ಭದ್ರಾ ಮೇಲ್ದಂಡೆ, ನೇರ ರೈಲು ಮಾರ್ಗಕ್ಕೆ ಮೊದಲ ಆಧ್ಯತೆ

KannadaprabhaNewsNetwork | Published : Jun 14, 2024 1:06 AM

ಸಾರಾಂಶ

ಸಂಸದ ಗೋವಿಂದ ಕಾರಜೋಳ ಗುರುವಾರ ಕಬಿರಾನಂದ ಆಶ್ರಮಕ್ಕೆ ಭೇಟಿ ನೀಡಿ ಶಿವಲಿಂಗಾನಂದ ಸ್ವಾಮೀಜಿಗಳ ಆಶೀರ್ವಾದ ಪಡೆದರು.

ವಿವಿಧ ಮಠಗಳಿಗೆ ನೂತನ ಸಂಸದ ಗೋವಿಂದ ಕಾರಜೋಳ ಭೇಟಿ ಕನ್ನಡಪ್ರಭವಾರ್ತೆ, ಚಿತ್ರದುರ್ಗ

ಭದ್ರಾ ಮೇಲ್ದಂಡೆ ಹಾಗೂ ನೇರ ರೈಲು ಮಾರ್ಗ ಯೋಜನೆಗಳ ಶೀಘ್ರ ಕಾರ್ಯಾನುಷ್ಠಾನ ಮಾಡುವುದು ನನ್ನ ಮೊದಲ ಆಧ್ಯತೆ ಎಂದು ನೂತನ ಸಂಸದ ಗೋವಿಂದ ಕಾರಜೋಳ ಹೇಳಿದರು.

ಗುರುವಾರ ಚಿತ್ರದುರ್ಗದ ವಿವಿಧ ಮಠಗಳಿಗೆ ಭೇಟಿ ನೀಡಿ ಮಠಾದೀಶರಿಂದ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಚಿತ್ರದುರ್ಗ ಜಿಲ್ಲೆ ಬರದ ನಾಡಾಗಿದ್ದು ನೀರಿನ ಅವಶ್ಯಕತೆ ಇದೆ. ಈ ಹಿನ್ನಲೆ ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆಯ ರಾಷ್ಟ್ರೀಯ ಯೋಜನೆಯಾಗಿ ಪರಿಗಣಿಸಿ ₹5300 ಕೋಟಿ ಅನುದಾನ ನೀಡುವುದಾಗಿ ಹೇಳಿದೆ. ಈ ಅನುದಾನವನ್ನು ಬಿಡುಗಡೆ ಮಾಡಿಸುವುದು ನನ್ನ ಮೊದಲ ಕರ್ತವ್ಯ. ಚಿತ್ರದುರ್ಗ ಲೋಕಸಬಾ ಕ್ಷೇತ್ರ 3000ಕ್ಕೂ ಹೆಚ್ಚು ಹಳ್ಳಿಗಳನ್ನು ಹೊಂದಿದೆ. ರೈತಾಪಿ ವರ್ಗ ಕೃಷಿ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನಲೆ ನೀರಾವರಿಗೆ ಹೆಚ್ಚಿನ ಒತ್ತನ್ನು ನೀಡಲಾಗುವುದೆಂದು ತಿಳಿಸಿದರು.

ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದಾಗಲೇ ಭದ್ರಾ ಮೇಲ್ದಂಡೆಗೆ ರಾಷ್ಟ್ರೀಯ ಯೋಜನೆ ಪ್ರಸ್ತಾಪ ಹೋಗಿತ್ತು. ಕೇಂದ್ರದ ಮೇಲೆ ಒತ್ತಡ ಹಾಕಿ ರಾಷ್ಟ್ರೀಯ ಯೋಜನೆಯಾಗಿ ಪರಿಗಣಿಸಲು ಪ್ರಯತ್ನ ಮಾಡಿದ ಪರಿಣಾಮ 5300 ಕೋಟಿ ರು. ಆಯವ್ಯಯದಲ್ಲಿ ಘೋಷಿಸಲಾಗಿತ್ತು. ವಿಧಾನಸಭೆ ಚುನಾವಣೆ ನಂತರ ನಮ್ಮ ಸರ್ಕಾರ ಬರಲಿಲ್ಲ, ಹಣ ಬಿಡುಗಡೆ ಮಾಡಿಸಲು ರಾಜ್ಯ ಸರ್ಕಾರ ಪ್ರಮಾಣಿಕ ಪ್ರಯತ್ನ ಮಾಡಲಿಲ್ಲ. ಹಾಗಾಗಿ ನನ್ನ ಮೊದಲ ಆಧ್ಯತೆ ₹5300 ಕೋಟಿ ಬಿಡುಗಡೆ ಮಾಡಿಸುವುದಾಗಿದೆ ಎಂದು ಹೇಳಿದರು.

ಕ್ಷೇತ್ರದ ಅನೇಕ ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆ ಇದೆ. ಜಲ ಜೀವನ ಮಿಷನ್ ಅಡಿ ತೆಗೆದುಕೊಳ್ಳಲು ನಿಯಾಮಾನುಸಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲು ರಾಜ್ಯ ಸರ್ಕಾರಕ್ಕೆ ವಿನಂತಿ ಮಾಡುತ್ತೇನೆ ಎಂದು ಕಾರಜೋಳ ಹೇಳಿದರು. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಗ್ರಾಮಾಂತರ ಅಧ್ಯಕ್ಷ ಕಲ್ಲೇಶಯ್ಯ, ವಕ್ತಾರರಾದ ನಾಗರಾಜ್ ಬೇದ್ರೇ, ದಗ್ಗೆ ಶಿವಪ್ರಕಾಶ್, ಕಬೀರಾನಂದಾಶ್ರಮದ ಕಾರ್ಯದರ್ಶಿ ವಿ.ಎಲ್.ಪ್ರಶಾಂತ, ಗಣಪತಿ ಶಾಸ್ತ್ರಿ, ನಗರಾಭಿವೃಧ್ದಿ ಪಾಧಿಕಾರದ ಮಾಜಿ ಸದಸ್ಯ ಓಂಕಾರ್ ಇದ್ದರು.

Share this article