ನಗರದ ಸಂಚಾರ ಸಮಸ್ಯೆ ಪರಿಹಾರಕ್ಕಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 16,980 ಕೋಟಿ ರು.ವೆಚ್ಚದ ಮೊದಲ ಹಂತದ ಸುರಂಗ ಮಾರ್ಗ ನಿರ್ಮಾಣ ಪ್ರಕ್ರಿಯೆಗೆ ಅನುಮತಿ ದೊರೆತಿದ್ದು, ಶೀಘ್ರ ಮುಂದಿನ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಸಂಚಾರ ಸಮಸ್ಯೆ ಪರಿಹಾರಕ್ಕಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 16,980 ಕೋಟಿ ರು.ವೆಚ್ಚದ ಮೊದಲ ಹಂತದ ಸುರಂಗ ಮಾರ್ಗ ನಿರ್ಮಾಣ ಪ್ರಕ್ರಿಯೆಗೆ ಅನುಮತಿ ದೊರೆತಿದ್ದು, ಶೀಘ್ರ ಮುಂದಿನ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಸೂಚನೆಯಂತೆ ಯೋಜನೆಯ ಮೊದಲ ಹಂತದ ಸುರಂಗ ಮಾರ್ಗ ನಿರ್ಮಾಣಕ್ಕಾಗಿ ಯೋಜನಾ ವರದಿ ಸಿದ್ಧಪಡಿಸಿ ಸಲ್ಲಿಸಲಾಗಿದೆ. ಈ ಸುರಂಗ ಮಾರ್ಗವು ಸಿಲ್ಕ್‌ಬೋರ್ಡ್ ಜಂಕ್ಷನ್‌ನಿಂದ ಹೆಬ್ಬಾಳದ ವರೆಗೆ 16.75 ಕಿ.ಮೀ ಸಂಪರ್ಕ ಕಲ್ಪಿಸುತ್ತದೆ. ಇನ್ನು 2 ಅಥವಾ 3 ದಿನಗಳಲ್ಲಿ ಯೋಜನಾ ವರದಿ ಕುರಿತು ಮುಖ್ಯಮಂತ್ರಿಗಳ ಜೊತೆ ಅಂತಿಮ ಚರ್ಚೆ ನಡೆಸುವುದಾಗಿ ತಿಳಿಸಿದರು.
ಇದಲ್ಲದೆ, ಪೂರ್ವ ಹಾಗೂ ಪಶ್ಚಿಮ ದಿಕ್ಕಿನಲ್ಲಿ 23 ಕಿ.ಮೀ. ಉದ್ದದ ಸುರಂಗ ಮಾರ್ಗವನ್ನು 23,500 ಕೋಟಿ ರು.ಅಂದಾಜು ವೆಚ್ಚದಲ್ಲಿ ನಿರ್ಮಿಸಲು ಯೋಜಿಸಲಾಗಿದ್ದು, ಈಗಾಗಲೇ ಸಚಿವ ಸಂಪುಟದ ಅನುಮೋದನೆ ದೊರೆತಿದೆ. ಎರಡನೇ ಹಂತದಲ್ಲಿ ಪೂರ್ವ ಹಾಗೂ ಪಶ್ಚಿಮ 23 ಕಿ.ಮೀ. ಉದ್ದದ ಸುರಂಗಮಾರ್ಗ ಸಂಬಂಧ ಯೋಜನಾ ವರದಿ ಸಿದ್ಧತೆ ಹಂತದಲ್ಲಿದೆ. ಇದಲ್ಲದೆ, ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಕೆ.ಆರ್.ಪುರಂ ಮೆಟ್ರೋ ನಿಲ್ದಾಣದವರೆಗಿನ ಹೊರವರ್ತುಲ ರಸ್ತೆಯನ್ನು ಅಂತಾರಾಷ್ಟ್ರೀಯ ಗುಣಮಟ್ಟದ ಹಾಗೂ ದೀರ್ಘಬಾಳಿಕೆ ರಸ್ತೆಯಾಗಿ ಅಭಿವೃದ್ಧಿಪಡಿಸಲು 450 ಕೋಟಿ ರು.ಅನುದಾನ ಒದಗಿಸಲಾಗಿದೆ ಎಂದರು.
9 ಮೇಲ್ಸೇತುವೆ ನಿರ್ಮಾಣ
ನಗರದ ಸಾರಿಗೆ ವ್ಯವಸ್ಥೆ ಉತ್ತಮ ದರ್ಜೆಗೆ ಪರಿವರ್ತಿಸಲು ಒಟ್ಟು 120 ಕಿ.ಮೀ. ಉದ್ದದ 13 ಎತ್ತರಿಸಿದ ಮೇಲ್ಸೇತುವೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಪ್ರಸ್ತುತ 13,262.70 ಕೋಟಿ ರು.ಅಂದಾಜು ವೆಚ್ಚದಲ್ಲಿ ಒಟ್ಟು 75.60 ಕಿ.ಮೀ. ಉದ್ದದ 11 ಎಲಿವೇಟೆಡ್ ಕಾರಿಡಾರ್‌ಗಳಿಗೆ ಟೆಂಡರ್ ಪ್ರಗತಿಯಲ್ಲಿದ್ದು, ಈಗಾಗಲೇ 9 ಎಲಿವೇಟೆಡ್ ಕಾರಿಡಾರ್‌ಗಳ, ಒಟ್ಟು 29.10 ಕಿಮೀ ಉದ್ದದ ಕಾಮಗಾರಿಗಳಿಗೆ ಟೆಂಡರ್ ಅಂತಿಮ ಹಂತದಲ್ಲಿವೆ ಎಂದರು. ಎಲಿವೇಟೆಡ್ ಕಾರಿಡಾರ್‌ಗೆ ಭೂ ಸ್ವಾಧೀನ ಕಾರ್ಯವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವತಿಯಿಂದ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದ್ದು, 11 ಎಲಿವೇಟೆಡ್ ಕಾರಿಡಾರ್ ಗಳಿಗೆ ಸಂಬಂಧ ಭೂ-ಸ್ವಾಧೀನಕ್ಕೆ ಒಳಪಡುವ ಸ್ವತ್ತುಗಳ ಸರ್ವೆ ಕಾರ್ಯ ಕೈಗೊಳ್ಳಲಾಗಿದೆ ಎಂದರು.
ಪ್ರವಾಹ ನಿಯಂತ್ರಣ, ರಾಜಕಾಲುವೆ ಅಭಿವೃದ್ಧಿ
ಬೆಂಗಳೂರು ಪೂರ್ವ ಹಾಗೂ ಉತ್ತರ ನಗರ ಪಾಲಿಕೆಗಳ ವ್ಯಾಪ್ತಿಯ ಎಚ್‌ಬಿಆರ್ ಲೇಔಟ್, ಸಾಯಿ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಿಸುವ ಉದ್ದೇಶದಿಂದ, ಗೆದ್ದಲಹಳ್ಳಿ ರೈಲ್ವೆ ಸೇತುವೆ ಬಳಿ ಅಸ್ತಿತ್ವದಲ್ಲಿದ್ದ ಕಿರಿದಾದ ವೆಂಟ್‌ಗೆ ಹೆಚ್ಚುವರಿಯಾಗಿ 2 ಹೊಸ ವೆಂಟ್‌ಗಳನ್ನು 16 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿ, ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗಿದೆ. ನಗರದಲ್ಲಿ ಮಳೆಗಾಲದಲ್ಲಿ ಉಂಟಾಗುವ ಪ್ರವಾಹ ಹಾಗೂ ಅನಾಹುತ ತಡೆಯಲು ಮತ್ತು ಬೃಹತ್ ರಾಜಕಾಲುವೆಗಳಿಗೆ ಶಾಶ್ವತ ರಕ್ಷಣಾತ್ಮಕ ಮೂಲಸೌಕರ್ಯ ಒದಗಿಸಲು ವಿಶ್ವಬ್ಯಾಂಕ್ ನೆರವಿನೊಂದಿಗೆ 2,000 ಕೋಟಿ ರು.ವೆಚ್ಚದಲ್ಲಿ 173 ಹೊಸ ರಾಜಕಾಲುವೆಗಳ ನಿರ್ಮಾಣ ಹಾಗೂ 80 ರಾಜಕಾಲುವೆಗಳ ಉನ್ನತೀಕರಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈ ಕಾಮಗಾರಿಗಳಲ್ಲಿ ಈಗಾಗಲೇ ಶೇ.15ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಆಯುಕ್ತರು ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.