ಕನ್ನಡಪ್ರಭ ವಾರ್ತೆ ಶಿರಸಿ
ಜಾತ್ರಾ ಮಹೋತ್ಸವದ ಸಾಂಪ್ರದಾಯಿಕ ಆಚರಣೆಗಳನ್ವಯ ಜಾತ್ರೆಗಿಂತ ಮೂರು ವಾರ ಮೊದಲು ಆರಂಭಗೊಂಡು ಮಂಗಳವಾರ, ಶುಕ್ರವಾರಗಳಂದು ನಡೆಸುವ ಒಟ್ಟೂ 5 ಹೊರಬೀಡುಗಳು ಮಾರಿಕಾಂಬಾ ದೇವಿಯ ಜಾತ್ರೆಯ ವಿಶೇಷ ಆಚರಣೆಗಳಾಗಿವೆ. ಮಂಗಳವಾರ ರಾತ್ರಿ ನಡೆದ ಪೂರ್ವ ದಿಕ್ಕಿನ ಪ್ರಥಮ ಹೊರಬೀಡಿನಲ್ಲಿ ಶ್ರೀ ದೇವಿಯ ಉತ್ಸವ ಮೂರ್ತಿ ಹೊತ್ತ ಪಲ್ಲಕ್ಕಿಯು ಮರ್ಕಿದುರ್ಗಿ ದೇವಸ್ಥಾನಕ್ಕೆ ಹೋಗಿ, ನಂತರ ಜಾತ್ರಾ ಗದ್ದುಗೆಗೆ ತಲುಪಿ, ಅಲ್ಲಿಂದ ವಿಸರ್ಜನಾ ಪೀಠಕ್ಕೆ ಸಾಗಿ, ತದನಂತರ ಪೂರ್ವದಿಕ್ಕಿನಲ್ಲಿನ ಬನ್ನಿ ಕಟ್ಟೆಗೆ ಆಗಮಿಸಿತು.
ಶ್ರೀ ದೇವಿಯ ಪೂಜಾ ಕೈಂಕರ್ಯ ಹಾಗೂ ಉತ್ಸವಗಳ ಆಚರಣೆಯಲ್ಲಿ ಪ್ರಮುಖ ಸ್ಥಾನ ಹೊಂದಿರುವ ಬಾಬದಾರ ಕುಟುಂಬಗಳು ತಂದ ಸಾಂಪ್ರದಾಯಿಕ ಪಡಲ್ಗಿಯೊಡನೆ ಪೂಜೆ ಸಲ್ಲಿಸಲಾಯಿತು. ಈ ಪಡಲ್ಗಿಗಳು ಪರಶುರಾಮನನ್ನು ಹೊಂದಿದ್ದು, ಪಡಲ್ಗಿ ಹಾಗೂ ಪರಶುರಾಮನನ್ನು ತಾಯಿ ಮಕ್ಕಳು ಎನ್ನಲಾಗುತ್ತದೆ. ಪ್ರತ್ಯೇಕ ಸೇವೆ ಸಲ್ಲಿಸುವ ಬಾಬದಾರರ ಕುಟುಂಬಗಳು ತಮ್ಮ ಪಡಲ್ಗಿ ಜೊತೆ ಪಾದಗಟ್ಟಿ, ದೀಪ ಇತ್ಯಾದಿಗಳೊಡನೆ ಸಾಂಪ್ರದಾಯಿಕ ಆಚರಣೆಯಂತೆ ಪೂಜೆ ಸಲ್ಲಿಸಿದರು.ಬನ್ನಿ ಕಟ್ಟೆಯಲ್ಲಿ ಬಾಬುದಾರ ಕುಟುಂಬಗಳು ತಂದಿದ್ದ ಪಡಲ್ಗಿಗಳೊಡನೆ ಜೋಗಿತಿ ಬಾಬುದಾರ ಕುಟುಂಬಗಳು ಪೂಜೆ ಸಲ್ಲಿಸಿ ಆರತಿ ಬೆಳಗಿದರು. ನಂತರ ಹಲಗೆ ಬಾಬದಾರ ಕುಟುಂಬಗಳು ಹಾಗೂ ಪೂಜಾರ ಬಾಬುದಾರ ಕುಟುಂಬಗಳು ದೇವಿಗೆ ಪೂಜೆ ಸಲ್ಲಿಸಿ, ಪ್ರಥಮ ಹೊರಬೀಡಿನ ವಿಧಿವಿಧಾನ ನೆರವೇರಿಸಿದರು. ರೈತ ಬಾಬುದಾರರು ಹಾಗೂ ಇತರ ಬಾಬುದಾರ ಕುಟುಂಬದವರು ಉಪಸ್ಥಿತರಿದ್ದು ತಮ್ಮ ಸೇವೆ ಸಲ್ಲಿಸಿದರು. ಪೂಜಾ ವಿಧಿಗಳ ನಂತರ ಹಿಂತಿರುಗಿ ಹೊರಟ ಶ್ರೀದೇವಿಯ ಉತ್ಸವ ಮೂರ್ತಿಯು ಮರ್ಕಿದುರ್ಗಿ ದೇವಸ್ಥಾನಕ್ಕೆ ಹೋಗಿ, ರಾತ್ರಿ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ಮರಳಿತು.
ಲಕ್ಷಾಂತರ ಭಕ್ತರನ್ನು ಹೊಂದಿ ವಿಶೇಷ ಆಚರಣೆಗಳಿಂದ ಪೂಜಿಸಲ್ಪಡುವ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಎರಡು ವರ್ಷಗಳಿಗೊಮ್ಮೆ 9 ದಿನಗಳು ನಡೆಯುವ ಜಾತ್ರೆಯ ಸಾಂಪ್ರದಾಯಿಕ ಆಚರಣೆಗಳಲ್ಲೊಂದಾದ ಪೂರ್ವ ದಿಕ್ಕಿನ ಪ್ರಥಮ ಹೊರಬೀಡಿನ ಆಚರಣೆಯು ಬಾಬುದಾರರ ಕುಟುಂಬದವರು, ದೇವಸ್ಥಾನದ ನೌಕರರು, ಭಕ್ತರ ಉಪಸ್ಥಿತಿಯಲ್ಲಿ ನಡೆಯಿತು.