ಕೂಡ್ಲಿಗಿ: ಹಿಂದೆಂದಿಗಿಂತಲೂ ಈ ಬಾರಿಯ ತಾಪಮಾನಕ್ಕೆ ಜನತೆ 4 ತಿಂಗಳಿಂದ ಜರ್ಝರಿತರಾಗಿದ್ದರು. ಶನಿವಾರ ತಾಲೂಕಿನಾದ್ಯಾಂತ ಸುರಿದ ಮಳೆಗೆ ಜನತೆ ನಿಟ್ಟುಸಿರು ಬಿಟ್ಟರು. ಬೆಂಕಿಯಂತಹ ಸುಡುಬಿಸಿಲು, ಬಿಸಿಗಾಳಿಗೆ ರೋಸಿಹೋಗಿದ್ದ ಜನತೆಗೆ ಅಶ್ವಿನಿ ಮಳೆ ಜನತೆಗೆ ಸಂತಸ ತಂದಿತು.
ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣ ಸೇರಿದಂತೆ ಕಾನಹೊಸಹಳ್ಳಿ, ಗುಡೇಕೋಟೆ 3 ಹೋಬಳಿಗಳ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ಸಾಧಾರಣ ಮಳೆಯಾಗಿದ್ದು, ಯಾವುದೇ ಅವಘಡ ಸಂಭವಿಸಿಲ್ಲ.ವರ್ಷಧಾರೆ ಆರಂಭದಲ್ಲಿ ಮಳೆಯಾಗಿದ್ದರಿಂದ ರೈತರ ಸಂತಸಕ್ಕೆ ಕಾರಣವಾಗಿದೆ. ಬೇಸಿಗೆಯಾಗಿದ್ದರಿಂದ ಕುಡಿವ ನೀರಿನ ಕೊರತೆಯಿಂದ ಜನರು ಮತ್ತು ಜಾನುವಾರು ತತ್ತರಿಸಿ ಹೋಗಿದ್ದರು. ಈಗ ಆರಂಭದಲ್ಲಿ ಮಳೆ ಬಂದಿದ್ದರಿಂದ ತುಸು ಸಂತಸಕ್ಕೆ ಕಾರಣವಾಗಿದೆ. ತಾಪಮಾನವು ದಿನಮಟ್ಟಿಗೆ ತಾಂಪಾಗಿದೆ. ಗುಡೇಕೋಟೆ ಹೋಬಳಿಯ ಭೀಮಸಮುದ್ರ, ಕರಡಿಹಳ್ಳಿ, ಚಿಕ್ಕಜೋಗಿಹಳ್ಳಿ, ಕಡಾಕೊಳ್ಳ ಸೇರಿ ಹತ್ತಾರು ಹಳ್ಳಿಗಳಲ್ಲಿ ಮಳೆಯಾದರೆ, ಇನ್ನು ಕಾನಹೊಸಹಳ್ಳಿ ಹೋಬಳಿಯ ಬಣವಿಕಲ್ಲು, ಹುಲಿಕೆರೆ, ಕಾನಾಮಡುಗು, ಆಲೂರು, ಬಯಲುತುಂಬರಗುದ್ದಿ, ರಂಗನಾಥಹಳ್ಳಿ, ಸೂರವ್ವನಹಳ್ಳಿ ಸೇರಿ 15ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸಾಧಾರಣ ಮಳೆಯಾಗಿದೆ. ಆದರೆ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಬಣವಿಕಲ್ಲು ಬಳಿ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಮಳೆ ಬಂದ ನೀರು ನಿಂತಿದ್ದರಿಂದ ವಾಹನ ಸವಾರರಿಗೆ, ಚಾಲಕರಿಗೆ ಅಪಾಯಕ್ಕೆ ಆಹ್ವಾನ ಎಂಬಂತೆ ಇತ್ತು. ರಾಷ್ಟ್ರೀಯ ಹೆದ್ದಾರಿಯವರು ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಿದ್ದರಿಂದ ಪ್ರತಿವರ್ಷ ಮಳೆಗಾಲ ಪ್ರಾರಂಭವಾದರೆ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಸಾಮಾನ್ಯವಾಗುತ್ತವೆ.ಹರ್ಷತಂದ ವರ್ಷಧಾರೆ:
ಕುರುಗೋಡು: ತಾಲೂಕಿನ ಬಾದನಹಟ್ಟಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶನಿವಾರ ಮಧ್ಯಾಹ್ನ ೨೫ ನಿಮಿಷಗಳ ಕಾಲ ಮಳೆ ಸುರಿಯಿತು.ಸಾಧಾರಣವಾಗಿ ಮಳೆ ಸುರಿದರೂ ಮೋಡ ಮುಸುಕಿದ ವಾತಾವರಣ ಮುಂದುವರಿದಿದ್ದು, ವಾತಾವರಣದಲ್ಲಿ ತಂಪು ಮೂಡಿದೆ.ತೀವ್ರ ಬಿಸಿಲಿನ ತಾಪಮಾನಕ್ಕೆ ತತ್ತರಿಸಿದ್ದ ಜನರು ಸಾಧಾರಣ ಮಳೆಯಿಂದಲೂ ಹರ್ಷದೊಂಡಿದ್ದಾರೆ.