ರೋಣ: ಸಿಎಂ ಸಿದ್ದರಾಮಯ್ಯ , ಡಿಸಿಎಂ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಜಾರಿಗೆ ತರಲಾದ ಪಂಚ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿದ್ದು, ಈ ಯೋಜನೆಗಳು ಎಂದಿಗೂ ನಿಲ್ಲುವುದಿಲ್ಲ. ಈ ಕುರಿತು ಜನರು ಯಾವುದೇ ರೀತಿಯ ಸಂದೇಹ ಪಡಬಾರದು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅಲ್ಪಸಂಖ್ಯಾತರ ಇಲಾಖೆ ಅನುದಾನದಲ್ಲಿ ₹20 ಲಕ್ಷ ವೆಚ್ಚದಲ್ಲಿ ಶಾಂತಗೇರಿ ಗ್ರಾಮದ ಅಲ್ಪಸಂಖ್ಯಾತರ ಕಾಲನಿಯಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ, ಬಳಿಕ ಜರುಗಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನಿರೀಕ್ಷಿತ ಬೆಂಬಲ ಸಿಗದೇ ಇರುವುದರಿಂದ ಕೆಲವು ಮಂತ್ರಿಗಳು, ಶಾಸಕರು ಗ್ಯಾರಂಟಿ ಸ್ಥಗಿತ ಮಾಡುವಂತೆ ಒತ್ತಾಯಿಸಿದರು. ಆದರೆ ಸಿಎಂ ಸಿದ್ದರಾಮಯ್ಯ ಅವರು ನುಡಿದಂತೆ ನಡೆಯುವುದಾಗಿ, ಗ್ಯಾರಂಟಿಯನ್ನೂ ಯಾವುದೇ ಕಾರಣಕ್ಕೂ ಸ್ಥಗಿತ ಮಾಡುವುದಿಲ್ಲ ಎಂದು ಹೇಳಿದ್ದಾರೆ ಎಂಬುದನ್ನು ಜನತೆ ಮನವರಿಕೆ ಮಾಡಿಕೊಳ್ಳಬೇಕು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಇರುವವರಗೂ ಗ್ಯಾರಂಟಿ ನಿಲ್ಲುವುದಿಲ್ಲ. ಕಳೆದ ವರ್ಷ ಗ್ಯಾರಂಟಿಗೆ ಹೆಚ್ಚಿನ ಹಣ ಮೀಸಲಿರಿಸಿದ್ದರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ನಿರೀಕ್ಷಿತ ಅನುದಾನ ಸಿಗಲಿಲ್ಲ. ಆದರೆ ಈ ವರ್ಷ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು. ಈ ವರ್ಷದ ಆಯ-ವ್ಯಯದಲ್ಲಿನ ಹಣಕಾಸಿನ ವ್ಯವಸ್ಥೆ ನೋಡಿಕೊಂಡು ಗ್ರಾಮಗಳಿಗೆ ಬೇಕಾದ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.ಗ್ಯಾರಂಟಿ ಯೋಜನೆ ಜತೆಗೆ ಬಡ ಜನತೆಯ ಶ್ರೇಯೋಭಿವೃದ್ಧಿಗೆ ಇನ್ನೂ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ಧರಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ ಪ್ರತಿಯೊಂದು ಗ್ರಾಮಕ್ಕೂ ಅಗತ್ಯವಿರುವ ಸೌಲಭ್ಯಗಳನ್ನು ಹೆಚ್ಚು ಕಲ್ಪಿಸಲಾಗುವುದು. ಎಸ್‌ಸಿಪಿ, ಟಿಎಸ್‌ಪಿ ಅನುದಾನವನ್ನು ಬಿಜೆಪಿ ಸರ್ಕಾರ ಇದ್ದಾಗ ಸ್ಥಗಿತ ಮಾಡಿತು. ಈಗ ಕಾಂಗ್ರೆಸ್ ಸರ್ಕಾರ ಅನುದಾನ ಕಾಯ್ದಿರಿಸಲಿದೆ ಎಂದರು.
ಸರ್ಜಾಪುರ ಗ್ರಾಮದಲ್ಲಿ 2019-20ನೇ ಸಾಲಿನ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ನಿರ್ಮಾಣಗೊಂಡ ಅಂಗನವಾಡಿ ನೂತನ ಕೊಠಡಿಯನ್ನು ಶಾಸಕ ಜಿ.ಎಸ್. ಪಾಟೀಲ್ ಉದ್ಘಾಟಿಸಿದರು.ಜಿಪಂ ಮಾಜಿ ಉಪಾಧ್ಯಕ್ಷೆ ಮಂಜುಳಾ ಹುಲ್ಲಣ್ಣವರ, ತಾಪಂ ಮಾಜಿ ಸದಸ್ಯ ಪ್ರಭು ಮೇಟಿ, ವೀರಣ್ಣ ಶೆಟ್ಟರ್, ಮೋಹನ ಹುಲ್ಲಣ್ಣವರ, ಹನುಮಂತಪ್ಪ ಉಸಲಕೊಪ್ಪದ, ಶರಣಗೌಡ ಪಾಟೀಲ, ಬಸವರಾಜ ಬೆನಕನವಾರಿ, ಶಾಂತಪ್ಪ ಜಾಲಿಹಾಳ, ದಾವಲಸಾಬ್ ಪಿಂಜಾರ, ಬಾಲಪ್ಪ ಮಾದರ, ಯಮನೂರಪ್ಪ ಹುಲ್ಲಣ್ಣಚವರ, ಅಂದಪ್ಪ ನಾಗನೂರ, ಖಾದೀರಶಬ ಪಿಂಜಾರ ಉಪಸ್ಥಿತರಿದ್ದರು.