ಎಸ್ಸೆಸ್ಸೆಲ್ಸೀಲಿ ಗುಂಡ್ಲುಪೇಟೆ ಜಿಲ್ಲೆಗೆ ಪ್ರಥಮ ಸ್ಥಾನ: ಶಾಸಕ ಗಣೇಶ್‌ ಪ್ರಸಾದ್‌

KannadaprabhaNewsNetwork | Published : Sep 22, 2024 1:56 AM

ಸಾರಾಂಶ

ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗುಂಡ್ಲುಪೇಟೆ ತಾಲೂಕು ಪ್ರಥಮ ಸ್ಥಾನ ಬರಲು ಶಿಕ್ಷಕರ ಶ್ರಮ ಹಾಗೂ ಕರ್ತವ್ಯ ಪ್ರೇಮಕ್ಕೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಮೆಚ್ಚುಗೆ ವ್ಯಕ್ತಪಡಿಸಿದರು. ಗುಂಡ್ಲುಪೇಟೆಯಲ್ಲಿ ಶಿಕ್ಷಕರ ದಿನಾಚರಣೆ ಉದ್ಘಾಟನೆ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗುಂಡ್ಲುಪೇಟೆ ತಾಲೂಕು ಪ್ರಥಮ ಸ್ಥಾನ ಬರಲು ಶಿಕ್ಷಕರ ಶ್ರಮ ಹಾಗೂ ಕರ್ತವ್ಯ ಪ್ರೇಮಕ್ಕೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣದ ಗುರುಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ ಶಿಕ್ಷಕರ ದಿನಾಚರಣೆ ಉದ್ಘಾಟನೆ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾನು ಶಾಸಕನಾದ ಬಳಿಕ ೨ನೇ ಶಿಕ್ಷಕರ ದಿನಾಚರಣೆಯಲ್ಲಿ ಭಾಗವಹಿಸಿದ್ದೇನೆ. ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೇಲಿ ಜಿಲ್ಲೆಗೆ ಗುಂಡ್ಲುಪೇಟೆ ತಾಲೂಕು ಮೊದಲ ಸ್ಥಾನ ಬಂದಿರುವುದಕ್ಕೆ ಖುಷಿಯಾಗಿದೆ ಎಂದರು.

ತಂದೆ ತಾಯಿಗಿಂತ ಗುರು ಪ್ರಥಮ ಗುರುವಾಗಿದ್ದಾರೆ. ಶಿಕ್ಷಕರಿಂದಲೇ ಶಿಸ್ತು, ಸಮಯ ಪ್ರಜ್ಞೆ ಕಲಿಯಲು ಸಾಧ್ಯ. ಶಿಕ್ಷಕರು ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ತಿದ್ದಿ, ತೀಡಿ ಪಾಠ ಕಲಿಸುವ ಕೆಲಸ ನಿರಂತರವಾಗಿ ಮಾಡುತ್ತಿದ್ದಾರೆ. ಹಾಗಾಗಿ ಎಲ್ಲರಿಗಿಂತ ನಾನು ಶಿಕ್ಷಕರಿಗೆ ಹೆಚ್ಚಿನ ಗೌರವ ನೀಡುತ್ತೇನೆ ಎಂದರು.

ಸಮಸ್ಯೆಗಳಿರುವುದು ನಿಜ, ಶಿಕ್ಷಕರಿಗೆ ಸಮಸ್ಯೆಗಳೇನು ಇಲ್ಲ ಎಂಬಂತಿಲ್ಲ. ಶಿಕ್ಷಕರ ಸಮಸ್ಯೆಗಳ ಬಗೆಹರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ೭ನೇ ವೇತನ ಆಯೋಗ ಜಾರಿಗೆ ತರಲು ಮುಂದಾಗಿದೆ. ಹಳೇ ಪಿಂಚಣಿ ಪದ್ದತಿ ಜಾರಿಗೆ ತರಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂದರು.

ಶಿಕ್ಷಣ ನೀತಿ ಚೆನ್ನಾಗಿದೆ:

ದೇಶದಲ್ಲಿ ಶಿಕ್ಷಣ ನೀತಿ ಚೆನ್ನಾಗಿದೆ. ಶಿಕ್ಷಣ ನೀತಿ ಬದಲಾವಣೆ ಆಗುತ್ತಿದೆ ಎಂಬುದಕ್ಕೆ ನಾನು ಪ್ರೌಢ ಶಾಲೇಲಿ ಓದಿದ ಪಾಠಗಳೀಗ ಪ್ರಾಥಮಿಕ ಶಾಲೆಯ ಹಂತದಲ್ಲಿ ಮಕ್ಕಳು ಕಲಿಯುತ್ತಿದ್ದಾರೆ. ಶಿಕ್ಷಣದ ಮಹತ್ವ ಅರಿತು ಜನರು ಕೂಡ ಮಕ್ಕಳಿಗೆ ಶಿಕ್ಷಣ ಕಲಿಸಲು ಮುಂದಾಗಿದ್ದಾರೆ ಇದು ಖುಷಿ ವಿಚಾರ ಎಂದರು. ಸರ್ವಪಲ್ಲಿ ರಾಧಾಕೃಷ್ಣನ್‌ ಹಾಗೂ ಸಾವಿತ್ರಿ ಪುಲೆ ಅವರ ಆದರ್ಶಗಳನ್ನು ಶಿಕ್ಷಕರು ಮೈಗೂಡಿಸಿಕೊಂಡು ಹೋದರೆ ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣರಾಗಲಿದ್ದಾರೆ ಎಂದರು. ಎಚ್‌.ಎಸ್.ಮಹದೇವಪ್ರಸಾದ್‌ ಫೌಂಡೇಶನ್‌, ಹಾಲಹಳ್ಳಿ ಸಂಗಮ ಪ್ರತಿಷ್ಠಾನ ಕೂಡ ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಆದ ನೆರವು ನೀಡುತ್ತಿದೆ. ನಾನು ಕೂಡ ಶಿಕ್ಷಣಕ್ಕೆ ನನ್ನ ಕೈಲಾದ ಸೇವೆ ಮಾಡುತ್ತಿರುವೆ. ಒಟ್ಟಾರೆ ಶಿಕ್ಷಣದಿಂದ ಮಾತ್ರ ಮಕ್ಕಳು ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದು ಪ್ರತಿಪಾದಿಸಿದರು.

ಪುರಸಭೆ ನೂತನ ಅಧ್ಯಕ್ಷ ಕಿರಣ್‌ಗೌಡ ಮಾತನಾಡಿ, ಉಸಿರು ಕೊಡುವವಳು ತಾಯಿ, ಹೆಸರು ಕೊಡುವವನು ತಂದಯಾದರೆ ಆ ಹೆಸರನ್ನು ಉಸಿರು ಇರೋತನಕ ಕಾಪಾಡಿಕೊಂಡು ಹೋಗುವ ವಿದ್ಯೆ ನೀಡುವವನೇ ಶಿಕ್ಷಕ ಎಂದು ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ, ನಿರ್ಗಮಿತ ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶೇಖರ್‌, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್‌, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಂ.ಗುರುಪ್ರಸಾದ್‌, ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ನಾಗೇಂದ್ರ ಎ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷೆ ಹೀನಾ ಕೌಸರ್‌, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್‌, ಎಪಿಎಂಸಿ ಅಧ್ಯಕ್ಷ ಬಸವರಾಜು, ಪುರಸಭೆ ಸದಸ್ಯರಾದ ರಮೇಶ್‌, ಮೊಹಮದ್‌ ಇಲಿಯಾಸ್‌, ಎಲ್.ನಿರ್ಮಲ, ರಾಜಗೋಪಾಲ್‌, ಗೌಡ್ರ ಮಧು, ಶ್ರೀನಿವಾಸ್‌, ಎನ್.ಕುಮಾರ್‌, ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಬಿ.ರಾಜಶೇಖರ್‌, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ತಾಪಂ ಕಾರ್ಯನಿರ್ವಾಹಕ ಷಣ್ಮುಖ, ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಸತೀಶ್‌, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಡಾ.ಎಚ್.ಟಿ.ಸರೋಜ, ದೈಹಿಕ ಶಿಕ್ಷಣ ಪರಿವೀಕ್ಷಕ ಚಿಕ್ಕಮಲ್ಲಪ್ಪ ಸೇರಿದಂತೆ ವಿವಿಧ ಶಿಕ್ಷಕರ ಸಂಘಗಳ ಪದಾಧಿಕಾರಿಗಳು ಶಿಕ್ಷಕರು ಇದ್ದರು.

ವಿದೇಶದಲ್ಲಿ ಶಿಕ್ಷಕರಿಗೆ ಗೌರವ ಸಿಗುತ್ತಿಲ್ಲ: ಡಿಡಿಪಿಐ

೧೫ ವಿದೇಶಗಳಲ್ಲಿ ಶಿಕ್ಷಕರಿಗೆ ಗೌರವ, ಸ್ಥಾನ ಸಿಗುತ್ತಿಲ್ಲ ಆದರೆ ನಮ್ಮ ದೇಶದಲ್ಲಿ ಶಿಕ್ಷಕರಿಗೆ ಅಪಾರ ಗೌರವ ಸಿಗುತ್ತಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ (ಆಡಳಿತ) ರಾಮಚಂದ್ರ ರಾಜೇ ಅರಸ್‌ ಹೇಳಿದರು.ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿ, ಶಿಕ್ಷಕರು ಆತ್ಮಾವಲೋಕನ ಮಾಡಿಕೊಂಡು ಮಕ್ಕಳು ಗುರಿ ಮುಟ್ಟುವ ತನಕ ಕೆಲಸ ಮಾಡಿದರೆ ಶಿಕ್ಷಕರ ದಿನಾಚರಣೆಗೊಂದು ಅರ್ಥ ಬರಲಿದೆ ಎಂದರು. ವಿದೇಶಗಳಲ್ಲಿ ಅನುಭವದ ಹೆಸರಲ್ಲಿ ಶ್ರೇಷ್ಠತೆ ಇದೆ. ನಮ್ಮಲಿ ಜ್ಞಾನದ ಆಧಾರದ ಮೇಲೆ ಶ್ರೇಷ್ಟತೆ ಸಿಗುತ್ತಿದೆ. ಸರ್ಕಾರಿ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳಿಗೆ ಶಿಕ್ಷಕರು ಮೋಸ, ಅನ್ಯಾಯ ಆಗದೆ ಹಾಗೇ ಶಿಕ್ಷಣ ಕೊಡುವ ಕೆಲಸ ಮಾಡಲಿ ಎಂದು ಸಲಹೆ ನೀಡಿದರು. ಶಾಸಕ ಗಣೇಶ್‌ ಪ್ರಸಾದ್‌ ಜನಪ್ರಿಯ, ಜನಸ್ನೇಹಿ ಶಾಸಕ ಎನ್ನುತ್ತಿದ್ದಾರೆ. ಇನ್ನೊಂದು ಹೆಜ್ಜೆ ಮುಂದೆ ಹೋದರೆ ಶಿಕ್ಷಕ ಸ್ನೇಹಿ ಶಾಸಕರಾಗಿದ್ದಾರೆ ಎಂದು ಹೊಗಳಿದರು.

ಮಕ್ಕಳಿಗೆ ಶಿಕ್ಷಕರೇ ರೋಲ್‌ ಮಾಡೆಲ್‌:

ಮಕ್ಕಳಿಗೆ ಶಿಕ್ಷಕರೇ ರೋಲ್‌ ಮಾಡೆಲ್‌, ಸೂಪರ್‌ ಹೀರೋ ಎಂದು ಚಿಂತಕ ಪೃಥ್ವಿರಾಜ್‌ ಹಾಲಹಳ್ಳಿ ಹೇಳಿದರು. ಶಿಕ್ಷಕರು ವೃತ್ತಿ, ಪ್ರವೃತ್ತಿಯಲ್ಲೂ ಎಂಜಾಯ್‌ ಮಾಡಬೇಕು ಎಂದರು.

ನಿವೃತ್ತಿಗೊಂಡ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರಿಗೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಮೈಸೂರು ಪೇಟ, ಶಾಲು, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.

ಶಿಕ್ಷಕರಿಗೆ ಭೋಜನ, ಫೈಲ್‌ ಕೊಡುಗೆ:

ಗುಂಡ್ಲುಪೇಟೆ ಶಿಕ್ಷಕರ ದಿನಾಚರಣೆಯಲ್ಲಿ ಭಾಗವಹಿಸಿದ್ದ ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದ ಸಾವಿರಾರು ಮಂದಿ ಶಿಕ್ಷಕರು ಹಾಗೂ ಅತಿಥಿಗಳಿಗೆ ಮಧ್ಯಾಹ್ನದ ಭೋಜನ ಹಾಗೂ ಫೈಲ್‌ನ್ನು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಕೊಡುಗೆ ನೀಡಿದರು.

Share this article