ಕುಷ್ಟಗಿ ಸಂತೆ ಬಯಲಿನಲ್ಲೇ ಮೀನು, ಮಾಂಸ ಮಾರಾಟ!

KannadaprabhaNewsNetwork |  
Published : Aug 11, 2025, 12:34 AM IST
ಫೋಟೋ10ಕೆಎಸಟಿ1: ಕುಷ್ಟಗಿ ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ ಮಳೆಯು ಸುರಿಯುತ್ತಿರುವ ಹಿನ್ನಲೆಯಲ್ಲಿ ಛತ್ರಿ ಹಾಗೂ ತಾಡಪಲ್ ಕಟ್ಟಿಕೊಂಡು ವ್ಯಾಪಾರ ವಹಿವಾಟು ನಡೆಸಿದರು. | Kannada Prabha

ಸಾರಾಂಶ

ಮಳೆಗಾಲದ ಸಂದರ್ಭದಲ್ಲಿ ರಸ್ತೆ ಪಕ್ಕದಲ್ಲಿ ತರಕಾರಿ ಮಾರಾಟ ಮಾಡುವವರು ಹಲವು ರೀತಿಯ ತೊಂದರೆ ಅನುಭವಿಸುತ್ತಾರೆ

ಪರಶಿವಮೂರ್ತಿ ದೋಟಿಹಾಳ ಕುಷ್ಟಗಿ

ಪಟ್ಟಣದ ಸಂತೆ ಬಯಲಿನಲ್ಲಿಯೇ ಮೀನು, ಮಾಂಸವನ್ನು ತೆರೆದಿಟ್ಟುಕೊಂಡು ಮಾರಾಟ ಮಾಡುತ್ತಿದ್ದರಿಂದ ಸಂತೆಗೆ ಬರುವ ನಾಗರೀಕರು ಮೂಗುಮುಚ್ಚಿಕೊಂಡು ಅಡ್ಡಾಡುತ್ತಾರೆ. ಧೂಳು, ಕಸ-ಕಟ್ಟಿ ಮಿಶ್ರಿತ ಮೀನು, ಮಾಂಸ ಮಾರಾಟ ಮಾಡಲಾಗುತ್ತಿದೆ.

ಪ್ರತಿ ದಿನ ಮಾರುಕಟ್ಟೆ ಹಾಗೂ ಭಾನುವಾರಕ್ಕೊಮ್ಮೆ ವಾರದ ಸಂತೆ ನಡೆಯುತ್ತದೆ. ಆದರೆ, ಸ್ವಚ್ಛತೆ ಇಲ್ಲದ ಕಾರಣ ವ್ಯಾಪಾರಸ್ಥರು ಮತ್ತು ಗ್ರಾಹಕರು ಚಿತ್ರ ಹಿಂಸೆ ಅನುಭವಿಸುವಂತಾಗಿದೆ. ಬಸವೇಶ್ವರ ವೃತ್ತದಿಂದ ಸಂತೆ ಮಾರುಕಟ್ಟೆ ವರೆಗೂ ರಸ್ತೆಯಲ್ಲಿ ವ್ಯಾಪಾರಸ್ಥರು ತರಕಾರಿ, ಹಣ್ಣು ಹಂಪಲು ಇಟ್ಟುಕೊಂಡು ಮಾರಾಟ ಮಾಡುತ್ತಾರೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಮಳೆಗಾಲದ ಸಂದರ್ಭದಲ್ಲಿ ರಸ್ತೆ ಪಕ್ಕದಲ್ಲಿ ತರಕಾರಿ ಮಾರಾಟ ಮಾಡುವವರು ಹಲವು ರೀತಿಯ ತೊಂದರೆ ಅನುಭವಿಸುತ್ತಾರೆ. ಮಾರುಕಟ್ಟೆಯಲ್ಲಿ ಒಳ ರಸ್ತೆಗಳಿಲ್ಲದ ಕಾರಣ ಚರಂಡಿ ನೀರು ನಿಂತಲ್ಲೇ ನಿಂತು ದುರ್ವಾಸನೆ ಬೀರುತ್ತಿದ್ದು, ಗ್ರಾಹಕರು ಮತ್ತು ವ್ಯಾಪಾರಿಗಳು ಮೂಗು ಮುಚ್ಚಿಕೊಂಡು ವ್ಯಾಪಾರ ವಹಿವಾಟು ನಡೆಸಬೇಕಾದ ಅನಿವಾರ್ಯತೆ ಇದೆ.

ಭಾನುವಾರ ಬೆಳಗ್ಗೆಯಿಂದ ಸಂಜೆವರೆಗೂ ಮಳೆ ಸುರಿದ ಪರಿಣಾಮ ಸಂತೆ ಮಾರುಕಟ್ಟೆಯಲ್ಲಿ ಬಯಲಿನಲ್ಲೇ ವ್ಯಾಪಾರಸ್ಥರು ಛತ್ರಿ ಹಾಗೂ ತಾಡಪಲ್ ಕಟ್ಟಿಕೊಂಡು ತರಕಾರಿ ವ್ಯಾಪಾರ ಮಾಡಿದರೆ, ಗ್ರಾಹಕರು ಛತ್ರಿ ಹಿಡಿದುಕೊಂಡು ತರಕಾರಿ ಖರೀದಿ ಮಾಡಿದರು.

ಸೌಲಭ್ಯ ವಂಚಿತ: ಅದೇ ಕಾಲಕ್ಕೆ ಮೂಲಸೌಕರ್ಯ ವಂಚಿತ ಸಂತೆ ಇದು. ಮಾರುಕಟ್ಟೆಯಲ್ಲಿ ಶೌಚಾಲಯ, ಕುಡಿಯುವ ನೀರು, ಸೂಕ್ತ ಸ್ಥಳ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿದ್ದು, ಸೌಲಭ್ಯ ಒದಗಿಸುವಂತೆ ಆಗ್ರಹ ಕೇಳಿ ಬರುತ್ತಿದೆ.

ತಾಲೂಕು ಕೇಂದ್ರವಾದ ಕುಷ್ಟಗಿ ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಕನಿಷ್ಠ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ರಸ್ತೆಗಳು ಬಿಡಾಡಿ ದನ, ನಾಯಿಗಳ ಅಡ್ಡೆಗಳಾಗಿವೆ.

ನೆಲದ ಬಾಡಿಗೆ ವಸೂಲಿ:ಪುರಸಭೆ ಮಾರುಕಟ್ಟೆಗೆ ಸೌಲಭ್ಯ ಕೊಡದೆ ಇದ್ದರೂ ಸಹಿತ ಇಲ್ಲಿ ಬರುವ ತರಕಾರಿ, ಹಣ್ಣು ಹಂಪಲು ವ್ಯಾಪಾರಸ್ಥರಿಂದ ನೆಲದ ಬಾಡಿಗೆಯ ರೂಪದಲ್ಲಿ ಹಣ ವಸೂಲಿ ಮಾಡುತ್ತಿದ್ದು, ಸಮರ್ಪಕ ಸೌಲಭ್ಯ ನೀಡುವುದು ಅವರ ಕರ್ತವ್ಯವಾಗಿದೆ ಎನ್ನುತ್ತಾರೆ ಗ್ರಾಹಕ ಸಂಗಮೇಶ ಹಿರೇಮಠ.

ನಾವು ಹಳ್ಳಿಯಿಂದ ಕಾಯಿಪಲ್ಯೆ ಮಾರಾಟ ಮಾಡಲು ಬರುತ್ತೇವೆ, ಜಾಗ ಸಿಕ್ಕರೆ ಒಳಗಡೆ ಕುಳಿತುಕೊಂಡು ವ್ಯಾಪಾರ ಮಾಡುತ್ತೇವೆ. ಇಲ್ಲದಿದ್ದರೆ ರಸ್ತೆಯಲ್ಲಿ ಕುಳಿತು ವ್ಯಾಪಾರ ಮಾಡುವುದು ಅನಿವಾರ್ಯವಾಗಿದೆ ಎಂದು ತರಕಾರಿ ವ್ಯಾಪಾರಸ್ಥೆ ಮಹಿಳೆ ಹನಮವ್ವ ಮದಲಗಟ್ಟಿ ತಿಳಿಸಿದ್ದಾರೆ.

ಮಳೆಯಾದರೆ ಸಂತೆ ಮಾರುಕಟ್ಟೆ ಕೆಸರುಗದ್ದೆಯಾಗುತ್ತದೆ. ಇದರಲ್ಲಿ ಜನರು ಸಂತೆ ಮಾಡಲು ಹರಸಾಹಸ ಪಡಬೇಕಾಗುತ್ತದೆ. ಉತ್ತಮ ಮಾರುಕಟ್ಟೆ ನಿರ್ಮಿಸಿ ಎಲ್ಲರಿಗೂ ಅನುಕೂಲ ಮಾಡಬೇಕು. ಸಾಕಷ್ಟು ಜನ ತಳ್ಳುಗಾಡಿಯಲ್ಲಿ ನಡುರಸ್ತೆಯಲ್ಲಿ ನಿಂತು ವ್ಯಾಪಾರ ಮಾಡುವುದರಿಂದ ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗುತ್ತಿದ್ದು, ಪುರಸಭೆ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ವ್ಯಾಪಾರಸ್ಥ ನಿಂಗಪ್ಪ ಜಿಗೇರಿ ತಿಳಿಸಿದ್ದಾರೆ.

PREV

Recommended Stories

ಉಪರಾಷ್ಟ್ರಪತಿ ಹುದ್ದೆ ರೇಸಲ್ಲಿ ರಾಜ್ಯ ಗೌರ್ನರ್‌ ಗೆಹಲೋತ್‌?
ಮಕ್ಕಳಲ್ಲಿ ಬಾಲ್ಯದಿಂದಲೇ ದೇಶಪ್ರೇಮ ತುಂಬಿ