡಿಯಲು ಹೋದ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಆತನ ಕಾಲಿಗೆ ಗುಂಡು ಹೊಡೆದು ಹಿಡಿದ ಘಟನೆ ಚಿಕ್ಕಮಗಳೂರು ತಾಲೂಕಿನ ಮಾಗಲು ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ಮಾಗಲು ಗ್ರಾಮದ ಎಂ.ಕೆ.ಪೂರ್ಣೇಶ್ (31) ಬಿನ್ ಕೆಂಚೇಗೌಡ ಪೊಲೀಸರ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಗುಂಡೇಟು ತಿಂದ ಆರೋಪಿ. ಕಳೆದ ಸೆಪ್ಟೆಂಬರ್‌ ನಲ್ಲಿ ಅದೇ ಗ್ರಾಮದ ನಾಗಪ್ಪಗೌಡ ಅವರ ಮೇಲೆ ಆಯುಧಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಈತ ಸೋಮವಾರ ಬೆಳಿಗ್ಗೆ ಮಾಗಲು ಗ್ರಾಮದ ಮನೆಯೊಂದರಲ್ಲಿ ಬಚ್ಚಿಟ್ಟುಕೊಂಡ ಮಾಹಿತಿ ಪಡೆದ ಪೊಲೀಸರು ಆತನನ್ನು ಬಂಧಿಸಲು ಪಿಎಸ್‌ಐ ವಿ.ಟಿ.ದಿಲೀಪ್‌ಕುಮಾರ್ ನೇತೃತ್ವದಲ್ಲಿ ಆರೋಪಿಯಿದ್ದ ಮನೆಯನ್ನು ಸುತ್ತುವರೆದು ಎಚ್ಚರಿಕೆ ನೀಡಿ ಶರಣಾಗುವಂತೆ ಸೂಚಿಸಿದ್ದಾರೆ. ಪೊಲೀಸರನ್ನು ಕಂಡಾಕ್ಷಣ ಆರೋಪಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಮಂಜುನಾಥ್ ಅವರ ಎಡಗೈ ಭುಜದ ಬಳಿಗೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ವೇಳೆ ಪಿಎಸ್‌ಐ ದಿಲೀಪ್‌ಕುಮಾರ್ ಪುನಃ ಆರೋಪಿಗೆ ಶರಣಾಗುವಂತೆ ಹೇಳಿ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ ಸಹ ಆರೋಪಿ ಪುನಃ ಪಿಎಸ್‌ಐ ಮತ್ತು ಸಿಬ್ಬಂದಿ ಮೇಲೆ ದಾಳಿಗೆ ಮುಂದಾಗಿದ್ದಾನೆ. ತಕ್ಷಣ ಎಚ್ಚೆತ್ತ ಪಿಎಸ್‌ಐ ದಿಲೀಪ್‌ಕುಮಾರ್ ಆರೋಪಿ ಪೂರ್ಣೇಶ್ ಕಾಲಿಗೆ ಫೈರಿಂಗ್ ಮಾಡಿ ಬಂಧಿಸಿದ್ದಾರೆ. ಗಾಯಗೊಂಡ ಪೊಲೀಸ್ ಸಿಬ್ಬಂದಿ ಮಂಜುನಾಥ್ ಅವರಿಗೆ ಬಾಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರೋಪಿ ಎಂ.ಕೆ. ಪೂರ್ಣೇಶ್‌ ನನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಭೇಟಿ ನೀಡಿ ಪರಿಶೀಲಿಸಿದ್ದು, ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಂಜುನಾಥ್ ಅವರ ಆರೋಗ್ಯವನ್ನು ಎಸ್ಪಿ ವಿಕ್ರಮ್ ಅಮಟೆ ವಿಚಾರಿಸಿದರು. ಅಡಿಷನಲ್ ಎಸ್ಪಿ ಜಿ.ಕೃಷ್ಣಮೂರ್ತಿ, ಕೊಪ್ಪ ಡಿವೈಎಸ್ಪಿ ಅನಿಲ್‌ಕುಮಾರ್ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆರೋಪಿ ಪೂರ್ಣೇಶ್ ವಿರುದ್ಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ 2011ರಿಂದ ಇಲ್ಲಿವರೆಗೆ ಎಂಟು ಪ್ರಕರಣಗಳು ದಾಖಲಾಗಿದ್ದು, ರೌಡಿಶೀಟರ್ ಪಟ್ಟಿಯಲ್ಲಿದ್ದಾನೆ. 8 ಪ್ರಕರಣದಲ್ಲಿ 4 ಪ್ರಕರಣಗಳು ಕೊಲೆ ಯತ್ನ, ಒಂದು ಪೊಲೀಸರ ಮೇಲೆ ಹಲ್ಲೆ ಪ್ರಕರಣ. ಆರೋಪಿ ಪೂರ್ಣೇಶ್‌ 2020ರಲ್ಲೂ ಸಹ ವಿವಿಧ ಪ್ರಕರಣದಲ್ಲಿ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದಾಗ ಪೊಲೀಸರು ಮಾರು ವೇಷದಲ್ಲಿ ಬಂಧಿಸಲು ತೆರಳಿದಾಗ ಅವರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆಗಲೂ ಪೊಲೀಸರು ಸಿನಿಮೀಯ ರೀತಿಯಲ್ಲಿ ಅವನನ್ನು ಸೆರೆ ಹಿಡಿದಿದ್ದರು. ಈತ ಮಾಗಲು ಗ್ರಾಮದಲ್ಲಿ ಸ್ಥಳೀಯರಿಗೆ ಬೆದರಿಕೆ ಹಾಕುತ್ತ ಜೀವನ ಸಾಗಿಸುತ್ತಿದ್ದು, ಈತನ ಪತ್ನಿ ಮನೆ ತೊರೆದು ಬೇರೆಡೆ ವಾಸ ಮಾಡುತ್ತಿದ್ದಾಳೆ ಎನ್ನಲಾಗಿದೆ. ೩೦ಬಿಹೆಚ್‌ಆರ್ ೧: ಆರೋಪಿ ಪೂರ್ಣೇಶ್ ೩೦ಬಿಹೆಚ್‌ಆರ್ ೨: ಸ್ಥಳ ಪರಿಶೀಲನೆ ಮಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ. ೩೦ಬಿಹೆಚ್‌ಆರ್ ೩: ಪೊಲೀಸರ ಆರೋಗ್ಯ ವಿಚಾರಿಸಿದ ಎಸ್ಪಿ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ