ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಮಲೆ ಮಹದೇಶ್ವರನಿಗೆ ಮೊದಲನೇ ಕಾರ್ತಿಕ ಮಾಸದ ವಿಶೇಷ ಪೂಜೆ ಅಂಗವಾಗಿ ಹಲವು ಅಭಿಷೇಕ ನಡೆಯಿತು.ಸೋಮವಾರ ಸಂಜೆ 6.30 ರಿಂದ 8.30ರ ವರೆಗೆ ಪೂಜೆ ಹಾಗೂ ಉತ್ಸವ, ಸ್ವಾಮಿಗೆ ಪಂಚಾಮೃತ ಅಭಿಷೇಕ, ನವರತ್ನ ಕಿರೀಟಧಾರಣೆ ಏಕವಾರ ರುದ್ರಾಭಿಷೇಕ ಮಹಾಮಂಗಳಾರತಿ ಧಾರ್ಮಿಕ ವಿಧಾನಗಳೊಂದಿಗೆ ಸಂಭ್ರಮ ಸಡಗರದೊಂದಿಗೆ ಜರುಗಿತು. ಮಲೆಮಹದೇಶ್ವರ ಬೆಟ್ಟದ ಕಾರ್ತಿಕ ಮಾಸದ ಮೊದಲನೇ ಸೋಮವಾರ ರಾತ್ರಿ ದೇವಾಲಯ ಸೇರಿದಂತೆ ರಾಜಗೋಪುರದಲ್ಲಿ ವಿಶೇಷಗೊಳಿಸಲಾಗಿತ್ತು. ಹೂವಿನ ಅಲಂಕಾರ, ತೋರಣಗಳಿಂದ ಸಿಂಗರಿಸಿ ಪೂಜಾ ಕಾರ್ಯಕ್ರಮ ಪ್ರಾರಂಭಿಸಲಾಗಿತ್ತು. ಮಹದೇಶ್ವರನಿಗೆ ಇಷ್ಟಾರ್ಥ ಸಿದ್ಧಿಗಾಗಿ ಭಕ್ತರು ಕಾರ್ತಿಕ ಮಾಸ ಅಂಗವಾಗಿ ನಿಂಬೆ ಹಣ್ಣಿನ ದೀಪ, ಮಣ್ಣಿನ ಹಣತೆಯ ದೀಪ, ಬೆಲ್ಲದ ದೀಪವನ್ನು ದೇವಾಲಯ ರಾಜಗೋಪುರ ಮುಂಭಾಗ ಹಾಗೂ ಗಣಪತಿ ದೇವಾಲಯದ ಮುಂಭಾಗ ಮತ್ತು ಅಂತರಗಂಗೆ ಸಮೀಪ ಇನ್ನಿತರ ಕಡೆ ದೀಪಗಳನ್ನು ಹಚ್ಚಿದರು.
ಚಿನ್ನದ ರಥೋತ್ಸವ:ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಮಾದಪ್ಪನ ಹರಕೆ ಹೊತ್ತ ಭಕ್ತರಿಂದ ಚಿನ್ನದ ರಥೋತ್ಸವ ಹಾಗೂ ಹುಲಿವಾಹನ ಉತ್ಸವ ಮತ್ತು ಬಸವ ವಾಹನ ಉತ್ಸವ ಹಾಗೂ ರುದ್ರಾಕ್ಷಿ ಮಂಟಪೋತ್ಸವ ಸೇರಿದಂತೆ ದೀಪದ ಉತ್ಸವ ಪಂಜಿನ ಸೇವೆ ಮುಡಿ ಸೇವೆ ಹಾಗೂ ಉರುಳು ಸೇವೆಗಳನ್ನು ಹಮ್ಮಿಕೊಳ್ಳುವ ಮೂಲಕ ಜೈಕಾರಗಳನ್ನು ಕೂಗುವ ಮೂಲಕ ಉಘೇ ಮಾದಪ್ಪ ಎಂದು ಘೋಷಣೆಗಳು ಮೊಳಗಿತು.ಸಕಲ ಸಿದ್ಧತೆ:
ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಎಇ ರಘು ಅವರು, ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ವಿಶೇಷ ಕಾರ್ತಿಕ ಮಾಸದ ಪೂಜಾ ಕಾರ್ಯಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿ ಧಾರ್ಮಿಕವಾಗಿ ನಡೆಯುವ ಪೂಜಾ ಕಾರ್ಯಕ್ರಮಗಳು ನಿಗದಿತ ಸಮಯದಲ್ಲಿ ನಡೆಯಲಿ ಜೊತೆಗೆ ಬರುವಂತ ಭಕ್ತಾದಿಗಳಿಗೆ ಸಕಲ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಯ ಸಿಬ್ಬಂದಿಗೆ ಸೂಚನೆ ನೀಡಿದರು.