ಧರ್ಮಪುರ ಕೆರೆಗೆ ನೀರು ತುಂಬಿಸುವ 1ನೇ ಹಂತ ಪೂರ್ಣ

KannadaprabhaNewsNetwork | Published : Jan 4, 2024 1:45 AM

ಸಾರಾಂಶ

ತಾಲೂಕಿನ ಧರ್ಮಪುರ ಹೋಬಳಿಯ 9 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಪ್ರಾಯೋಗಿಕವಾಗಿ ಮೊದಲ ಹಂತದ ಯಶಸ್ಸು ಸಿಕ್ಕಿದೆ.

ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ಧರ್ಮಪುರ ಹೋಬಳಿಯ 9 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಪ್ರಾಯೋಗಿಕವಾಗಿ ಮೊದಲ ಹಂತದ ಯಶಸ್ಸು ಸಿಕ್ಕಿದ್ದು, 3 ಹಳ್ಳಿಗಳ ಕೆರೆಗಳಿಗೆ ನೀರು ಹರಿಸಲು ನಡೆಸಿದ ಪರೀಕ್ಷೆ ಯಶಸ್ವಿಯಾಗಿದೆ. ಕಳೆದ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ್ ಬೊಮ್ಮಾಯಿ ಅವರು ಧರ್ಮಪುರ ಹೋಬಳಿಗೆ ಆಗಮಿಸಿ 90 ಕೋಟಿ ರು. ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ್ದು, ಇದೀಗ ಫಲಪ್ರದವಾಗುವ ಹಂತ ತಲುಪಿದೆ.

ಕಾಮಗಾರಿ 2 ಹಂತಗಳಲ್ಲಿ ನಡೆಯುತ್ತಿದ್ದು, ಈಗಾಗಲೇ ಮೊದಲ ಹಂತದಲ್ಲಿ 40 ಕೋಟಿ ರು. ಹಣ ಬಿಡುಗಡೆಯಾಗಿ ಕಾಮಗಾರಿ ಪೂರ್ಣಗೊಂಡಿದೆ. ಮೊದಲ ಹಂತದಲ್ಲಿ ಗೂಳ್ಯ, ಅಬ್ಬಿನಹೊಳೆ ಹಾಗೂ ಈಶ್ವರಗೆರೆ ಗ್ರಾಮಗಳ ಕೆರೆಗಳ ಕಾಮಗಾರಿ ಪೂರ್ಣಗೊಂಡಿದ್ದು, ಪ್ರಾಯೋಗಿಕವಾಗಿ ನೀರು ಹರಿಸುವ ಪರೀಕ್ಷೆ ಮಾಡಲಾಗಿದೆ.

2ನೇ ಹಂತದ ಕಾಮಗಾರಿಗೆ 50 ಕೋಟಿ ರು. ಹಣ ಬಿಡುಗಡೆಯಾಗಿದ್ದು, ಮುಂಗಸವಳ್ಳಿ ಹಾಗೂ ಮಂಗಸವಳ್ಳಿ ಗೋಗಟ್ಟೆ, ಸೂಗೂರು, ಹರಿಯಬ್ಬೆ ಅಜ್ಜಿಕಟ್ಟೆ, ಶ್ರವಣಗೆರೆ ಮತ್ತು ಧರ್ಮಪುರ ಕೆರೆಗಳ ಕೆಲಸ ನಡೆಯುತ್ತಿದೆ. 2ನೇ ಹಂತದಲ್ಲಿ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದ್ದು, ಅಲ್ಲಲ್ಲಿ ಕೆಲವು ರೈತರು ಪರಿಹಾರಕ್ಕಾಗಿ ಅಡೆತಡೆ ಉಂಟು ಮಾಡಿದ್ದು, ಶೀಘ್ರದಲ್ಲೇ ಸಮಸ್ಯೆ ಬಗೆಹರಿದು ಕಾಮಗಾರಿ ಪೂರ್ಣಗೊಳ್ಳಲಿದೆ ಎನ್ನಲಾಗಿದೆ. 9 ಹಳ್ಳಿಗಳ ಕೆರೆಗಳಿಗೆ ನೀರು ತುಂಬಿಸುವ ಮಹಾತ್ವಾಕಾಂಕ್ಷಿ ಯೋಜನೆ ಕೊನೆಯ ಹಂತದಲ್ಲಿದ್ದು, ಮಾರ್ಚ್ ಹೊತ್ತಿಗೆ ಕಾಮಗಾರಿ ಪೂರ್ಣಗೊಂಡು ಕೆರೆ ತುಂಬಿಸುವ ಕಾರ್ಯ ಆಗಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕುಡಿಯುವ ನೀರಿಗೆಂದು ಯೋಜನೆಗೆ ಅನುಮೋದನೆ ಸಿಕ್ಕಿದ್ದು, ಈ ಭಾಗದ ಕೆರೆಗಳು ತುಂಬುವುದರಿಂದ ಅಂತರ್ಜಲ ಅಭಿವೃದ್ಧಿಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ.

ಧರ್ಮಪುರ ಭಾಗದ ಸುತ್ತಮುತ್ತಲಿನ ಹಳ್ಳಿಗಳ ಸಾವಿರಾರು ಎಕರೆ ಭೂಮಿಗೆ ಯೋಜನೆ ವರದಾನವಾಗಲಿದೆ.

Share this article